
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅತ್ಯಾಚಾರ ಮತ್ತು ಮಹಿಳೆಯರ ಖಾಸಗಿ ಅಂಗಾಂಗಗಳನ್ನು ಉದ್ದೇಶಪೂರ್ವಕವಾಗಿ ಅವರ ಸಮ್ಮತಿ ಇಲ್ಲದೆ ವಿಡಿಯೋ ಮಾಡಿ ಬಹಿರಂಗಪಡಿಸಿದ ಆರೋಪದ ಸೆಕ್ಷನ್‌ಗಳನ್ನು ದಾಖಲಿಸಿರುವುದು ಅವರು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಸ್ಪಷ್ಟಗೊಂಡಿದೆ.
ಮನೆ ಕೆಲಸದ ಮಹಿಳೆ ನೀಡಿದ ದೂರು ಆಧರಿಸಿ ಮೊದಲಿಗೆ ಹಾಸನ ಜಿಲ್ಲೆಯ ಹೊಳನರಸೀಪುರ ಟೌನ್ ಠಾಣೆಯಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.
ಆನಂತರ ಪ್ರಜ್ವಲ್ ಹಲವು ಮಹಿಳೆಯರನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಹಾಗೂ ತನಿಖೆ ಆಧರಿಸಿ ವಿಶೇಷ ತನಿಖಾ ದಳವು (ಎಸ್‌ಐಟಿ) ಮೇ 2ರಂದು ಸದರಿ ಪ್ರಕರಣಕ್ಕೆ ಹೆಚ್ಚುವರಿಯಾಗಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಸೇರ್ಪಡೆ ಮಾಡಲು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ಅನುಮತಿ ಕೋರಿತ್ತು. ಇದಕ್ಕೆ ಅಂದೇ ಸದರಿ ನ್ಯಾಯಾಲಯವು ಅನುಮತಿಸಿದೆ ಎಂದು ಪ್ರಜ್ವಲ್ ಅರ್ಜಿಯಲ್ಲಿ ವಿವರಿಸಲಾಗಿದೆ.
ಇದರ ಬೆನ್ನಿಗೇ, ಮೇ 13ರಂದು ಮಹಿಳೆಯರ ಖಾಸಗಿ ಅಂಗಾಂಗಗಳನ್ನು ಉದ್ದೇಶಪೂರ್ವಕವಾಗಿ ಅವರ ಸಮ್ಮತಿ ಇಲ್ಲದೇ ಮೊಬೈಲ್‌ನಲ್ಲಿ ಸೆರೆ ಹಿಡಿದು ಪ್ರಸರಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಎಸ್‌ಐಟಿ ಅನುಮತಿ ಕೋರಿತ್ತು. ಇದನ್ನೂ ವಿಚಾರಣಾಧೀನ ನ್ಯಾಯಾಲಯ ಅಂದೇ ಪುರಸ್ಕರಿಸಿದೆ ಎಂದು ಪ್ರಜ್ವಲ್ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯಲ್ಲಿ ವಿವರಿಸಲಾಗಿದೆ.
ಎಸ್‌ಐಟಿಯು ಏಪ್ರಿಲ್ 30ರಂದು ಸಿಆರ್‌ಪಿಸಿ ಸೆಕ್ಷನ್ 41(ಎ) ಅಡಿ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಮೇ 1ರಂದು ತನಿಖೆಯಲ್ಲಿ ಭಾಗವಹಿಸಲು ಏಳು ದಿನ ಕಾಲಾವಕಾಶ ನೀಡಬೇಕು ಎಂದು ತಮ್ಮ ವಕೀಲರ ಮೂಲಕ ಪ್ರತಿಕ್ರಿಯಿಸಲಾಗಿತ್ತು. ಆದರೆ, ಎಸ್‌ಐಟಿ ತನಿಖಾಧಿಕಾರಿಯು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರಜ್ವಲ್ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ವಿವರಿಸಲಾಗಿದೆ.
ಎಸ್‌ಐಟಿಯು ತನ್ನ ವಿರುದ್ಧ ಲುಕ್‌ಔಟ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ ಎಂಬ ಸುದ್ದಿ ಮಾಧ್ಯಮಗಳಿಂದ ತಿಳಿದಿದೆ. ಪರಿಸ್ಥಿತಿ ಮತ್ತು ತಮ್ಮ ವಿರುದ್ಧದ ಆರೋಪಗಳು ಜಾಮೀನುರಹಿತವಾಗಿದ್ದು, ಪೊಲೀಸರು ಬಂಧಿಸಿದರೆ ಅವಮಾನಕ್ಕೆ ಈಡಾಗುವುದರಿಂದ ನಿರೀಕ್ಷಣಾ ಜಾಮೀನು ಕೋರಿರುವುದಾಗಿ ಪ್ರಜ್ವಲ್ ಅರ್ಜಿಯಲ್ಲಿ ವಿವರಿಸಲಾಗಿದೆ. ಪ್ರಜ್ವಲ್ ಪರವಾಗಿ ವಕೀಲರಾದ ಜಿ ಅರುಣ್ ವಕಾಲತ್ತು ಹಾಕಿದ್ದಾರೆ.