[ಜಾರಕಿಹೊಳಿ ಪ್ರಕರಣ] ಸಂತ್ರಸ್ತೆ ದೂರಿನ ತನಿಖಾ ವರದಿಯನ್ನು ಎಸ್‌ಐಟಿ ಮುಖಸ್ಥರಿಗೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಹೈಕೋರ್ಟ್‌ ಅನುಮತಿ ಪಡೆಯದೇ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ಗೆ ವರದಿ ಸಲ್ಲಿಸುವಂತಿಲ್ಲ ಎಂಬ ಮಧ್ಯಂತರ ಆದೇಶವು ಮುಂದುವರಿಯಲಿದೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದ್ದು, ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಿದೆ.
[ಜಾರಕಿಹೊಳಿ ಪ್ರಕರಣ] ಸಂತ್ರಸ್ತೆ ದೂರಿನ ತನಿಖಾ ವರದಿಯನ್ನು ಎಸ್‌ಐಟಿ ಮುಖಸ್ಥರಿಗೆ  ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ
Ramesh Jarakiholi and Karnataka High Court

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಯುವತಿಯು ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್‌ ಆಯುಕ್ತೆ (ಎಸಿಪಿ) ಎಂ ಸಿ ಕವಿತಾ ಅವರು ಸಿದ್ಧಪಡಿಸಿರುವ ವರದಿಯನ್ನು ಸೂಕ್ತ ಆದೇಶಕ್ಕಾಗಿ ವಿಶೇಷ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರಿಗೆ ಸಲ್ಲಿಸಬೇಕು. ಆನಂತರ, ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳ ಪೈಕಿ ಎಸ್‌ಐಟಿ ಸಿಂಧುತ್ವವನ್ನು ಪ್ರಶ್ನಿಸಿರುವ ಮತ್ತು ನ್ಯಾಯಾಲಯದ ನಿಗಾವಣೆಯಲ್ಲಿ ಎಸ್‌ಐಟಿ ರಚಿಸಿ ಅದರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಂತ್ರಸ್ತೆ ಸಲ್ಲಿಸಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಮಾರ್ಚ್‌ 29ರಂದು ಬೆಂಗಳೂರು ಪೊಲೀಸ್‌ ಆಯುಕ್ತರು ಸಂತ್ರಸ್ತೆಯ ದೂರಿಗೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 173ರ ಅಡಿ ಎಸಿಪಿ ಕವಿತಾ ಅವರಿಗೆ ಪ್ರಕರಣದ ತನಿಖೆ ನಡೆಸುವಂತೆ ಆದೇಶಿಸಿದ್ದರು. ಇದರ ಅನ್ವಯ ಅವರು ತನಿಖೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿ ಅದೇ ಸ್ಥಿತಿಯಲ್ಲಿ ಇಡಲಾಗಿದೆ. ಐಪಿಎಸ್‌ ಅಧಿಕಾರಿ ಎಡಿಜಿಪಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ ಬಳಿಕ, ಕವಿತಾ ಅವರು ಸಿದ್ಧಪಡಿಸಿದ ವರದಿಯನ್ನು ಎಸ್‌ಐಟಿಯ ಮುಂದೆ ಮಂಡಿಸಬೇಕಾಗಿತ್ತು ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯವಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಮತ್ತು ಎಸ್‌ಐಟಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ಮಂಡಿಸಿದ ವಾದವು ಮುಕ್ತವಾಗಿರುತ್ತದೆ. ಹೈಕೋರ್ಟ್‌ ಅನುಮತಿ ಪಡೆಯದೇ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ಗೆ ವರದಿ ಸಲ್ಲಿಸುವಂತಿಲ್ಲ ಎಂಬ ಮಧ್ಯಂತರ ಆದೇಶವು ಮುಂದುವರಿಯಲಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದ್ದು, ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಸಂತ್ರಸ್ತೆ ಪರ ವಕೀಲೆ ಇಂದಿರಾ ಜೈಸಿಂಗ್‌ ಅವರು ಎಸ್‌ಐಟಿ ವರದಿಗೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದರು. ಆಗ ಮಧ್ಯಪ್ರವೇಶಿಸಿದ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಮುಗಿಸಿದೆ. ಅದನ್ನು ಸಮರ್ಥ ನ್ಯಾಯಾಲಯದ ಮುಂದೆ ಮಂಡಿಸಲು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂದು ಪ್ರಶ್ನಿಸಿತು.

