ಸೂಪರ್‌ ಸ್ಟಾರ್‌ ರಣವೀರ್‌ ಕಾನೂನಿಗಿಂತ ಮೇಲಿಲ್ಲ; ಬಲವಂತದ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“ನೀವು ರಣವೀರ್‌ ಸಿಂಗ್‌ ಅಥವಾ ಬೇರಾರೇ ಆದರೂ ಅಷ್ಟು ಹಗುರವಾಗಿ ಮಾತನಾಡಲಾಗದು. ಜನರ ಮೇಲೆ ಪ್ರಭಾವ ಹೊಂದಿರುವ ನಟನಾಗಿ ರಣವೀರ್‌ ಜವಾಬ್ದಾರಿಯಿಂದ ಇರಬೇಕು. ದೇವರ ಬಗ್ಗೆ ಮಾತನಾಡುವಾಗ ಅವರು ತಿಳಿದುಕೊಂಡು ಮಾತನಾಡಬೇಕಿತ್ತು” ಎಂದ ನ್ಯಾಯಾಲಯ.
ಸೂಪರ್‌ ಸ್ಟಾರ್‌ ರಣವೀರ್‌ ಕಾನೂನಿಗಿಂತ ಮೇಲಿಲ್ಲ; ಬಲವಂತದ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ
Published on

ಗೋವಾದಲ್ಲಿ ಈಚೆಗೆ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರದ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ ಸಂಬಂಧ ಕ್ರಿಮಿನಲ್‌ ಅಪರಾಧ ಪ್ರಕರಣಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು “ಸೂಪರ್‌ ಸ್ಟಾರ್‌ ಆಗಿದ್ದರೂ ಕಾನೂನಿನಿಗಿಂತ ಮೇಲಿಲ್ಲ” ಎಂದು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌, ಮುಂದಿನ ವಿಚಾರಣೆವರೆಗೆ ರಣವೀರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ಮಂಗಳವಾರ ನಿರ್ದೇಶಿಸಿದೆ.

ಚಾಮುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದ ಸಂಬಂಧ ದಾಖಲಾಗಿರುವ ಖಾಸಗಿ ದೂರು ಮತ್ತು ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ರಣವೀರ್‌ ಸಿಂಗ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Justice M Nagaprasanna
Justice M Nagaprasanna

“ರಣವೀರ್‌ ಸಿಂಗ್‌ ಅವರು ತಾವಾಡಿದ ಆಕ್ಷೇಪಾರ್ಹ ಮಾತುಗಳಿಗೆ ಕ್ಷಮೆ ಕೋರಿದ್ದಾರೆ. ಪ್ರಕರಣದ ಸಂಬಂಧ ಅವರು ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿಗೆ ಒಳಪಟ್ಟು, ಮುಂದಿನ ವಿಚಾರಣೆವರೆಗೆ ಅವರ ವಿರುದ್ಧ ರಾಜ್ಯ ಸರ್ಕಾರ ಬಲವಂತದ ಕ್ರಮಕೈಗೊಳ್ಳಬಾರದು. ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಬೇಕು” ಎಂದು ನಿರ್ದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ರಣವೀರ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು “ಐಎಫ್‌ಎಫ್‌ಐನಲ್ಲಿ ತಾನಾಡಿದ ಮಾತುಗಳಿಗೆ ರಣವೀರ್‌ ಸಿಂಗ್‌ ತಕ್ಷಣ ಕ್ಷಮೆ ಕೋರಿದ್ದಾರೆ. ಐಎಫ್‌ಎಫ್‌ಐ ಆಡಿದ ಮಾತುಗಳನ್ನಾಧರಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಣವೀರ್‌ ಅವರಿಂದ ಆಗಿರುವ ಪ್ರಮಾದಕ್ಕೆ, ಅದನ್ನು ಸರಿಪಡಿಸಲು ಏನಾದರೂ ಮಾಡಲು ಸಿದ್ಧರಿದ್ದಾರೆ. ಖಂಡಿತವಾಗಿಯೂ ಅವರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ” ಎಂದರು.

