

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜಪಾಲ್ ಯಾದವ್ ಅವರು ಜೈಲು ಅಧೀಕ್ಷಕರ ಮುಂದೆ ಶರಣಾಗಲು ನೀಡಿದ್ದ ಗಡುವು ವಿಸ್ತರಿಸಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದ್ದು ಸಂಜೆ ನಾಲ್ಕು ಗಂಟೆಯೊಳಗೆ ಪೊಲೀಸರಿಗೆ ಶರಣಾಗುವಂತೆ ತಾಕೀತು ಮಾಡಿದೆ [ರಾಜ್‌ಪಾಲ್ ನೌರಂಗ್ ಯಾದವ್ ಮತ್ತಿತರರು ಹಾಗೂ ಮುರಳಿ ಪ್ರಾಜೆಕ್ಟ್ಸ್ ಪ್ರೈ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ]
ಫೆಬ್ರವರಿ 4ರೊಳಗೆ ಜೈಲು ಅಧೀಕ್ಷಕರ ಮುಂದೆ ಶರಣಾಗುವಂತೆ ಯಾದವ್ ಅವರಿಗೆ ಸೋಮವಾರ ನಿರ್ದೇಶನ ನೀಡಲಾಗಿತ್ತು. ಆದರೆ ಶರಣಾಗುವ ಬದಲು ಅವರು ಗಡುವು ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದರು.
ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರು, ನ್ಯಾಯಾಲಯಕ್ಕೆ ನೀಡಿದ್ದ ಯಾವುದೇ ಭರವಸೆಗಳನ್ನು ಯಾದವ್ ಪಾಲಿಸದ ಹಿನ್ನೆಲೆಯಲ್ಲಿಯೇ ಶರಣಾಗುವ ಆದೇಶ ನೀಡಲಾಗಿದೆ ಎಂದು ಹೇಳಿದರು.
“ನೀವು ಮುಂಬೈನಲ್ಲಿ ಇದ್ದೇನೆ ಎಂದು ಹೇಳಿದ್ದರಿಂದ, ಶರಣಾಗಲು ನಿಮಗೆ ಎರಡು ದಿನಗಳ ಸಮಯ ನೀಡಲಾಗಿತ್ತು. ಈಗ ಯಾವುದೇ ಆಧಾರ ಕಾಣುತ್ತಿಲ್ಲ. ಇನ್ನು ಸಹಾನುಭೂತಿ ತೋರಿಸಲು ಯಾವ ಕಾರಣವೂ ಇಲ್ಲ. ಇಂದು ಸಂಜೆ 4 ಗಂಟೆಗೆ ನೀವು ಶರಣಾಗಬೇಕು,” ಎಂದು ಪೀಠ ತಿಳಿಸಿತು.
ಯಾದವ್ ಅವರನ್ನು 2024ರ ಮೇ ತಿಂಗಳಲ್ಲಿ ಸೆಷನ್ಸ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ, ಅವರು ಸಾಲ ಪಡೆದಿದ್ದ ನಿರ್ಮಾಣ ಕಂಪನಿಯೊಂದಿಗೆ ಸೌಹಾರ್ದಯುತವಾಗಿ ವಿಚಾರ ಬಗೆಹರಿಸಿಕೊಳ್ಳುವುದಾಗಿ ವಕೀಲರು ನೀಡಿದ ಭರವಸೆಯ ಆಧಾರದಲ್ಲಿ ದೆಹಲಿ ಹೈಕೋರ್ಟ್ ಅವರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಯಾದವ್ ಅವರು ಆ ಭರವಸೆ ಈಡೇರಿಸಲು ವಿಫಲರಾಗಿದ್ದರು.
ಒಟ್ಟು ₹2.5 ಕೋಟಿ ಬಾಕಿಯನ್ನು ಎರಡು ಹಂತಗಳಲ್ಲಿ ಪಾವತಿಸುವುದಾಗಿ (₹40 ಲಕ್ಷ ಮತ್ತು ₹2.1 ಕೋಟಿ) ಅವರು ತಿಳಿಸಿದ್ದರೂ, ನಿಗದಿತ ಅವಧಿಯೊಳಗೆ ಯಾವುದೇ ಪಾವತಿ ಮಾಡಿರಲಿಲ್ಲ. ಡಿಮ್ಯಾಂಡ್ ಡ್ರಾಫ್ಟ್‌ನಲ್ಲಿ ತಪ್ಪು ಸಂಭವಿಸಿದೆ ಎಂಬ ಕಾರಣವನ್ನೂ ನ್ಯಾಯಾಲಯ ತಿರಸ್ಕರಿಸಿತು, ಏಕೆಂದರೆ ಆ ತಪ್ಪನ್ನು ಸರಿಪಡಿಸಲು ಯಾದವ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಪಾವತಿ ಮಾಡದೇ ಪದೇ ಪದೇ ಸಮಯ ಕೇಳುತ್ತಾ ನ್ಯಾಯಾಲಯದ ವಿಚಾರಣೆಯನ್ನು ಮುಂದೂಡುವ ಪ್ರಯತ್ನ ಮಾಡಿದ ಯಾದವ್ ಅವರ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಂತೆಯೇ ಅವರ ಮನವಿ ತಿರಸ್ಕರಿಸಿ ಶರಣಾಗಲು ಆದೇಶಿಸಿತು.