ಆಗ ಜೈಸಿಂಗ್‌ ಅವರು “ಆರೋಪಿಯಾದ ಮಾಜಿ ಸಚಿವ ಜಾರಕಿಹೊಳಿ ಅವರ ಕೋರಿಕೆಯ ಮೇರೆಗೆ ಅಂದಿನ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ಎಸ್‌ಐಟಿ ರಚಿಸಲು ಬೆಂಗಳೂರು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ಆದೇಶಿಸಿದ್ದರು. ಇದನ್ನು ವಜಾ ಮಾಡಬೇಕು. ಹೈಕೋರ್ಟ್‌ ಉಸ್ತುವಾರಿಯಲ್ಲಿ ಎಸ್‌ಐಟಿ ಪ್ರಕರಣದ ತನಿಖೆ ನಡೆಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ. ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ತನಿಖೆ ನಡೆಸಿಲ್ಲ. ವರದಿಯನ್ನು ಪರಿಶೀಲಿಸಲೂ ಮುಂದಾಗಿಲ್ಲ. ಮುಖರ್ಜಿ ಅವರ ಸುದೀರ್ಘ ರಜೆಯ ಹಿನ್ನೆಲೆಯಲ್ಲಿ ಮತ್ತೊಬ್ಬ ಅಧಿಕಾರಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ” ಎಂದರು.

“ಎಫ್‌ಐಆರ್‌ ದಾಖಲಾಗದಿದ್ದರೂ ಗೃಹ ಸಚಿವರು ತಮ್ಮ ಸಹೋದ್ಯೋಗಿ ಸಚಿವರ ವಿರುದ್ಧದ ಆರೋಪದ ತನಿಖೆಗೆ ಆದೇಶಿಸಿದ್ದಾರೆ. ಇದಲ್ಲದೇ ಜುಲೈ 27ರಂದು ಪ್ರಕರಣವು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದರೂ ಎಸ್‌ಐಟಿ ತನಿಖೆಯ ಸಂಪೂರ್ಣ ವರದಿ ಆಂಗ್ಲ ಪತ್ರಿಕೆ ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾಗಿದೆ. ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿರುವ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದವರು ಯಾರು? ಮಾಧ್ಯಮ ವರದಿಯಲ್ಲಿ ಸಂತ್ರಸ್ತೆಯ ದೂರು ಸ್ವೀಕೃತಿಗೆ ಅರ್ಹವಾಗಿಲ್ಲ. ರಮೇಶ ಜಾರಕಿಹೊಳಿ ಅವರ ದೂರು ಸ್ವೀಕೃತಿಗೆ ಅರ್ಹವಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ಎಸ್‌ಐಟಿ ರಚನೆ ಕಾನೂನಿನ ಪ್ರಕಾರ ಸಿಂಧು ಹೇಗಾಗುತ್ತದೆ? ಒಂದೊಮ್ಮೆ ಎಸ್‌ಐಟಿ ರಚನೆ ಸಿಂಧುವಾದರೂ ಎಸ್‌ಐಟಿ ಮುಖ್ಯಸ್ಥರು ಎಲ್ಲಿದ್ದರು? ತಮಗೆ ಇರುವ ಅಧಿಕಾರವನ್ನು ಮತ್ತೊಬ್ಬರಿಗೆ ವರ್ಗಾಯಿಸಲು ಅವರಿಗೆ ಅಧಿಕಾರವಿದೆಯೇ? ಎಂಬ ಪ್ರಮುಖ ಪ್ರಶ್ನೆ ಎತ್ತಿದರು.

ಆಗ ನ್ಯಾಯಾಲಯವು “ಎಸ್‌ಐಟಿ ವರದಿಗೆ ಸದಸ್ಯರು ಸಹಿ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿತು. ಎಸ್‌ಐಟಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು ಹಲವು ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲಾಗಿದ್ದು, ಮುಖರ್ಜಿ ಅವರು ಸುದೀರ್ಘ ರಜೆಯಲ್ಲಿದ್ದರು. ಹೀಗಾಗಿ, ಪ್ರತ್ಯೇಕ ಆದೇಶ ಹೊರಡಿಸಿ ತನಿಖಾಧಿಕಾರಿಯನ್ನಾಗಿ ಐಪಿಎಸ್‌ ಅಧಿಕಾರಿ ಸಂದೀಪ್‌ ಪಾಟೀಲ್‌ ಅವರನ್ನು ನೇಮಿಸಲಾಗಿತ್ತು. ಇವರೊಬ್ಬರೇ ವರದಿಗೆ ಸಹಿ ಮಾಡಿದ್ದಾರೆ” ಎಂದರು.

