
ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿ ಬಂಧಿತನಾಗಿರುವ ವ್ಯಕ್ತಿಯಿಂದ ಮಧ್ತರ ಜೀವನಾಂಶ ಪಡೆಯಲು ಮಹಿಳಗೆ ಅವಕಾಶ ನೀಡುವುದನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಇತ್ತೀಚೆಗೆ ಪ್ರಶ್ನಿಸಿದೆ.
ಜೀವನಾಂಶ ನೀಡುವ ವಿಚಾರದಲ್ಲಿ ಮಹಿಳೆಯ ಪರವಾಗಿ ನ್ಯಾಯಾಲಯ ನಿಲ್ಲುವುದು ಕಷ್ಟವಾಗುತ್ತದೆ ಎಂದು ನ್ಯಾಯಮೂರ್ತಿ ವಿನೋದ್ ಚಟರ್ಜಿ ಕೌಲ್ ಹೇಳಿದರು.
ತಾವಿಬ್ಬರೂ ಮದುವೆಯಾಗದಿದ್ದರೂ ಒಂದು ದಶಕದಿಂದ ಸತಿ- ಪತಿಯಂತೆ ಜೀವಿಸುತ್ತಿದ್ದೇವೆ. ಆದ್ದರಿಂದ ತಮ್ಮನ್ನು ಪತಿ- ಪತ್ನಿಯಂತೆಯೇ ಪರಿಗಣಿಸಿ ತನಗೆ ಆತ ಜೀವನಾಂಶ ನೀಡುವಂತೆ ಆದೇಶಿಸಬೇಕು ಎಂದು ಮಹಿಳೆ ಕೋರಿದ್ದರು. ಆ ಮಹಿಳೆ ಮಗುವಿಗೆ ಕೂಡ ಜನ್ಮ ನೀಡಿದ್ದರು.
ಆದರೆ ಮದುವೆ ಅಥವಾ ಆ ರೀತಿಯ ಸಂಬಂಧ ಬೆಳೆಸಿಕೊಂಡಿದ್ದಾಗ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಜೋಡಿ ನಿಜವಾಗಿಯೂ ಪತಿ–ಪತ್ನಿಯಂತೆ ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರೆ, ಆ ಸಹಜೀವನವನ್ನು ಅತ್ಯಾಚಾರವೆಂದು ಹೇಳಲು ಸಾಧ್ಯವಿಲ್ಲ. ಆದರೆ ಪತಿ- ಪತ್ನಿಯ ನೈಜ ಸಂಬಂಧವೇ ಇರದಿದ್ದಾಗ ಮಾತ್ರ ಐಪಿಸಿ ಸೆಕ್ಷನ್ 376ರ ಅಡಿ ಅಪರಾಧವಾಗುತ್ತದೆ ಎಂದು ನ್ಯಾಯಾಲಯ ವಿವರಿಸಿತು. ಅಂತೆಯೇ ಮಹಿಳೆಗೆ ಮಧ್ಯಂತರ ಜೀವನಾಂಶ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅದು ಎತ್ತಿ ಹಿಡಿಯಿತು.
ತಾನು ಅವಿವಾಹಿತ ಎಂದು ತಿಳಿಸಿದ್ದ ತನ್ನ ಸಂಗಾತಿ ಮದುವೆಯಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ್ದ. ಹತ್ತಾರು ವರ್ಷ ಕಾಲ ಒಟ್ಟಿಗೆ ವಾಸಿಸುತ್ತಿದ್ದರೂ, ಪರಿಣಾಮ ಮಗುವನ್ನು ಪಡೆದಿದ್ದರೂ ತನ್ನ ಸಂಗಾತಿ ಮದುವೆಗೆ ಒಪ್ಪುತ್ತಿಲ್ಲ ಎಂದು ದೂರಿ ಆಕೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಅಂತಿಮವಾಗಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರಕ್ಕೆ ಶಿಕ್ಷೆ ವಿಧಿಸಲಾಗಿತ್ತು.
ಆದರೆ ಮಹಿಳೆ ತನಗೆ ಹಾಗೂ ತನ್ನ ಮಗುವಿನ ಪೋಷಣೆಗಾಗಿ ಬಂಧಿತ ವ್ಯಕ್ತಿಯಿಂದ ಜೀವನಾಂಶ ಕೋರಿದ್ದರು. ವಿಚಾರಣಾ ನ್ಯಾಯಾಲಯ ಮಹಿಳೆ ಮತ್ತು ಆಕೆಯ ಮಗುವಿಗೆ ಕ್ರಮವಾಗಿ ₹2,000 ಮತ್ತು ₹1,000 ಮಧ್ಯಂತರ ಜೀವನಾಂಶ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಆತ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಪರಿಣಾಮ ಅದು ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆಕೆ, ದೀರ್ಘಕಾಲ ತಾವಿಬ್ಬರೂ ಸಹಜೀವನ ನೀಡುತ್ತಿದ್ದು ಸಹಜೀವನ ನಡೆಸುತ್ತಿರುವ ಮಹಿಳೆಯರಿಗೆ ಸಿಆರ್‌ಪಿಸಿ ಸೆಕ್ಷನ್ 125 ರ ಪ್ರಕಾರ ನೀಡುವ ರಕ್ಷಣೆಯನ್ನು ತನಗೂ ನೀಡಬೇಕು ಎಂದು ಕೋರಿದ್ದರು.
ವಾದ ಆಲಿಸಿದ ನ್ಯಾಯಾಲಯ ಒಂದು ವೇಳೆ ಕಕ್ಷಿದಾರರು ನಿಜವಾಗಿಯೂ ಗಂಡ ಹೆಂಡತಿಯಂತೆ ಒಟ್ಟಿಗೆ ವಾಸಿಸುತ್ತಿದ್ದರೆ ಆಗ ಅದು ಅತ್ಯಾಚಾರ ಆರೋಪಕ್ಕೆ ಆಧಾರವಾಗುವುದಿಲ್ಲ ಎಂದಿತು.
ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ಜೀವನಾಂಶ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಇನ್ನೂ ಹೊರಬಿದ್ದಿಲ್ಲ ಎಂಬುದನ್ನು ಗಮನಿಸಿದ ಅದು, ಮಹಿಳೆಗೆ ಮಧ್ಯಂತರ ಜೀವನಾಂಶ ನಿರಾಕರಿಸಿದ್ದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.