ಚೆಕ್‌ಬೌನ್ಸ್‌ ಪ್ರಕರಣ: ದೆಹಲಿ ಹೈಕೋರ್ಟ್‌ನಿಂದ ಶಿಕ್ಷೆ ಅಮಾನತು; ನಟ ರಾಜ್‌ಪಾಲ್‌ ಯಾದವ್‌ ಬಿಡುಗಡೆ

ಬಾಲಿವುಡ್ ನಟನ ಶಿಕ್ಷೆಯನ್ನು ಮಾರ್ಚ್ 18 ರವರೆಗೆ ಅಮಾನತುಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಹೇಳಿದ್ದಾರೆ.
Rajpal Yadav and Delhi High Court
Rajpal Yadav and Delhi High Court
Published on

ಬಾಲಿವುಡ್‌ ಹಾಸ್ಯ ನಟ ರಾಜ್‌ಪಾಲ್‌ ಯಾದವ್‌ ಆರೋಪಿಯಾಗಿರುವ ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ರಾಜ್‌ಪಾಲ್‌ ಯಾದವ್‌ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಮಾರ್ಚ್ 18 ರವರೆಗೆ ಅಮಾನತುಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಆದೇಶಿಸಿದರು.

Also Read
ಚೆಕ್ ಬೌನ್ಸ್ ಪ್ರಕರಣ: ನಟ ರಾಜಪಾಲ್ ಯಾದವ್‌ಗೆ ಇಂದೇ ಶರಣಾಗುವಂತೆ ದೆಹಲಿ ಹೈಕೋರ್ಟ್‌ ತಾಕೀತು

ರಾಜಪಾಲ್‌ ಯಾದವ್ ಅವರು ದೂರುದಾರರಿಗೆ ₹1.5 ಕೋಟಿ ಪಾವತಿಸಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿತು. ಅಲ್ಲದೆ ಫೆಬ್ರವರಿ 19ರಂದು ತಮ್ಮ ಸೋದರ ಮಗಳ ಮದುವೆ ಇರುವುದಾಗಿ ಯಾದವ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

“ಮುಂದಿನ ವಿಚಾರಣೆ ದಿನದವರೆಗೆ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ... ಯಾದವ್ ನ್ಯಾಯಾಲಯಕ್ಕೆ ಖುದ್ದು ಅಥವಾ ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) ಮೂಲಕ ಹಾಜರಾಗಬೇಕು. ಇದರಲ್ಲಿ ಯಾವುದೇ ವ್ಯತ್ಯಯ ಉಂಟಾಗುವಂತಿಲ್ಲ,” ಎಂದು ನ್ಯಾಯಾಲಯ ತಾಕೀತು ಮಾಡಿತು.

ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಯಾದವ್ ದೋಷಿ ಎಂದು 2024ರ ಮೇ ತಿಂಗಳಲ್ಲಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ಇದಕ್ಕಾಗಿ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ, ಅವರು ಹಣ ಪಡೆದಿದ್ದ ನಿರ್ಮಾಣ ಕಂಪನಿಯೊಂದಿಗೆ ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಆದರೆ ಯಾದವ್ ಅವರು ಆ ಭರವಸೆ ಈಡೇರಿಸಲು ವಿಫಲರಾಗಿದ್ದರು.

Also Read
ಸಮ್ಮತಿಯ ಲೈಂಗಿಕತೆ, ಸಂತ್ರಸ್ತೆಯನ್ನು ವಿವಾಹವಾಗಿರುವ ಆರೋಪಿ: ಪೋಕ್ಸೊ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಹೇಳಿದ್ದೇನು?

ಒಟ್ಟು ₹2.5 ಕೋಟಿ ಬಾಕಿಯನ್ನು ಎರಡು ಹಂತಗಳಲ್ಲಿ ಪಾವತಿಸುವುದಾಗಿ (₹40 ಲಕ್ಷ ಮತ್ತು ₹2.1 ಕೋಟಿ) ಯಾದವ್‌ ತಿಳಿಸಿದ್ದರೂ, ನಿಗದಿತ ಅವಧಿಯೊಳಗೆ ಯಾವುದೇ ಪಾವತಿ  ಮಾಡಿರಲಿಲ್ಲ. ಡಿಮ್ಯಾಂಡ್ ಡ್ರಾಫ್ಟ್‌ನಲ್ಲಿ ತಪ್ಪು ಸಂಭವಿಸಿದೆ ಎಂದು ಯಾದವ್‌ ನೀಡಿದ್ದ ಕಾರಣವನ್ನು ನ್ಯಾಯಾಲಯ ತಿರಸ್ಕರಿಸಿತು. ಆ ತಪ್ಪನ್ನು ಸರಿಪಡಿಸಲು ಯಾದವ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೆರಳು ಮಾಡಿತ್ತು.

ಹಣ ಪಾವತಿ ಮಾಡದೇ ಪದೇ ಪದೇ ಸಮಯ ಕೇಳುತ್ತಾ ನ್ಯಾಯಾಲಯದ ವಿಚಾರಣೆಯನ್ನು ಮುಂದೂಡುವ ಪ್ರಯತ್ನ ಮಾಡಿದ ಯಾದವ್ ಅವರ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಂತೆಯೇ ಅವರ ಮನವಿ ತಿರಸ್ಕರಿಸಿ ಶರಣಾಗಲು ಆದೇಶಿಸಿತ್ತು. ಅದಾಗ್ಯೂ ಫೆಬ್ರವರಿ 4ರಂದು ಅವರು ಮತ್ತೊಮ್ಮೆ ಅವಧಿ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನೂ ನ್ಯಾಯಾಲಯ ತಿರಸ್ಕರಿಸಿತ್ತು. ಕೊನೆಗೆ, ಫೆಬ್ರವರಿ 5ರಂದು ಅವರು ಶರಣಾಗಿದ್ದರು.

Kannada Bar & Bench
kannada.barandbench.com