ರಾಮ್‌ಭಗತ್‌ ಗೋಪಾಲ್‌ಗೆ ಜಾಮೀನು: ಸಮಾವೇಶ ಆಯೋಜನೆ, ಭಾಷಣ ಮಾಡದಂತೆ ಷರತ್ತು ವಿಧಿಸಿದ ನ್ಯಾಯಾಲಯ

ಕಠಿಣ ಷರತ್ತುಗಳನ್ನು ವಿಧಿಸಿರುವ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಡಾ. ಡಿ ಎನ್‌ ಭಾರದ್ವಾಜ್‌ ಅವರು ಆರೋಪಿ ಗೋಪಾಲ್‌ಗೆ ಜಾಮೀನು ಮಂಜೂರು ಮಾಡಿದ್ದಾರೆ.
Ram Bhagat Gopal
Ram Bhagat Gopal
Published on

ಮುಸ್ಲಿಮರ ವಿರುದ್ಧ ದ್ವೇಷಭಾಷೆ ಬಳಕೆ ಮಾಡಿದ್ದ ಆರೋಪಿ ರಾಮಭಗತ್‌ ಗೋಪಾಲ್‌ಗೆ ಹರಿಯಾಣ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅದರೆ ಇದೇ ವೇಳೆ, ಭಿನ್ನ ಧಾರ್ಮಿಕ ಸಮುದಾಯಗಳ ನಡುವೆ ಶಾಂತಿ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಗೋಪಾಲ್‌ ಅವರು ಯಾವುದೇ ಸಮಾವೇಶ ಸಂಘಟಿಸುವುದಾಗಲಿ, ಅದರಲ್ಲಿ ಭಾಗಿಯಾಗುವುದಾಗಲಿ ಅಥವಾ ಸಮಾವೇಶವನ್ನು ಉದ್ದೇಶಿಸಿ ಭಾಷಣವನ್ನಾಗಲಿ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹರಿಯಾಣದ ಮಹಾಪಂಚಾಯತ್‌ನಲ್ಲಿ ಪ್ರಚೋದನಾಕಾರಿ ಮತ್ತು ಕೋಮುದ್ವೇಷ ಭಾಷಣ ಮಾಡಿದ್ದ ಆರೋಪ ಎದುರಿಸುತ್ತಿರುವ ಗೋಪಾಲ್‌ಗೆ ಜಾಮೀನು ಮಂಜೂರು ಮಾಡಿರುವ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಡಾ. ಡಿ ಎನ್‌ ಭಾರದ್ವಾಜ್‌ ಅವರು ಆರೋಪಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

“ಸಾರ್ವಜನಿಕ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಇತರೆ ಸಮುದಾಯ/ಧರ್ಮದ ಜನರಲ್ಲಿ ಭಯ ಅಥವಾ ಆತಂಕ, ಕೋಮು ಭಾವನೆ ಪ್ರಚೋದನೆ ನೀಡುವಂತಹ ಯಾವುದೇ ಸಮಾವೇಶವನ್ನು ಅವರು ಆಯೋಜಿಸುವಂತಿಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ಮತ್ತು ಸಮಾವೇಶಗಳಲ್ಲಿ ಮಾತನಾಡುವಂತಿಲ್ಲ” ಎಂದು ನ್ಯಾಯಾಲಯ ಆದೇಶ ಮಾಡಿದೆ.

