ಜಾಮೀನು ದೊರೆಯಬೇಕೆಂದಿದ್ದರೆ ಸಂತ್ರಸ್ತೆಯ ಕೈಗೆ ರಾಖಿ ಕಟ್ಟುವಂತೆ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಸೂಚನೆಯು ಕಿರುಕುಳ ಕೊಟ್ಟವನನ್ನು ಸಹೋದರನನ್ನಾಗಿ ಪರಿವರ್ತಿಸಲು ಹೊರಟ ನ್ಯಾಯಾಂಗದ ಆದೇಶವಾಗುತ್ತದೆ. ಇದು 'ನ್ಯಾಯಾಂಗದ ರೂಢಿಗತಮಾದರಿ'ಗೆ ಉದಾಹರಣೆಯಾಗಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಕೆಳಹಂತದ ನ್ಯಾಯಾಲಯಗಳ ಇಂತಹ ತೀರ್ಮಾನಗಳು ಉಂಟು ಮಾಡುವ ಪರಿಣಾಮಗಳ ಬಗ್ಗೆ ಗಂಭೀರವಾಗಿ ಎಚ್ಚರಿಸಿದೆ.
ನ್ಯಾ. ಎ ಎಂ ಖಾನ್ವಿಲ್ಕರ್ ಮತ್ತು ನ್ಯಾ. ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಆರೋಪಿಗೆ ಸೂಚಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ತಳ್ಳಿಹಾಕುತ್ತಾ ಕೆಲ ಮಹತ್ವದ ವಿಚಾರಗಳನ್ನು ತಿಳಿಸಿದೆ. ಮಧ್ಯಪ್ರದೇಶ ಹೈಕೋರ್ಟ್ ಜುಲೈ 2020ರಲ್ಲಿ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ವಕೀಲೆ ಅಪರ್ಣಾ ಭಟ್ ಹಾಗೂ ಇತರ ಎಂಟು ಮಂದಿ ವಕೀಲೆಯರು ನ್ಯಾಯಾಲಯದ ಮೆಟ್ಟಿಲೇರಿದ್ದರು.
1.ನ್ಯಾಯಾಲಯ ತನ್ನ ತೀರ್ಪಿನಲ್ಲಿ ಏಳು ಪ್ರಮುಖ ನಿರ್ದೇಶನಗಳನ್ನು ಜಾರಿಗೆ ತಂದಿದ್ದು ಲೈಂಗಿಕ ಅಪರಾಧಗಳ ಪ್ರಕರಣಗಳಲ್ಲಿ ಜಾಮೀನು ಆದೇಶ ನೀಡುವಾಗ ನ್ಯಾಯಾಲಯಗಳು ಇವುಗಳನ್ನು ಪಾಲಿಸಬೇಕು. ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಂಪರ್ಕ ಏರ್ಪಡುವಂತಹ ಯಾವುದೇ ಕಡ್ಡಾಯ ಷರತ್ತುಗಳನ್ನು ಜಾಮೀನಿನ ವೇಳೆ ವಿಧಿಸಬಾರದು. ಅಂತಹ ಷರತ್ತುಗಳು ದೂರುದಾರನನ್ನು ಯಾವುದೇ ಕಿರುಕುಳದಿಂದ ರಕ್ಷಿಸಲು ಪ್ರಯತ್ನಿಸಬೇಕು;
2. ಸಂತ್ರಸ್ತೆಗೆ ಕಿರುಕುಳದ ಸಂಭವನೀಯ ಬೆದರಿಕೆ ಇರಬಹುದೆಂದು ನ್ಯಾಯಾಲಯವು ನಂಬುವ ಸಂದರ್ಭಗಳು ಅಸ್ತಿತ್ವದಲ್ಲಿದ್ದಾಗ, ಅಥವಾ ಅಂತಹ ಆತಂಕ ವ್ಯಕ್ತವಾದಾಗ ಪೊಲೀಸರಿಂದ ವರದಿಗಳನ್ನು ಪಡೆದ ಬಳಿಕ, ಸಂತ್ರಸ್ತರಿಗೆ ಒದಗಿಸುವ ರಕ್ಷಣೆಯ ಸ್ವರೂಪವನ್ನು ಪ್ರತ್ಯೇಕವಾಗಿ ಪರಿಗಣಿಸತಕ್ಕದ್ದು ಮತ್ತು ಸಂತ್ರಸ್ತೆಯೊಂದಿಗೆ ಯಾವುದೇ ರೀತಿಯ ಸಂಪರ್ಕಕ್ಕೆ ಯತ್ನಿಸದಂತೆ ಆರೋಪಿಗಳಿಗೆ ನಿರ್ದೇಶನ ನೀಡುವ ಜೊತೆಗೆ ಸೂಕ್ತ ಆದೇಶವನ್ನು ಮಾಡತಕ್ಕದ್ದು
3. ಜಾಮೀನು ಮಂಜೂರು ಮಾಡಿದ ಎಲ್ಲಾ ಪ್ರಕರಣಗಳಲ್ಲಿ, ಆರೋಪಿಗಳಿಗೆ ಜಾಮೀನು ನೀಡಲಾಗಿದ್ದು ಎರಡು ದಿನಗಳಲ್ಲಿ ದೂರುದಾರರಿಗೆ ಜಾಮೀನಿನ ಪ್ರತಿ ಒದಗಿಸುವುದಾಗಿ ತಕ್ಷಣ ತಿಳಿಸತಕ್ಕದ್ದು.
