ರಾಮ ನವಮಿ ಹಿಂಸಾಚಾರ: ಗಲಭೆ ಸ್ಥಳಗಳಲ್ಲಿ ಸಾಕಷ್ಟು ಪೊಲೀಸ್ ಪಡೆ ನಿಯೋಜಿಸಲು ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್ ಸೂಚನೆ

ಹೌರಾ ಮತ್ತು ದಲ್ಖೋಲಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದುಈಗಾಗಲೇ 35 ಮಂದಿಯನ್ನು ಬಂಧಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು.
Calcutta High Court and Ram Navami violence
Calcutta High Court and Ram Navami violence
Published on

ಈ ಹಿಂದೆ ಹಿಂಸಾಚಾರ ನಡೆದಿದ್ದ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆಗೆ ಅನುಮತಿ ನೀಡುವ ಮುನ್ನ ಪಶ್ಚಿಮ ಬಂಗಾಳ ಸರ್ಕಾರ ಹೆಚ್ಚು ಜಾಗರೂಕವಾಗಿರಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಸೋಮವಾರ ಹೇಳಿದೆ.

ಇನ್ನು ಮುಂದೆ ಯಾವುದೇ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಲು ಗಲಭೆಪೀಡಿತ ಪ್ರದೇಶಗಳಲ್ಲಿ ಸಾಕಷ್ಟು ಪೊಲೀಸ್ ಪಡೆಗಳನ್ನು ನಿಯೋಜಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ಶಿವಜ್ಞಾನಂ, ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ಸರ್ಕಾರಕ್ಕೆ ಸೂಚಿಸಿತು.

"ನೀವು (ಸರ್ಕಾರ) ಈ ಪ್ರದೇಶಗಳಲ್ಲಿ ಸಾಕಷ್ಟು ಪೊಲೀಸ್ ಪಡೆ ನಿಯೋಜಿಸಿ, ಸಾರ್ವಜನಿಕರು, ಶಾಲೆಗಳು ಹಾಗೂ ವ್ಯಾಪಾರಿಗಳು ಇನ್ನಿತರರು ಹಿಂಸಾಚಾರಕ್ಕೆ ತುತ್ತಾಗದಂತೆ ನೋಡಿಕೊಳ್ಳಿ. ನೀವು ಅವರನ್ನು ರಕ್ಷಿಸಬೇಕು" ಎಂದು ಅಡ್ವೊಕೇಟ್ ಜನರಲ್ ಎಸ್‌ ಎನ್‌ ಮುಖರ್ಜಿ ಅವರಿಗೆ ನ್ಯಾಯಾಲಯ ತಿಳಿಸಿತು.

ಹೌರಾ ಮತ್ತು ದಲ್ಖೋಲಾ ಪ್ರದೇಶಗಳಲ್ಲಿ ರಾಮನವಮಿ ಆಚರಣೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಹೌರಾ ಮತ್ತು ದಲ್ಖೋಲಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಈಗಾಗಲೇ 35 ಮಂದಿಯನ್ನು ಬಂಧಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಈ ಎರಡು ಜಿಲ್ಲೆಗಳು ಮತ್ತು ಪಕ್ಕದ ಹೂಗ್ಲಿಯ ಕೆಲವು ಭಾಗಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಇನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಗ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ ಎಂಬ ಸರ್ಕಾರದ ಆಲೋಚನೆಯನ್ನು ನ್ಯಾಯಾಲಯ ಒಪ್ಪಲಿಲ್ಲ.

ಈ ಮಧ್ಯೆ ಅಧಿಕಾರಿ ಪರ ವಕೀಲರು “ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಪೊಲೀಸ್‌ ಸಂಪೂರ್ಣ ವಿಫಲವಾಗಿದ್ದು ಸಮಸ್ಯೆ ಕುರಿತು ಮಧ್ಯಪ್ರವೇಶಿಸುವಂತೆ ರಾಜ್ಯಪಾಲರಿಗೆ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ” ಎಂದರು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 6 ರಂದು ನಡೆಯಲಿದೆ.

Kannada Bar & Bench
kannada.barandbench.com