ಗೌರವಾನ್ವಿತ ನಟ ಪುನೀತ್‌ ರಾಜಕುಮಾರ್‌ ನಿಧನರಾದ ಬಳಿಕ ಆಕ್ಷೇಪಾರ್ಹ ಪೋಸ್ಟ್‌ ಹಾಕಿರುವುದು ದುಃಖದ ವಿಚಾರ: ಹೈಕೋರ್ಟ್‌

“ಪುನೀತ್‌ ಅವರು ಯುವಕರು ಮದ್ಯ ಸೇವನೆ ಮಾಡುವುದನ್ನು ವಿರೋಧಿಸುತ್ತಿದ್ದರು. ಸಾಮಾಜಿಕ ಮಾಧ್ಯಮ ಬಳಸಬಹುದು ಎಂದು ಇಂಥ ಪೋಸ್ಟ್‌ ಹಾಕಿದ್ದೀರಾ? ಇಂಥ ಪೋಸ್ಟ್‌ ಹಾಕುವುದರ ಬಗ್ಗೆ ರಿತ್ವಿಕ್‌ಗೆ ತಿಳಿದಿರಬೇಕಿತ್ತು” ಎಂದು ಕಿಡಿಕಾರಿದ ನ್ಯಾಯಾಲಯ.
Puneeth Rajkumar & Karnataka HC
Puneeth Rajkumar & Karnataka HC
Published on

ಕನ್ನಡದ ಸುಪ್ರಸಿದ್ಧ ದಿವಂಗತ ನಟ ಪುನೀತ್‌ ರಾಜಕುಮಾರ್‌ ಅವರ ಸಾವಿನ ಬೆನ್ನಿಗೇ ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ ಬೆಂಗಳೂರಿನ ಯುವಕನನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಕಟು ಟೀಕೆಗೆ ಗುರಿಪಡಿಸಿದ್ದು, ಆತ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂಬುದನ್ನು ಪರಿಗಣಿಸಿ ಆತನ ವಿರುದ್ಧದ ಕಾನೂನು ಪ್ರಕ್ರಿಯೆಯನ್ನು ರದ್ದುಪಡಿಸಿದೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಆನಂತರದ ಕಾನೂನು ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ರಿತ್ವಿಕ್‌ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

Justice Suraj Govindraj
Justice Suraj Govindraj

“ಅರ್ಜಿದಾರ ರಿತ್ವಿಕ್ ಮಾಡಿರುವ ಹೇಳಿಕೆಯನ್ನು ಪರಿಗಣಿಸುವುದಲ್ಲ. ಸಂದರ್ಭ ಮತ್ತು ಯಾವ ಅರ್ಥದಲ್ಲಿ ಆತ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾನೆ ಎಂಬುದನ್ನು ಪರಿಗಣಿಸಬೇಕಿದೆ. ಗೌರವಾನ್ವಿತ ನಟ ಪುನೀತ್‌ ರಾಜಕುಮಾರ್‌ ಅವರು ನಿಧನರಾದ ಬಳಿಕ ಈ ಪೋಸ್ಟ್‌ ಹಾಕಿರುವುದು ದುಃಖಕರ ವಿಚಾರ. ಆ ಸಂದರ್ಭದಲ್ಲಿ ಇಂಥ ಪೋಸ್ಟ್‌ ಹಾಕುವುದರ ಬಗ್ಗೆ ರಿತ್ವಿಕ್‌ಗೆ ತಿಳಿದಿರಬೇಕಿತ್ತು. ಪುನೀತ್‌ ಅವರು ಯುವಕರು ಮದ್ಯ ಸೇವನೆ ಮಾಡುವುದನ್ನು ವಿರೋಧಿಸುತ್ತಿದ್ದರು. ಮದ್ಯದ ಬಾಟಲಿಯ ಮೇಲಿನ ಬಳಕೆ ಮಾಡಿರುವ ಪದವು ಐಟಿ ಕಾಯಿದೆ ಸೆಕ್ಷನ್‌ 67ರ ವ್ಯಾಪ್ತಿಗೆ ಬರಲಿದೆ” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರ ರಿತ್ವಿಕ್ ಭಾರತೀಯ ನಿವಾಸಿಯಲ್ಲ, ಈಚೆಗೆ ಆತ ಭಾರತಕ್ಕೆ ಬಂದಿದ್ದಾನೆ. ಆತ ಅರ್ಥಶಾಸ್ತ್ರ ವಿಷಯದಲ್ಲಿ ಉತ್ತಮ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾನೆ ಎಂಬುದನ್ನು ಪರಿಗಣಿಸಿ, ಆತನ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಸುವುದು ಆತನ ಭವಿಷ್ಯಕ್ಕೆ ಹಾನಿ ಮಾಡಲಿದೆ. ಆತನಿಗೆ ವಿನಾಯಿತಿ ತೋರಿಸಬೇಕಿದೆ ಎಂಬುದನ್ನು ಪರಿಗಣಿಸಿ ಆತನಿಗೆ ಎಚ್ಚರಿಕೆ ನೀಡಿ, ಅರ್ಜಿದಾರನಿಗೆ ಸಲಹೆ ನೀಡಲು ವಕೀಲರಿಗೆ ನಿರ್ದೇಶಿಸಿ, ಅರ್ಜಿಯನ್ನು ಪುರಸ್ಕರಿಸಲಿಲಾಗಿದೆ. ಇದರ ಭಾಗವಾಗಿ ಸುಬ್ರಹ್ಮಣ್ಯ ನಗರದ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ ೬೭ ಮತ್ತು ಐಪಿಸಿ ಸೆಕ್ಷನ್‌ ೧೫೩ಎ ಅಡಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ಮತ್ತು ಆನಂತರದ ಕಾನೂನು ಪ್ರಕ್ರಿಯೆ ವಜಾಗೊಳಿಸಲಾಗಿದೆ” ಎಂದು ಪೀಠ ಆದೇಶಿಸಿತು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಇಂಥ ಸಂದೇಶವನ್ನು ಏಕೆ ಹಾಕಿದಿರಿ? ಸಾಮಾಜಿಕ ಮಾಧ್ಯಮ ಬಳಸಬಹುದು ಎಂದು ಇಂಥ ಪೋಸ್ಟ್‌ ಹಾಕಿದ್ದೀರಾ? ಪುನೀತ್‌ ಅವರ ನಿಧನದ ಸುದ್ದಿ ತಿಳಿದು ಇಂಥ ಪೋಸ್ಟ್‌ ಹಾಕಬಹುದೇ? ವಿಚಾರಣೆ ನಡೆಯಲಿ ಬಿಡಿ. ಅಲ್ಲಿ ನಿರ್ಧಾರವಾಗಲಿ ಬಿಡಿ. ಯಾವ ಪದ ಬಳಸಲಾಗಿದೆ ಎಂಬುದು ಗೊತ್ತೇ? ಪುನೀತ್‌ ಅವರು ರಾಜಕುಮಾರ್‌ ಅವರ ಪುತ್ರ. ಅವರು ನಿಧನರಾಗಿದ್ದಾರೆ. ಅವರಿಗೆ ಈ ಪದ ಬಳಕೆ ಮಾಡಲಾಗಿದೆ. ಅದರರ್ಥವೇನು? ಇದನ್ನು ನಾವು ಏರುಧ್ವನಿಯಲ್ಲಿ ಹೇಳುತ್ತಿಲ್ಲ ಅಷ್ಟೆ. ಇದು ಸಾಮಾನ್ಯ ಪೋಸ್ಟ್‌ ಅಲ್ಲ” ಎಂದಿತು.

