ಎಸ್‌ಐಟಿ ರಚನೆ ವ್ಯಾಪ್ತಿ ಗೃಹ ಸಚಿವರಿಗಿಲ್ಲ: ಜೈಸಿಂಗ್‌; ಎಫ್‌ಐಆರ್‌ ರಹಿತ ಎಸ್‌ಐಟಿ ತನಿಖೆ ಸಾಧ್ಯವೇ? ಮೋಹನ್‌ ವಾದ

ಪ್ರಾಥಮಿಕ ತನಿಖೆ ನಡೆಸಲು ಎಫ್‌ಐಆರ್‌ ಅವಶ್ಯಕತೆ ಇಲ್ಲ. ಎಸ್‌ಐಟಿ ತನಿಖೆ ನಡೆಸುವಾಗ ಎಫ್‌ಐಆರ್‌ ದಾಖಲಿಸಬೇಕು. ನಾವು ಇಲ್ಲಿ ಸಾರ್ವಜನಿಕ ಔಚಿತ್ಯ ಮತ್ತು ಪೊಲೀಸರು ಅಳವಡಿಸಿಕೊಂಡಿರುವ ಕಾರ್ಯವಿಧಾನ ಪ್ರಶ್ನಿಸುತ್ತಿದ್ದೇವೆ ಎಂದ ವಕೀಲ ಮೋಹನ್‌.
Sr Advocate Indira Jaising and Lawyer G R Mohan, Karnataka HC
Sr Advocate Indira Jaising and Lawyer G R Mohan, Karnataka HC

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸುವ ವ್ಯಾಪ್ತಿ ಹೊಂದಿರಲಿಲ್ಲ ಎಂದು ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಬುಧವಾರ ಕರ್ನಾಟಕ ಹೈಕೋರ್ಟ್‌ ಮುಂದೆ ಪ್ರತಿಪಾದಿಸಿದರು.

ಎಸ್‌ಐಟಿ ಸಿಂಧುತ್ವ ಪ್ರಶ್ನಿಸಿ ಅರ್ಜಿದಾರೆ ಗೀತಾ ಮಿಶ್ರಾ ಎಂಬವರು ವಕೀಲ ಜಿ ಆರ್‌ ಮೋಹನ್‌ ಮೂಲಕ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದಾರೆ. ಎಸ್‌ಐಟಿ ವಜಾ ಮಾಡಿ, ಮರು ತನಿಖೆಗೆ ಆದೇಶಿಸುವಂತೆ ಕೋರಿ ಸಂತ್ರಸ್ತೆ ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಇಂದಿರಾ ಜೈಸಿಂಗ್ ಪ್ರತಿನಿಧಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಆರೋಪಿ ರಮೇಶ ಜಾರಕಿಹೊಳಿ ದಾಖಲಿಸಿರುವ ದೂರನ್ನು ವಜಾ ಮಾಡುವಂತೆ ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ. ಪ್ರತ್ಯೇಕವಾದ ಈ ಮೂರೂ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್ ಅವರಿದ್ದ ವಿಭಾಗೀಯ ಪೀಠ ಬುಧವಾರ ನಡೆಸಿತು.

“ಹೈಕೋರ್ಟ್‌ ಆದೇಶದ ಅನ್ವಯ, ಈ ನ್ಯಾಯಾಲಯದ ನಿಗಾವಣೆಯಲ್ಲಿ ಹೊಸ ಎಸ್‌ಐಟಿ ರಚನೆಯಾಗಬೇಕು ಎಂಬುದು ನಮ್ಮ ಕೋರಿಕೆ” ಎಂದು ಇಂದಿರಾ ಜೈಸಿಂಗ್‌ ಪೀಠದ ಗಮನಸೆಳೆದರು.