4. ಜಾಮೀನು ಷರತ್ತುಗಳು ಮತ್ತು ಆದೇಶಗಳು ಮಹಿಳೆಯರ ಬಗ್ಗೆ ಮತ್ತು ಸಮಾಜದಲ್ಲಿ ಅವರ ಸ್ಥಾನದ ಬಗ್ಗೆ ರೂಢಿಗತ ಅಥವಾ ಪಿತೃಪ್ರಧಾನ ಕಲ್ಪನೆಗಳನ್ನು ಬಿಂಬಿಸುವುದನ್ನು ತಪ್ಪಿಸಬೇಕು ಮತ್ತು ಅದು ಸಿಆರ್‌ಪಿಸಿ ಅವಶ್ಯಕತೆಗಳಿಗೆ ಅನುಗುಣವಾಗಿರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಜಾಮೀನು ನೀಡುವ ತೀರ್ಪನಲ್ಲಿ ಸಂತ್ರಸ್ತೆಯ ಉಡುಗೆ, ನಡವಳಿಕೆ ಅಥವಾ ಹಿಂದಿನ “ನಡವಳಿಕೆ” ಅಥವಾ “ನೈತಿಕತೆ” ಕುರಿತ ಚರ್ಚೆಯನ್ನು ಪ್ರಸ್ತಾಪಿಸಬಾರದು.
5. ಲಿಂಗ ಸಂಬಂಧಿ ಅಪರಾಧ ಪ್ರಕರಣಗಳಲ್ಲಿ ತೀರ್ಪು ನೀಡುವಾಗ ನ್ಯಾಯಾಲಯಗಳು,ಸಂತ್ರಸ್ತರು ಮತ್ತು ಆರೋಪಿಗಳ ನಡುವೆ ಯಾವುದೇ ರೀತಿಯ ರಾಜಿಸಂಧಾನ ಅಥವಾ ಮದುವೆಯಾಗುವಂತೆ ಮನವೊಲಿಸುವ ಯಾವುದೇ ಸಲಹೆಗಳನ್ನು ನೀಡುವುದರಿಂದ ನ್ಯಾಯಾಲಯಗಳು ವಿಮುಖವಾಗಬೇಕು. ಏಕೆಂದರೆ ಇದು ನ್ಯಾಯಾಲಯಗಳ ಅಧಿಕಾರ ಮತ್ತು ನ್ಯಾಯವ್ಯಾಪ್ತಿಯನ್ನು ಮೀರಿದ ವಿಚಾರ.
6. ವಾದ ಅಥವಾ ವಿಚಾರಣೆ ವೇಳೆ ಸಂತ್ರಸ್ತೆಗೆ ಆಘಾತ ತರುವಂತಹ ಯಾವುದೇ ಮಾತುಗಳನ್ನಾಡಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಸೂಕ್ಷ್ಮತೆಯನ್ನು ನ್ಯಾಯಾಧೀಶರು ಸದಾಕಾಲ ಹೊಂದಿರಬೇಕು.
7. ವಿಶೇಷವಾಗಿ ಸಂತ್ರಸ್ತರ ಆತ್ಮಸ್ಥೈರ್ಯವನ್ನು ಹಾಳು ಮಾಡುವ ಅಥವಾ ಅಲುಗಾಡಿಸುವಂತಹ ಯಾವುದೇ ಪದವನ್ನು ಮಾತಿನಲ್ಲಾಗಲೀ ಅಥವಾ ಬರಹರೂಪದಲ್ಲಾಗಲೀ ನ್ಯಾಯಾಧೀಶರು ಬಳಸುವಂತಿಲ್ಲ.
ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ಅಥವಾ ನ್ಯಾಯಾಂಗ ಆದೇಶದ ವೇಳೆ ಈ ಕೆಳಕಂಡ ಯಾವುದೇ ರೂಢಿಗತ ಅಭಿಪ್ರಾಯವನ್ನು ನೀಡದಂತೆ ಪೀಠ ನಿರ್ದೇಶಿಸಿದೆ:
(i) ಮಹಿಳೆಯರು ದೈಹಿಕವಾಗಿ ದುರ್ಬಲರಾಗಿದ್ದು ಅವರಿಗೆ ರಕ್ಷಣೆ ಬೇಕು;
(ii) ಮಹಿಳೆಯರು ಅಬಲೆಯರಾಗಿದ್ದಾರೆ ಅಥವಾ ಸ್ವಂತವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ;
(iii) ಪುರುಷರು ಮನೆಯ ʼಒಡೆಯʼರಾಗಿದ್ದು ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು;
(iv) ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಮಹಿಳೆಯರು ಅಧೀನರು ಮತ್ತು ವಿಧೇಯರಾಗಿರಬೇಕು;
(v) “ಒಳ್ಳೆಯ” ಮಹಿಳೆಯರು ಲೈಂಗಿಕವಾಗಿ ಪರಿಶುದ್ಧರಾಗಿದ್ದಾರೆ;
(vi) ಮಾತೃತ್ವವು ಪ್ರತಿಯೊಬ್ಬ ಮಹಿಳೆಯ ಕರ್ತವ್ಯ ಮತ್ತು ಪಾತ್ರ, ಮತ್ತು ಅವಳು ತಾಯಿಯಾಗಲು ಬಯಸುತ್ತಾಳೆ ಎಂಬ ಊಹೆ;
(vii) ಮಹಿಳೆಯರು ತಮ್ಮ ಮಕ್ಕಳ ಪಾಲನೆ ಮತ್ತು ಆರೈಕೆಯ ಜವಾಬ್ದಾರಿ ಹೊರಬೇಕು
(viii) ರಾತ್ರಿಯಲ್ಲಿ ಏಕಾಂಗಿಯಾಗಿರುವುದು ಅಥವಾ ಕೆಲವು ಬಟ್ಟೆಗಳನ್ನು ಧರಿಸುವುದು ಮಹಿಳೆಯರ ಮೇಲಿನ ದಾಳಿಗೆ ಕಾರಣ;
(ix) ಮಹಿಳೆ ಆಲ್ಕೊಹಾಲ್ ಸೇವಿಸುವುದು, ಧೂಮಪಾನ ಮಾಡುವುದು ಅಥವಾ ಮಾಡುವಂತೆ ಹೇಳುವುದು ಪುರುಷರು ಇಷ್ಟಪಡದ ಸಂಗತಿ.
(x) ಮಹಿಳೆಯರು ಭಾವನಾತ್ಮಕ ಮತ್ತು ಆಗಾಗ್ಗೆ ಘಟನೆಗಳಿಗೆ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ ಅಥವಾ ನಾಟಕೀಯಗೊಳಿಸುತ್ತಾರೆ, ಆದ್ದರಿಂದ ಅವರ ಸಾಕ್ಷ್ಯವನ್ನು ಪರಿಶೀಲಿಸುವುದು ಅವಶ್ಯಕ;
(xi) ಲೈಂಗಿಕ ಅಪರಾಧ ಪ್ರಕರಣಗಳಲ್ಲಿ “ಒಪ್ಪಿಗೆ” ಯನ್ನು ನಿರ್ಣಯಿಸುವಾಗ ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರು ಒದಗಿಸುವ ಪುರಾವೆ ಸಂಶಯಾರ್ಹ;
(xii) ಲೈಂಗಿಕ ಅಪರಾಧ ಪ್ರಕರಣದಲ್ಲಿ ದೈಹಿಕ ಹಾನಿ ಉಂಟಾದ ಬಗ್ಗೆ ಪುರಾವೆಗಳು ಇಲ್ಲದಿರುವುದರಿಂದ ಮಹಿಳೆಯ ಸಮ್ಮತಿ ಇತ್ತು;
ಕಾನೂನು ನೆರವು, ಆಪ್ತ ಸಮಾಲೋಚನೆ ಆಶ್ರಯ ಸೇರಿದಂತೆ ಪರಿಹಾರೋಪಾಯಗಳನ್ನು ಪಡೆಯಲು ಮಹಿಳೆಯರು ಆಗಾಗ್ಗೆ ಅಡ್ಡಿ ಆತಂಕಗಳನ್ನು ಅನುಭವಿಸುತ್ತಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಹೀಗೆ ಮಾಡುವುದರಿಂದ ಅವರು ಮತ್ತೆ ಸಂತ್ರಸ್ತರಾಗುತ್ತಾರೆ. ಜೊತೆಗೆ ಹಿಂಸಾಚಾರದ ಅಪಾಯಕ್ಕೆ ಗುರಿಯಾಗಬಹುದು ಎಂದಿತು.
ನ್ಯಾಯಾಧೀಶರ ವೃತ್ತಿ ಅನುಭವಕ್ಕೂ ನ್ಯಾಯಾಂಗ ಪೂರ್ವಾಗ್ರಹಕ್ಕೂ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಪಬ್ಲಿಕ್ ಪ್ರಾಸಿಕ್ಯೂಟರ್ ಸೇರಿದಂತೆ ನ್ಯಾಯಾಧೀಶರು ಮತ್ತು ವಕೀಲರಲ್ಲಿ ಅರಿವು ಮೂಡಿಸಲು ಕಾನೂನು ವೃತ್ತಿ ಆರಂಭದ ವೇಳೆ ಲಿಂಗತ್ವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು ಕಡ್ಡಾಯ ಎಂದು ಹೇಳಿದೆ.