ಅರ್ಜಿದಾರರ ಪರ ವಕೀಲೆ ಪದ್ಮಾವತಿ ಅವರು “ರಿತ್ವಿಕ್‌ ಲಂಡನ್‌ನಲ್ಲಿ ಹುಟ್ಟಿ ಬೆಳೆದಿದ್ದು, ಅವರಿಗೆ ಪೋಸ್ಟ್‌ನ ಪರಿಣಾಮ ಗೊತ್ತಿರಲಿಲ್ಲ. ಪ್ರಮಾದವನ್ನು ಒಪ್ಪಿಕೊಂಡು ಋತ್ವಿಕ್‌ ವಿಷಾದಿಸಿದ್ದಾನೆ. ಎರಡು ವರ್ಷಗಳ ಹಿಂದೆ ಈತ ಭಾರತಕ್ಕೆ ಮರಳಿದ್ದಾನೆ. ಪೋಸ್ಟ್‌ ಅನ್ನು ಶರ್ಮಾನ ಸ್ನೇಹಿತ ಹಾಕಿದ್ದಾನೆ. ಅಶೋಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಆತ ಪದವಿ ಓದುತ್ತಿದ್ದಾನೆ. ಇದು ಇನ್‌ಸ್ಟಾಗ್ರಾಂನಲ್ಲಿ ಹಾಕುವ ಸಂದೇಶವಾಗಿರಲಿಲ್ಲ. ಅರ್ಜಿದಾರ ಒಳ್ಳೆಯ ವಿದ್ಯಾರ್ಥಿಯಾಗಿದ್ದು, ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಸುವುದು ಆತನ ಭವಿಷ್ಯದ ಜೀವನಕ್ಕೆ ಗಂಭೀರ ಪರಿಣಾಮ ಉಂಟು ಮಾಡಲಿದೆ. ಹೀಗಾಗಿ, ಕಾನೂನು ಪ್ರಕ್ರಿಯೆ ವಜಾಗೊಳಿಸಬೇಕು” ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ 22 ವರ್ಷದ ರಿತ್ವಿಕ್‌ ಶರ್ಮಾ 1.11.2021ರಂದು ಕಿಂಗ್‌ಫಿಷರ್‌ ಬಿಯರ್‌ ಬಾಟಲಿಯ ಮೇಲೆ “ರಾಜಕುಮಾರ್‌ CUNT ನಮ್ಮನ್ನು ತಡೆಯಲಾಗಲಿಲ್ಲ” ಎಂದು ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದನು. ಈ ಪೋಸ್ಟ್‌ ಅನ್ನು ಗೌರವಾನ್ವಿತ ಪುನೀತ್‌ ನಿಧನರಾದ ಬಳಿಕ ಹಾಕಲಾಗಿದೆ. ಇದು ಸಾಮಾಜಿಕ ಶಾಂತಿಗೆ ಭಗ್ನ ತರುವ ಕೃತ್ಯ ಎಂದು ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು.

Kannada Bar & Bench
kannada.barandbench.com