“ರಾಸಲೀಲೆ ಸಿ ಡಿ ಹೊರಬೀಳುತ್ತಿದ್ದಂತೆ ರಮೇಶ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿಡಿಯೊಗಳನ್ನು ಯಾರು ಸಾರ್ವಜನಿಕಗೊಳಿಸಿದರು ಎಂಬ ವಿಚಾರ ನಮಗೆ ಬೇಕಿಲ್ಲ. ಅಶ್ಲೀಲ ವಿಡಿಯೊಗಳು ಬೆಳಕಿಗೆ ಬಂದ ಬೆನ್ನಿಗೇ ತಮ್ಮ ವಿರುದ್ಧ ಪಿತೂರಿ ಮತ್ತು ಷಡ್ಯಂತ್ರ ರೂಪಿಸಲಾಗಿದೆ ಎಂದು ಅಂದಿನ ಗೃಹ ಸಚಿವ ಬೊಮ್ಮಾಯಿ ಅವರಿಗೆ ಜಾರಕಿಹೊಳಿ ಅಹವಾಲು ಸಲ್ಲಿಸಿದ್ದರು. ಇದನ್ನು ಆಧರಿಸಿ ಬೊಮ್ಮಾಯಿ ಅವರು ಎಸ್‌ಐಟಿ ರಚಿಸಲು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಆದೇಶಿಸಿದ್ದರು. ಗೃಹ ಸಚಿವರ ಸೂಚನೆಯ ಮೇರೆಗೆ ಪೊಲೀಸ್‌ ಆಯುಕ್ತರು ಎಸ್‌ಐಟಿ ರಚಿಸಿದ್ದರು” ಎಂದು ಆಪಾದಿಸಿದರು.

ಈ ಹಂತದಲ್ಲಿ ಪದೇಪದೇ ಇಂದಿರಾ ಜೈಸಿಂಗ್‌ ಅವರು ಕೆಮ್ಮುತ್ತಿದ್ದನ್ನು ಗಮನಿಸಿದ ಪೀಠವು ಶುಕ್ರವಾರಕ್ಕೆ (ಸೆ.17) ಪ್ರಕರಣವನ್ನು ಮುಂದೂಡಿತು.

ಇದಕ್ಕೂ ಮುನ್ನ, ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿರುವ ಗೀತಾ ಮಿಶ್ರಾ ಅವರನ್ನು ಪ್ರತಿನಿಧಿಸಿದ್ದ ವಕೀಲ ಜಿ ಆರ್‌ ಮೋಹನ್‌ ಅವರು “ಯಾವುದೇ ತೆರನಾದ ದೂರು, ಆ ಬಳಿಕ ಎಫ್‌ಐಆರ್‌ ದಾಖಲಿಸದೇ ಎಸ್‌ಐಟಿ ರಚಿಸಲಾಗಿದೆ. ಎಫ್‌ಐಆರ್‌ ದಾಖಲಿಸದೇ ತನಿಖೆ ನಡೆಸಲಾಗದು ಎಂದು ಹಲವು ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ತೀರ್ಪು ನೀಡಿವೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ವಾದಿಸಿದರು.

“ಪ್ರಾಥಮಿಕ ತನಿಖೆ ನಡೆಸುವುದಾದರೆ ಎಫ್‌ಐಆರ್‌ ದಾಖಲು ಮಾಡುವ ಅವಶ್ಯಕತೆ ಇಲ್ಲ. ಎಸ್‌ಐಟಿಯಂಥ ವಿಶೇಷ ತಂಡ ತನಿಖೆ ನಡೆಸುವಾಗ ಎಫ್‌ಐಆರ್‌ ದಾಖಲಿಸಬೇಕು ಎಂಬುದು ಮೂಲತತ್ವ. ಅಲ್ಲದೇ, ಈ ಪ್ರಕರಣದಲ್ಲಿ ದೂರು ದಾಖಲಿಸಲು ವಿಳಂಬ ನೀತಿ ಅನುಸರಿಸಲಾಗಿದೆ. ನಾವು ಇಲ್ಲಿ ಸಾರ್ವಜನಿಕ ಔಚಿತ್ಯ ಮತ್ತು ಪೊಲೀಸರು ಅಳವಡಿಸಿಕೊಂಡಿರುವ ಕಾರ್ಯವಿಧಾನವನ್ನು ಪ್ರಶ್ನಿಸುತ್ತಿದ್ದೇವೆ” ಎಂದರು.

