ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕರಿಸಿದ ಚಿತ್ರದುರ್ಗದ ವಿಶೇಷ ನ್ಯಾಯಾಲಯ

ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.1ರಂದು ಮುರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದರು. ಮೂರು ದಿನಗಳ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು. ಆನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Murugha Sharanaru and Chitradurga court
Murugha Sharanaru and Chitradurga court

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶರಾದ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.

ಮುರುಘಾ ಶರಣರ ಪರವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಸೆಪ್ಟೆಂಬರ್‌ 19ರಂದು ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಧೀಶರಾದ ಬಿ ಕೆ ಕೋಮಲಾ ಅವರು ಇಂದು ಪ್ರಕಟಿಸಿದರು.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅಕ್ಕಮಹಾದೇವಿ ಹಾಸ್ಟೆಲ್‌ ವಾರ್ಡನ್‌ ಎಸ್‌ ರಶ್ಮಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಗುರುವಾರ ವಜಾ ಮಾಡಿತ್ತು. ಮೂರನೇ ಆರೋಪಿ ಬಸವಾದಿತ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಈಚೆಗೆ ತಿರಸ್ಕರಿಸಲಾಗಿತ್ತು.

ನಾಲ್ಕನೇ ಆರೋಪಿ ಪರಮಶಿವಯ್ಯ ಮತ್ತು ಐದನೇ ಆರೋಪಿ ಎನ್‌ ಗಂಗಾಧರ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯು ಸೋಮವಾರಕ್ಕೆ ನಿಗದಿಯಾಗಿದೆ. ಈ ಇಬ್ಬರ ಪರವಾಗಿ ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ವಿವಿಧ ದಾಖಲೆಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ವಿಶೇಷ ನ್ಯಾಯಾಲಯವು ವಜಾ ಮಾಡಿತ್ತು.

Also Read
ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರ ಜಾಮೀನು ಆದೇಶ ಕಾಯ್ದಿರಿಸಿದ ಚಿತ್ರದುರ್ಗದ ವಿಶೇಷ ನ್ಯಾಯಾಲಯ

ಚೆಕ್‌ ಮತ್ತು ಮತ್ತಿತರರ ದಾಖಲೆಗಳಿಗೆ ಸಹಿ ಮಾಡಲು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯವು ಹೃದಯ ಸಂಬಂಧಿ ಸಮಸ್ಯೆಗೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಶಿವಮೂರ್ತಿ ಮುರುಘಾ ಶರಣರಿಗೆ ಅನುಮತಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 1ರಂದು ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದರು. ಮೂರು ದಿನಗಳ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು. ಆನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

Related Stories

No stories found.
Kannada Bar & Bench
kannada.barandbench.com