[ಅತ್ಯಾಚಾರ ಪ್ರಕರಣ] ಆರೋಪಿ ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಸಂತ್ರಸ್ತರಿಗೆ ಮಾಹಿತಿ ನೀಡಬೇಕು: ಹೈಕೋರ್ಟ್‌

ಸಿಆರ್‌ಪಿಸಿ ಸೆಕ್ಷನ್‌ 439(1ಎ) ಅನುಪಾಲನೆ ಮಾಡದಿರುವುದರಿಂದ ನ್ಯಾ. ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಪೀಠವು ಆರೋಪಿಯಾದ ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಗೆ ಅಧೀನ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಪಡಿಸಿ ಆದೇಶಿಸಿದೆ.
Karnataka HC and POCSO
Karnataka HC and POCSO

ಅತ್ಯಾಚಾರ ಆರೋಪಿಯು ಐಪಿಸಿ ಅಥವಾ ಪೋಕ್ಸೊ ಕಾಯಿದೆ ಅಡಿ ಸಾಮಾನ್ಯ ಅಥವಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ಅಧೀನ ನ್ಯಾಯಾಲಯದ ರಿಜಿಸ್ಟ್ರಿಯು ಪ್ರಕರಣದ ಮಾಹಿತಿದಾರ/ಸಂತ್ರಸ್ತರು ಅಥವಾ ಅವರ ವಕೀಲರಿಗೆ ಕಾನೂನಿನ ಅನ್ವಯ ಮಾಹಿತಿ ನೀಡಬೇಕು, ಆರೋಪಿ ಪರ ವಕೀಲರು ಅಥವಾ ಆರೋಪಿಗೂ ಇದನ್ನು ಪಾಲಿಸಲು ಸೂಚಿಸಬೇಕು ಹಾಗೂ ಪ್ರಾಸಿಕ್ಯೂಷನ್‌ಗೂ ಮಾಹಿತಿ ಕೊಡಬೇಕು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಸಿಆರ್‌ಪಿಸಿ ಸೆಕ್ಷನ್‌ 439(1ಎ) ಅನುಪಾಲನೆ ಮಾಡದಿರುವುದರಿಂದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾದ ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಗೆ ಅಧೀನ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಪಡಿಸಿ ಆದೇಶಿಸಿದೆ.

ಮಾಹಿತಿದಾರರು ಅಥವಾ ಸಂತ್ರಸ್ತರನ್ನು ಅರ್ಜಿಯಲ್ಲಿ ಭಾಗಿಯಾಗಿಸದಿದ್ದರೂ ಮಾಹಿತಿದಾರರು/ಸಂತ್ರಸ್ತರಿಗೆ ಮಾಹಿತಿ ನೀಡುವ ಅಗತ್ಯತೆಯನ್ನು ಪೂರೈಸಬೇಕು ಎಂದು ನ್ಯಾಯಾಲಯ ಹೇಳಿದೆ.

“ಆರೋಪಿಯು ಮಾಹಿದಾರರು/ಸಂತ್ರಸ್ತರನನು ಪ್ರತಿವಾದಿಗಳನ್ನಾಗಿಸಿದರೆ ಅವರಿಗೆ ನೋಟಿಸ್‌ ಜಾರಿ ಮಾಡುವ ಕ್ರಮವನ್ನು ನ್ಯಾಯಾಲಯ ಕೈಗೊಳ್ಳಬೇಕು. ಒಂದೊಮ್ಮೆ ಆರೋಪಿಯ ಪರ ವಕೀಲರು ಮಾಹಿತಿದಾರರು/ಸಂತ್ರಸ್ತರನ್ನು ಪ್ರತಿವಾದಿಯನ್ನಾಗಿಸದಿದ್ದರೆ ಜಾಮೀನು ಅರ್ಜಿ ವಿಚಾರಣೆ ನಡೆಸುವ ಪೀಠವು ನೋಟಿಸ್‌ ಕಳುಹಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಅಲ್ಲದೇ, ಪ್ರಾಸಿಕ್ಯೂಷನ್‌ಗೂ ಮಾಹಿತಿದಾರರು/ಸಂತ್ರಸ್ತರಿಗೆ ಮಾಹಿತಿ ನೀಡಿರುವ ಕುರಿತಾದ ಹಿಂಬರಹವನ್ನು ಸಲ್ಲಿಸಲು ಆದೇಶಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಜಾಮೀನು ಅರ್ಜಿಯ ವಿಚಾರಣೆಯ ಕುರಿತು ನ್ಯಾಯಾಲಯ ಮತ್ತು ಪ್ರಾಸಿಕ್ಯೂಷನ್‌ ಕಡೆಯಿಂದ ಮಾಹಿತಿದಾರರು/ಸಂತ್ರಸ್ತರಿಗೆ ಮಾಹಿತಿ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರಿಂದ ಅಗತ್ಯ ಕಾನೂನು ನೆರವು ಪಡೆಯುವುದು ಸಂತ್ರಸ್ತರ ಹಕ್ಕಾಗಿದೆ ಎಂದೂ ನ್ಯಾಯಾಲಯ ಹೇಳಿದೆ.

“ಒಂದೊಮ್ಮೆ ಮಾಹಿತಿದಾರರು/ಸಂತ್ರಸ್ತರನ್ನು ಪ್ರಾಸಿಕ್ಯೂಷನ್‌ ಪತ್ತೆಹಚ್ಚಲು ವಿಫಲವಾದರೆ ಕಾರಣಗಳನ್ನು ಒಳಗೊಂಡ ಸ್ಥಿತಿಗತಿ ವರದಿ ಸಲ್ಲಿಸಬೇಕು. ಇದನ್ನು ಪರಿಗಣಿಸಿ ಸಂಬಂಧಿತ ನ್ಯಾಯಾಲಯವು ಅಗತ್ಯ ಆದೇಶ ಮಾಡಬಹುದುದಾಗಿದೆ. ನೋಟಿಸ್‌ ನೀಡಿದ ಹೊರತಾಗಿಯೂ ಮಾಹಿತಿದಾರರು/ಸಂತ್ರಸ್ತರು ನ್ಯಾಯಾಲಯದ ಮುಂದೆ ಬಾರದಿದ್ದರೆ ಅರ್ಹತೆಯ ಆಧಾರದಲ್ಲಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿಬಹುದು. ಅಲ್ಲದೇ, ಪದೇಪದೇ ನೋಟಿಸ್‌ ನೀಡಿದರೂ ಸಂತ್ರಸ್ತರು ವಿಚಾರಣೆಗೆ ಹಾಜರಾಗಿಲ್ಲ ಎಂಬ ಅಂಶವನ್ನು ದಾಖಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಮಂಡ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಆರೋಪಿಯು ಹಾಸ್ಟೆಲ್‌ ವಾರ್ಡನ್‌ ಆಗಿ ಕೆಲಸ ಮಾಡುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಸಂತ್ರಸ್ತೆಯ ಮೇಲೆ ಪದೇಪದೇ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬುದು ಆರೋಪವಾಗಿದೆ. ಮಂಡ್ಯದ ವಿಶೇಷ ನ್ಯಾಯಾಲಯವು ತನಗೆ ಆರೋಪಿಯ ಜಾಮೀನು ಅರ್ಜಿಯ ಕುರಿತು ಮಾಹಿತಿ ನೀಡಿಲ್ಲ ಎಂದು ಸಂತ್ರಸ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com