“ಪ್ರಕರಣದ ಅರ್ಹತೆ ಮತ್ತು ಅನರ್ಹತೆಯನ್ನು ನಾವು ಪ್ರಶ್ನಿಸುತ್ತಿಲ್ಲ. ಆಕ್ಷೇಪಣೆಯಲ್ಲಿ ರಾಜ್ಯ ಸರ್ಕಾರ ಮತ್ತು ಎಸ್‌ಐಟಿ ಪರ ವಕೀಲರು ಎಸ್‌ಐಟಿ ಪ್ರಕರಣದ ಮೇಲ್ವಿಚಾರಣೆಯನ್ನಷ್ಟೇ ಮಾಡುತ್ತಿದೆ ಎಂದು ಹೇಳಿದ್ದಾರೆ. ನೈಜ ಎಫ್‌ಐಆರ್‌ ಇಲ್ಲದೇ ಎಸ್‌ಐಟಿಯು ತನಿಖೆಯ ಮೇಲ್ವಿಚಾರಣೆ ಮಾಡಬಹುದೇ?” ಎಂಬ ಮಹತ್ವದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

“ಆಕ್ಷೇಪಣೆಯಲ್ಲಿ ಸರ್ಕಾರ ಮತ್ತು ಎಸ್‌ಐಟಿಯು ಕರ್ನಾಟಕ ಪೊಲೀಸ್‌ ಕಾಯಿದೆಯ ಪ್ರಸ್ತಾಪಿಸಿ ಎಸ್‌ಐಟಿ ತನಿಖೆಯನ್ನು ಸಮರ್ಥಿಸಿದ್ದಾರೆ. ವಾಸ್ತವದಲ್ಲಿ ಸಹಾಯಕ ಪೊಲೀಸ್‌ ಆಯುಕ್ತರವರೆಗಿನ (ಎಸಿಪಿ) ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಬಹುದು. ಕರ್ನಾಟಕ ಪೊಲೀಸ್‌ ಕಾಯಿದೆಯ ಸೆಕ್ಷನ್‌ 77ರ ಅಡಿ ಎಸ್‌ಐಟಿಗೆ ಈ ಅಧಿಕಾರ ಇರುವುದಿಲ್ಲ” ಎಂದು ನ್ಯಾಯಾಲಯದ ಗಮನಸೆಳೆದರು.

Also Read
[ಜಾರಕಿಹೊಳಿ ಪ್ರಕರಣ] ವರದಿ ಒಪ್ಪುವುದು, ಮರು ತನಿಖೆಗೆ ಆದೇಶಿಸುವುದು ವಿಚಾರಣಾಧೀನ ನ್ಯಾಯಾಲಯಕ್ಕೆ ಬಿಟ್ಟ ವಿಚಾರ: ಎಜಿ

“ಮಾರ್ಚ್‌ 2ರಂದು ಮಾಧ್ಯಮಗಳಲ್ಲಿ ರಮೇಶ ಜಾರಕಿಹೊಳಿ ಅವರ ರಾಸಲೀಲೆ ಸುದ್ದಿ ವ್ಯಾಪಕವಾಗಿ ಪ್ರಕಟವಾಗಿತ್ತು. ಇದನ್ನು ಆಧರಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ರಮೇಶ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದರು. ಆನಂತರ ಆ ದೂರನ್ನು ಅವರು ಹಿಂಪಡೆದಿದ್ದರು. ಈ ನಡುವೆ, ಮಾರ್ಚ್‌ 9ರಂದು ರಮೇಶ ಜಾರಕಿಹೊಳಿ ಅವರು ತಮ್ಮ ವಿರುದ್ಧ ಪಿತೂರಿ ಮತ್ತು ಷಡ್ಯಂತ್ರ ಮಾಡಲಾಗುತ್ತಿದ್ದು, ರಾಜಕೀಯ ಎದುರಾಳಿಗಳು ತಮ್ಮ ತೇಜೋವಧೆ ಮಾಡುತ್ತಿದ್ದಾರೆ. ಹೀಗಾಗಿ, ಪ್ರಕರಣದ ಹಿಂದೆ ಇರುವವರನ್ನು ಬಯಲು ಮಾಡಬೇಕು ಎಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಬೊಮ್ಮಾಯಿ ಅವರು ಮಾರ್ಚ್‌ 10ರಂದು ಎಸ್‌ಐಟಿ ರಚಿಸಿ ವರದಿ ಸಲ್ಲಿಸಲು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಆದೇಶಿಸಿದ್ದರು," ಎಂದು ಎಸ್‌ಐಟಿ ರಚನೆಗೆ ಕಾರಣವಾದ ಹಿನ್ನೆಲೆಯನ್ನು ವಿವರಿಸಿದರು.