ಆಗ ಪೀಠವು “ಇಲ್ಲಿ ಎರಡು ವಿಚಾರಗಳಿವೆ. ದೇವತೆಯಾದ ಚಾಮುಂಡಿಯ ಪಾತ್ರವನ್ನು ರಿಷಬ್‌ ಶೆಟ್ಟಿ ನಿಭಾಯಿಸಿದ್ದಾರೆ. ಜನರ ಧಾರ್ಮಿಕ ಭಾವನೆಗಳ ಬಗ್ಗೆ ರಣವೀರ್‌ಗೆ ಗೊತ್ತಿಲ್ಲದಿರಬಹುದು. ಮಹಿಳಾ ದೆವ್ವ ಎಂದು ಹೇಳಿ ರಿಷಬ್‌ ಅವರ ನಟನೆಯನ್ನು ಮಿಮಿಕ್ರಿ ಮಾಡಿದ್ದಾರೆ. ಇದು ನಿಜಕ್ಕೂ ಭಾವನೆಗಳಿಗೆ ಘಾಸಿ ಮಾಡಿರುವ ವಿಚಾರ… ಇಷ್ಟು ಹಗುರವಾಗಿ ರಣವೀರ್‌ ಮಾತನಾಡಲಾಗದು. ನೀವು ರಣವೀರ್‌ ಸಿಂಗ್‌ ಅಥವಾ ಬೇರಾರೇ ಆದರೂ ಅಷ್ಟು ಹಗುರವಾಗಿ ಮಾತನಾಡಲಾಗದು. ಜನರ ಮೇಲೆ ಪ್ರಭಾವ ಹೊಂದಿರುವ ನಟನಾಗಿ ರಣವೀರ್‌ ಜವಾಬ್ದಾರಿಯಿಂದ ಇರಬೇಕು. ದೇವರ ಬಗ್ಗೆ ಮಾತನಾಡುವಾಗ ಅವರು ತಿಳಿದುಕೊಂಡು ಮಾತನಾಡಬೇಕಿತ್ತು. ದೈವವನ್ನು ದೆವ್ವ ಎನ್ನಲಾಗದು. ಇನ್ನೊಬ್ಬರ ಭಾವನೆಗೆ ಘಾಸಿ ಮಾಡುವ ಅಧಿಕಾರ ರಣವೀರ್‌ಗೆ ಇಲ್ಲ. ರಣವೀರ್‌ ಕ್ಷಮೆ ಕೋರಿರಬಹುದು. ಆದರೆ, ಹೇಳಿದ್ದೆಲ್ಲಾ ಹೊರಟು ಹೋಗುತ್ತದೆಯೇ? ನಾನು, ಜನರು ಅದನ್ನು ಮರೆತು ಬಿಡಬಹುದು. ಆದರೆ, ಇಂಟೆರ್‌ನೆಟ್‌ ಮರೆಯುವುದಿಲ್ಲ” ಎಂದಿತು.

“ವೇದಿಕೆಗೆ ಹೋಗಿ ಇದೆಲ್ಲವನ್ನೂ ಮಾಡುವಾಗ ಕಲಾವಿದರು ಎಚ್ಚರವಹಿಸಬೇಕು. ಅರಿವಿಲ್ಲದೇ ಏನೇನೋ ಮಾತನಾಡಲಾಗದು. ಇದನ್ನು ಇಷ್ಟು ಲಘುವಾಗಿ ಪರಿಗಣಿಸಲಾಗದು” ಎಂದಿತು.

Also Read
ಕಾಂತಾರಾದ ದೈವ ಪಾತ್ರ ಅಪಹಾಸ್ಯ: ನಾಳೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್‌

“ವಿಚಾರದ ಬಗ್ಗೆ ತಿಳಿಯದೇ ಮಾಡಿರುವ ಈ ಕೃತ್ಯವು ಅಜ್ಞಾನದ ಕೆಲಸವಾಗಿದೆ. ಆ ಭಾಗದಲ್ಲಿ ಇದೊಂದು ಪವಿತ್ರ ಆರಾಧನೆ. ಇದೊಂದು ಅಸಾಮಾನ್ಯ ಪ್ರದರ್ಶನ ಎಂದು ಹೇಳಿ ರಣವೀರ್‌ ನಿಲ್ಲಿಸಬೇಕಿತ್ತು. ಇದನ್ನು ಮೀರಿ ಮಿಮಿಕ್ರಿ ಮಾಡಲು ರಣವೀರ್‌ ಮುಂದಾಗಿದ್ದು, ತಪ್ಪಾಗಿದೆ. ರಣವೀರ್‌ ಸಿಂಗ್‌ ಸೂಪರ್‌ ಸ್ಟಾರ್‌ ಆದ ಮಾತ್ರಕ್ಕೆ ಅವರು ಕಾನೂನಿನ ಮೇಲಿಲ್ಲ” ಎಂದು ಪೀಠ ಹೇಳಿತು.

“ರಣವೀರ್‌ ಅಜಾಗರೂಕತೆಯಿಂದ ಹೇಳಿಕೆ ನೀಡಿದ್ದಾರೆ. ಆದರೆ, ಅದನ್ನು ನೀಡುವ ಅಧಿಕಾರ ಅವರಿಗಿಲ್ಲ. ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು. ಅಲ್ಲಿಯವರೆಗೆ ರಣವೀರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ರಣವೀರ್‌ ತನಿಖೆಗೆ ಸಹಕರಿಸಬೇಕು” ಎಂದು ಹೇಳಿ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಿತು.

Kannada Bar & Bench
kannada.barandbench.com