ಮುಸ್ಲಿಮ್‌ ಸಮುದಾಯದ ಹೆಣ್ಣು ಮಕ್ಕಳನ್ನು ಅಪಹರಿಸುವಂತೆ ಹಾಗೂ ಆ ಸಮುದಾಯಕ್ಕೆ ಸೇರಿದವರನ್ನು ಕೊಲ್ಲುವಂತೆ ಸಮಾವೇಶವೊಂದರಲ್ಲಿ ಭಾಷಣ ಮಾಡಿದ್ದ ಆರೋಪದಲ್ಲಿ ಗೋಪಾಲ್‌ ಅವರನ್ನು ಬಂಧಿಸಲಾಗಿತ್ತು. ಗೋಪಾಲ್‌ ಭಾಷಣದ ವಿಡಿಯೊ ವೈರಲ್‌ ಆದ ಹಿನ್ನೆಲೆಯಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 153ಎ (ಧರ್ಮಗಳ ನಡುವೆ ದ್ವೇಷ ಉಂಟು ಮಾಡುವುದು) ಮತ್ತು 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಕೋಮು ದ್ವೇಷ ಬಿತ್ತುವ ಭಾಷಣ ಮಾಡುವ ಮೂಲಕ ಸಾಮರಸ್ಯ ಹಾಳು ಮಾಡುವವರು ಕೋವಿಡ್‌ ಸಾಂಕ್ರಾಮಿಕಕ್ಕಿಂತ ಅಪಾಯಕಾರಿ ಎಂದು ಹೇಳಿದ್ದ ಮ್ಯಾಜಿಸ್ಟ್ರೇಟ್‌ ಮೊಹಮ್ಮದ್‌ ಸಗೀರ್‌ ಅವರು ಈ ಹಿಂದೆ ಗೋಪಾಲ್‌ ಜಾಮೀನು ಮನವಿ ವಜಾ ಮಾಡಿದ್ದರು. ಹೀಗಾಗಿ, ಗೋಪಾಲ್‌ ಅವರು ಜಾಮೀನು ಕೋರಿ ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದಿರುವ ನ್ಯಾಯಾಲಯವು ಸಾಮಾಜಿಕ ಹಿತಾಸಕ್ತಿ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವೆ ಸಮನ್ವಯ ಸಾಧಿಸಬೇಕಿದೆ ಎಂದಿದೆ.

Also Read
ರಾಮ ಮಂದಿರ ಕುರಿತ ಜಾಗೃತಿ ಮೆರವಣಿಗೆಯನ್ನು ಸೂಕ್ತ ಕೋವಿಡ್ ನಿರ್ಬಂಧಗಳೊಂದಿಗೆ ನಡೆಸಬಹುದು: ಮದ್ರಾಸ್‌ ಹೈಕೋರ್ಟ್‌

“ಜುಲೈ 12ರಿಂದ ಅರ್ಜಿದಾರರು ಕಸ್ಟಡಿಯಲ್ಲಿದ್ದು,19 ವರ್ಷ ವಯಸ್ಸಿನವರಾಗಿದ್ದಾರೆ. ಪ್ರಕರಣದ ವಿಚಾರಣೆಗೆ ಹೆಚ್ಚಿನ ಸಮಯ ಬೇಕಿದ್ದು, ವಾಸ್ತವ ಸಂಗತಿ ಮತ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ಅರ್ಹತೆ ಕುರಿತು ಪ್ರತಿಕ್ರಿಯಿಸದೆ ಆರೋಪಿ ಗೋಪಾಲ್‌ ಶರ್ಮ ಅಲಿಯಾಸ್‌ ರಾಮಭಗತ್‌ ಅವರು ಜಾಮೀನಿಗೆ ಅರ್ಹವಾಗಿದ್ದಾರೆ. ಹೀಗಾಗಿ, ಸದ್ಯ ಜಾಮೀನು ಮನವಿಗೆ ಅನುಮತಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಹೋರಾಟ ಮಾಡುತ್ತಿದ್ದವರತ್ತ ಪಿಸ್ತೂಲು ಹಿಡಿದು ಶೂಟ್‌ ಮಾಡುತ್ತಿದ್ದ ಗೋಪಾಲ್‌ ಚಿತ್ರ ವೈರಲ್‌ ಆದಾಗಿನಿಂದ ಅವರು ಚರ್ಚೆಯ ಕೇಂದ್ರ ಬಿಂದುವಾಗಿದ್ದರು.

Kannada Bar & Bench
kannada.barandbench.com