ಮುಂದುವರೆದು, "ಈ ಆದೇಶದ ಅನ್ವಯ ಬೆಂಗಳೂರು ಪೊಲೀಸ್‌ ಆಯುಕ್ತರು ಹಿರಿಯ ಐಪಿಎಸ್‌ ಅಧಿಕಾರಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಐಪಿಎಸ್‌ ಅಧಿಕಾರಿಗಳಾದ ಸಂದೀಪ್‌ ಪಾಟೀಲ್‌, ಅನುಚೇತ್‌ ಮತ್ತಿತರರನ್ನು ಒಳಗೊಂಡ ತಂಡ ರಚಿಸಿದ್ದರು. ಎಸ್‌ಐಟಿ ರಚಿಸುವಾಗ ಯಾವುದೇ ಎಫ್‌ಐಆರ್‌ ಎಲ್ಲೂ ದಾಖಲಾಗಿರಲಿಲ್ಲ. ಆದರೆ, ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ದೃಷ್ಟಿಯಿಂದ ಮಾರ್ಚ್‌ 13ರಂದು ರಮೇಶ ಜಾರಕಿಹೊಳಿ ಅವರು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ತಮ್ಮನ್ನು ಬ್ಲ್ಯಾಕ್‌ ಮೇಲ್‌ ಮಾಡಲಾಗುತ್ತಿದೆ ಎಂದು ಅನಾಮಿಕರ ವಿರುದ್ಧ ದೂರು ದಾಖಲಿಸಿದ್ದರು. ಆನಂತರ ಮಾರ್ಚ್‌ 26ರಂದು ಸಂತ್ರಸ್ತ ಯುವತಿಯು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ, ವಂಚನೆ, ನಂಬಿಕೆ ದ್ರೋಹ ಆರೋಪದಡಿ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ಆನಂತರ ಎಫ್‌ಐಆರ್‌ ದಾಖಲಾಗಿದೆ” ಎಂದು ಪ್ರಕರಣ ಸಾಗಿ ಬಂದ ವಿವರವನ್ನು ಪೀಠಕ್ಕೆ ನೀಡಿದರು.

ಈ ಮಧ್ಯೆ, ಜಾರಕಿಹೊಳಿ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಕಬ್ಬನ್‌ ಪಾರ್ಕ್‌ ಮತ್ತು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲಾಗಿರುವ ಪ್ರಕರಣಗಳ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿಲ್ಲ” ಎಂದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪೀಠವು ಮುಂದಿನ ವಿಚಾರಣೆಯ ವೇಳೆ ನಿಮ್ಮ ವಾದವನ್ನು ವಿಸ್ತೃತವಾಗಿ ಆಲಿಸಲಾಗುವುದು ಎಂದಿತು.

ಅಂತಿಮವಾಗಿ ಪೀಠವು “ಪ್ರಕರಣವು ಹೆಚ್ಚು ಸಮಯ ತೆಗೆದುಕೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ವಾಸ್ತವಿಕ ಅಂಶಗಳು, ಆಧಾರಗಳು ಮತ್ತು ಕೇಸ್‌ ಲಾ ಒಳಗೊಂಡ ಸಂಕ್ಷಿಪ್ತ ಟಿಪ್ಪಣಿಯನ್ನು ಸಿದ್ಧಪಡಿಸಲು ನಿಮ್ಮ ಕಿರಿಯ ವಕೀಲರಿಗೆ ಹೇಳಿ. ಅದನ್ನು ನಮಗೆ ಸಲ್ಲಿಸಿ” ಎಂದು ಎಲ್ಲರಿಗೂ ಸಲಹೆ ನೀಡುವ ಮೂಲಕ ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com