ಕಾಲ್ತುಳಿತ: ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಸರ್ಕಾರದ ಮನವಿಗೆ ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ವಿರೋಧ

ಆರೋಪ ಪಟ್ಟಿಯ ಸಂಜ್ಞೇ ತೆಗೆದುಕೊಳ್ಳುವುದು, ಸಮನ್ಸ್‌ ಜಾರಿ ಮಾಡಿರುವುದನ್ನು ಪ್ರಶ್ನಿಸಬಹುದು. ಸಿಆರ್‌ಪಿಸಿ ಸೆಕ್ಷನ್‌ 239, 227 ಅಡಿ ಆರೋಪ ಮುಕ್ತಿ ಕೋರಬಹುದು. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಸರ್ಕಾರ ವಾದಿಸಬಹುದು ಎಂದ ನಾಗೇಶ್‌.
KSCA, RCB, DNA Entrainment Networks & Karnataka HC
KSCA, RCB, DNA Entrainment Networks & Karnataka HC
Published on

ಕಾಲ್ತುಳಿತ ಪ್ರಕರಣದ ಕುರಿತಾದ ಆರೋಪ ಪಟ್ಟಿಯನ್ನು ತನಿಖಾಧಿಕಾರಿಯು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿದರೂ ಅದರ ಸಂಬಂಧಿತ ಎಫ್‌ಐಆರ್‌ ಪ್ರಶ್ನಿಸಿರುವ ಅರ್ಜಿಗಳನ್ನು ನಿರ್ಧರಿಸುವ ಅಧಿಕಾರ ಹೈಕೋರ್ಟ್‌ಗೆ ಇದೆ ಎಂಬುದಕ್ಕೆ ಸಂಬಂಧಿಸಿದ ತೀರ್ಪುಗಳ ಕುರಿತು ವಾದಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಕಾಲ್ತುಳಿತ ಪ್ರಕರಣದ ಸಂಬಂಧ ರಾಯಲ್‌ ಚಾಲೆಂಜರ್ಸ್‌, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌, ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ನ ಸುನೀಲ್‌ ಮ್ಯಾಥ್ಯೂ ಮತ್ತಿತರರು ಪ್ರತ್ಯೇಕವಾಗಿ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿರುವ ಮೂರು ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿರುವ ಒಂಭತ್ತು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice Mohammad Nawaz
Justice Mohammad Nawaz

ರಾಜ್ಯ ಸರ್ಕಾರದ ಪರ ವಿಶೇಷ ವಕೀಲ ಬಿ ಟಿ ವೆಂಕಟೇಶ್‌ ಅವರು “ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಕುರಿತು ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಆರೋಪ ಪಟ್ಟಿ ಸಿದ್ಧವಾಗಿದ್ದು, ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್‌ಐಆರ್‌ ದಾಖಲಾಗಿದ್ದು, ಒಂದು ಪ್ರಕರಣದ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ಆದೇಶಿಸಿದೆ. 17.6.2025ರಂದು ಪ್ರಕರಣದ ತನಿಖೆ ಮುಂದುವರಿಸಬಹುದು. ಅರ್ಜಿದಾರರನ್ನು ಬಂಧಿಸುವಂತಿಲ್ಲ ಅಥವಾ ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಸಿಐಡಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸುವುದಕ್ಕೂ ಮುನ್ನ ಹೈಕೋರ್ಟ್‌ ಅನುಮತಿ ಪಡೆಯಬೇಕು ಎಂದು ಮಧ್ಯಂತರ ಆದೇಶ ಮಾಡಿದೆ. ಅರ್ಜಿದಾರರು ತನಿಖೆಗೆ ಸಹಕರಿಸಿದ್ದು, ಅವರ ಹೇಳಿಕೆ ದಾಖಲಿಸಲಾಗಿದೆ. ಇದರ ಆಧಾರದಲ್ಲಿ ಆರೋಪ ಪಟ್ಟಿ ಸಿದ್ಧಪಡಿಸಿದ್ದು, ಅದನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಇದಕ್ಕಾಗಿ ನ್ಯಾಯಾಲಯದ ಈ ಹಿಂದಿನ ನಿರ್ದೇಶನದಂತೆ ಅನುಮತಿ ಕೋರಲಾಗುತ್ತಿದೆ” ಎಂದರು.

ಆಗ ಪೀಠವು “ಅಂತಿಮ ವರದಿಯನ್ನು ಅರ್ಜಿದಾರರು ಪ್ರಶ್ನಿಸಬಹುದಲ್ಲವೇ?” ಎಂದಿತು.

