ಚೆಕ್ ಬೌನ್ಸ್ ಪ್ರಕರಣ: ರಾಮ್ ಗೋಪಾಲ್ ವರ್ಮಾಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ

ವರ್ಗಾವಣೀಯ ಲಿಖಿತಗಳ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿ ವರ್ಮಾ ಅವರ ಸಂಸ್ಥೆ ವಿರುದ್ಧ ಶ್ರೀ ಹೆಸರಿನ ಕಂಪೆನಿ 7 ವರ್ಷಗಳ ಹಿಂದೆ ಪ್ರಕರಣ ದಾಖಲಿಸಿತ್ತು.
Ram Gopal Verma
Ram Gopal Verma x.com
Published on

ಚೆಕ್ ಬೌನ್ಸ್ ಪ್ರಕರಣದಲ್ಲಿ ಚಿತ್ರ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ತಪ್ಪಿತಸ್ಥ ಎಂದು ಮಂಗಳವಾರ ಘೋಷಿಸಿರುವ ಮುಂಬೈ ನ್ಯಾಯಾಲಯವೊಂದು ಈ ಹಿನ್ನೆಲೆಯಲ್ಲಿ ಅವರಿಗೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ವರ್ಗಾವಣೀಯ ಲಿಖಿತಗಳ (ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್) ಕಾಯಿದೆಯ ಸೆಕ್ಷನ್‌ 138 ರ ಅಡಿಯಲ್ಲಿ ವರ್ಮಾ ಅವರ ಸಂಸ್ಥೆ ವಿರುದ್ಧ ಶ್ರೀ ಹೆಸರಿನ ಕಂಪೆನಿಯನ್ನು ಪ್ರತಿನಿಧಿಸುವ ಮಹೇಶ್ಚಂದ್ರ ಮಿಶ್ರಾ ಅವರು 7 ವರ್ಷಗಳ ಹಿಂದೆ ಪ್ರಕರಣ ದಾಖಲಿಸಿದ್ದರು.

Also Read
ಲೈಂಗಿಕ ಕಿರುಕುಳ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಚಿತ್ರ ನಿರ್ದೇಶಕ ರಂಜಿತ್

ಪ್ರಕರಣದಲ್ಲಿ ವರ್ಮಾ ತಪ್ಪಿತಸ್ಥನೆಂದು ನಿರ್ಧರಿಸಿರುವ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತು.

ಜೊತೆಗೆ, ಮೂರು ತಿಂಗಳೊಳಗೆ ದೂರುದಾರರಿಗೆ ₹ 3.72 ಲಕ್ಷ ಪರಿಹಾರ  ನೀಡುವಂತೆ ವರ್ಮಾಗೆ ಅದು ಸೂಚಿಸಿತು. ನಿಗದಿತ ಅವಧಿಯೊಳಗೆ ಪರಿಹಾರ ನೀಡದಿದ್ದರೆ ವರ್ಮಾ ಮತ್ತೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ವಿಚಾರಣೆ ವೇಳೆ ವರ್ಮಾ ಗೈರುಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿ ಶಿಕ್ಷೆ ಜಾರಿಗೆ ತರುವಂತೆ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ನ್ಯಾಯಾಲಯ ಸೂಚಿಸಿತು. ವಿಚಾರಣೆಯ ಸಮಯದಲ್ಲಿ ವರ್ಮಾ ಅವರು ಕಸ್ಟಡಿಯಲ್ಲಿ ಕಳೆದಿಲ್ಲ. ಹೀಗಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 428ರ ಅಡಿಯಲ್ಲಿ ಸಾಲವನ್ನು ಮನ್ನಾ ಮಾಡಲು ಅಥವಾ ಕಡಿಮೆ ಮಾಡಲು ಯಾವುದೇ ಅವಕಾಶವಿಲ್ಲ ಎಂದಿತು.

Also Read
ಯಶ್‌ ನಟನೆಯ 'ಟಾಕ್ಸಿಕ್‌ʼ ಚಿತ್ರ ನಿರ್ಮಾಣ ಸಂಸ್ಥೆಯ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್‌

ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಾಮಗೋಪಾಲ್‌ ವರ್ಮಾ "ನನ್ನ ಮತ್ತು ಅಂಧೇರಿ ನ್ಯಾಯಾಲಯದ ಕುರಿತಾದ ಸುದ್ದಿಗಳು, ನನ್ನ ಮಾಜಿ ಉದ್ಯೋಗಿಯ 7 ವರ್ಷಗಳ ಹಿಂದಿನ ರೂ. 2 ಲಕ್ಷ 38 ಸಾವಿರ ಮೊತ್ತದ ಪ್ರಕರಣಕ್ಕೆ ಸಂಬಂಧಿಸಿವೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ವಕೀಲರು ಈ ಕುರಿತು ಗಮನಹರಿಸಿದ್ದು ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚಿನದೇನನ್ನೂ ಹೇಳಲಾರೆ " ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಶಿವ, ಕ್ಷಣ ಕ್ಷಣಂ ರಂಗೀಲಾ, ಸತ್ಯ, ಕಂಪನಿ, ಭೂತ್, ಸರ್ಕಾರ್ ಮತ್ತು ಕೌನ್‌, ರಕ್ತ ಚರಿತ್ರದಂತಹ ಸಿನಿಮಾಗಳಿಂದಾಗಿ ಜನಪ್ರಿಯರಾಗಿರುವ ರಾಮ್ ಗೋಪಾಲ್ ವರ್ಮಾ ಭಾರತೀಯ ಚಿತ್ರೋದ್ಯಮದ ಪ್ರಮುಖ ವ್ಯಕ್ತಿಯಾಗಿದ್ದಾರೆ.

Kannada Bar & Bench
kannada.barandbench.com