ಇದರಿಂದ ಸಂತುಷ್ಟಗೊಳ್ಳದ ನ್ಯಾಯಾಲಯವು “ಎಸ್‌ಐಟಿ ಮುಖ್ಯಸ್ಥ ಮುಖರ್ಜಿ ಅವರು ವರದಿಗೆ ಸಹಿ ಹಾಕಿಲ್ಲ ಎಂದಾದರೆ ಎಸ್‌ಐಟಿಯನ್ನು ಏತಕ್ಕಾಗಿ ರಚಿಸಲಾಗಿದೆ? ಎಂದು ಪ್ರಶ್ನಿಸಿದರು. ಇದಕ್ಕೆ ಹಾರನಹಳ್ಳಿ ಸಮಜಾಯಿಷಿ ನೀಡುವ ಯತ್ನ ಮಾಡಿದರೂ ನ್ಯಾಯಾಲಯದ ಅದನ್ನು ಒಪ್ಪಲಿಲ್ಲ.

Also Read
[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ರಚನೆಯ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸದೇ ವರದಿ ಸಲ್ಲಿಸಲು ಅನುಮತಿಸಬಾರದು: ಜೈಸಿಂಗ್‌

ಊಟದ ಸಮಯದ ಬಳಿಕ ವಿಚಾರಣೆ ಮುಂದುವರಿಸಿದ ಪೀಠವು ಸಿಆರ್‌ಪಿಸಿ ಯಾವ ಸೆಕ್ಷನ್‌ ಅಡಿ ಎಸ್‌ಐಟಿ ರಚಿಸಲಾಗಿದೆ ಎಂದು ಹಾರನಹಳ್ಳಿ ಅವರನ್ನು ಪ್ರಶ್ನಿಸಿತು. ಆಗ ಹಾರನಹಳ್ಳಿ ಅವರು ಸಿಆರ್‌ಪಿಸಿ ಸೆಕ್ಷನ್‌ 36 ಮತ್ತು ಪೊಲೀಸ್‌ ಕಾಯಿದೆಯ ಅಡಿ ಎಸ್‌ಐಟಿ ರಚಿಸಲಾಗಿದೆ ಎಂದರು.

ಈ ಮಧ್ಯೆ, ಸಿಆರ್‌ಪಿಸಿ ಸೆಕ್ಷನ್‌ 36 ಅನ್ನು ಯಾವಾಗ ಅನ್ವಯಿಸಲಾಗುತ್ತದೆ. ಕ್ರಿಮಿನಲ್‌ ಪ್ರಕರಣ ದಾಖಲಾದ ಮೇಲೋ ಅಥವಾ ಕ್ರಿಮಿನಲ್‌ ಪ್ರಕರಣ ದಾಖಲಾಗುವುದಕ್ಕೂ ಮುನ್ನ ಅನ್ವಯಿಸಲಾಗುತ್ತದೆಯೇ? ಎಂದು ಮರು ಪ್ರಶ್ನೆ ಹಾಕಿತು. ಜಾರಕಿಹೊಳಿ ಅವರು ಮನವಿ ನೀಡಿದ ಬಳಿಕ ಎಸ್‌ಐಟಿ ರಚಿಸಲಾಗಿದೆ ಎಂದು ಹಾರನಹಳ್ಳಿ ಹೇಳಿದರು. ಹಾಗಾದರೆ, ಇಲ್ಲಿ ಸೆಕ್ಷನ್‌ 36 ಅನ್ವಯಿಸುವುದಿಲ್ಲ ಎಂದು ಪೀಠ ಹೇಳಿತು. ಪೀಠದ ನಿಲುವನ್ನು ಬದಲಿಸಲು ಹಾರನಹಳ್ಳಿ ಅವರು ವಿವಿಧ ಸಮರ್ಥನೆ ನೀಡಿದರೂ ನ್ಯಾಯಾಲಯ ಅದಕ್ಕೆ ಒಪ್ಪಲಿಲ್ಲ.

ರಮೇಶ್‌ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಿಚಾರಣೆಯಲ್ಲಿ ಭಾಗಿಯಾಗಿದ್ದರು.

Related Stories

No stories found.