ಇದಕ್ಕೆ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “8.7.2025ರಂದು ಹೈಕೋರ್ಟ್‌ ತನ್ನ ಅನುಮತಿ ಪಡೆಯದೇ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬಾರದು ಎಂದು ಮಧ್ಯಂತರ ಆದೇಶ ಮಾಡಿದೆ. ಸರ್ಕಾರವು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರೆ ಈ ನ್ಯಾಯಾಲಯವು ಅರ್ಜಿದಾರರ ಪರವಾಗಿ ಮಾಡಿರುವ ಮಧ್ಯಂತರ ಆದೇಶ ಹೋಗಲಿದೆ” ಎಂದು ಆರೋಪ ಪಟ್ಟಿ ಸಲ್ಲಿಸುವ ಸರ್ಕಾರದ ಕೋರಿಕೆಗೆ ತೀವ್ರ ವಿರೋಧ ದಾಖಲಿಸಿದರು.

ಮುಂದುವರಿದು, “ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿದಾಕ್ಷಣ ಎಫ್‌ಐಆರ್‌ ವಜಾಕೋರಿರುವ ಅರ್ಜಿಯು ಅಮಾನ್ಯವಾಗುವುದಿಲ್ಲ ಎಂದು ಇತ್ತೀಚಿನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದು, ಈ ಕುರಿತು ಹಲವು ತೀರ್ಪುಗಳಿವೆ. ಆರೋಪ ಪಟ್ಟಿ ಸಿದ್ಧವಾಗಿದ್ದರೂ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಮುಂದುವರಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಮುಖೇಶ್‌ ವರ್ಸಸ್‌ ಉತ್ತರ ಪ್ರದೇಶ ರಾಜ್ಯ, ಶೈಲೇಶ್‌ ಭಾಯ್‌ ವರ್ಸಸ್‌ ಗುಜರಾತ್‌ ರಾಜ್ಯ, ಜೋಸೆಫ್‌ ಪ್ರಕರಣದಲ್ಲೂ ಆರೋಪ ಪಟ್ಟಿ ಸಲ್ಲಿಸಿದ ಮಾತ್ರಕ್ಕೆ ರಿಟ್‌ ಅರ್ಜಿ ಅಮಾನ್ಯವಾಗುವುದಿಲ್ಲ. ಹಾಲಿ ಪ್ರಕರಣದಲ್ಲಿ ಎಫ್‌ಐಆರ್‌ಗಳನ್ನು ವಜಾ ಮಾಡುವಂತೆ ಕೋರಲಾಗಿದೆ. ಈ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿದರೆ ಆರೋಪ ಪಟ್ಟಿಯೇ ಅಮಾನ್ಯವಾಗಲಿದೆ” ಎಂದರು.

Also Read
ಕಾಲ್ತುಳಿತ ಪ್ರಕರಣ: ಆರ್‌ಸಿಬಿ, ಡಿಎನ್‌ಎ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂಬ ಆದೇಶ ವಿಸ್ತರಿಸಿದ ಹೈಕೋರ್ಟ್‌

“ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿದರೆ ಆನಂತರ ವಿಚಾರಣಾಧೀನ ನ್ಯಾಯಾಲಯವು ಸಂಜ್ಞೇ ತೆಗೆದುಕೊಂಡಿರುವುದು ಮತ್ತು ಸಮನ್ಸ್‌ ಜಾರಿಗೊಳಿಸುವುದನ್ನು ಪ್ರಶ್ನಿಸಬಹುದು. ಸಿಆರ್‌ಪಿಸಿ ಸೆಕ್ಷನ್‌ 239, 227 ಅಡಿ ಆರೋಪ ಮುಕ್ತಿ ಕೋರಬಹುದು. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಸರ್ಕಾರ ವಾದಿಸಬಹುದು. ಸುಪ್ರೀಂ ಕೋರ್ಟ್‌ ಈ ವಾದವನ್ನು ವಿಫಲಗೊಳಿಸಿದ್ದು, ಹೈಕೋರ್ಟ್‌ ಪ್ರಕರಣದ ಮೆರಿಟ್‌ ನಿರ್ಧರಿಸಬಹುದು ಎಂದಿದೆ. ಆರೋಪ ಪಟ್ಟಿ ಸಿದ್ಧವಾದ ಮಾತ್ರಕ್ಕೆ ಹಾಲಿ ಅರ್ಜಿಗಳು ಅಮಾನ್ಯವಾಗುವುದಿಲ್ಲ” ಎಂದು ಸಮರ್ಥಿಸಿದರು.

ಇದನ್ನು ಆಲಿಸಿದ ಪೀಠವು ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಉಲ್ಲೇಖಿಸಿರುವ ತೀರ್ಪುಗಳ ಮೇಲೆ ವಾದಿಸಲು ಸರ್ಕಾರದ ವಿಶೇಷ ವಕೀಲ ಬಿ ಟಿ ವೆಂಕಟೇಶ್‌ ಅವರಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಜನವರಿ 20, 2026ಕ್ಕೆ ಮುಂದೂಡಿತು.

Kannada Bar & Bench
kannada.barandbench.com