ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ರಾಜ್ಯ ಸರ್ಕಾರದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್‌

ಪಿಎಸ್‌ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ 2022ರ ಸೆಪ್ಟೆಂಬರ್‌ 28ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅಕ್ಟೋಬರ್‌ 19ರವರೆಗೂ ವಿಸ್ತರಿಸಿದ ನ್ಯಾಯಾಲಯ.
PSI Exam
PSI Exam

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಅಕ್ಟೋಬರ್‌ 19ರವರೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ವಿಸ್ತರಿಸಿ ಆದೇಶಿಸಿದೆ.

ಕೋಲಾರದ ಚಂದನ್‌ ಎನ್‌ ವಿ, ವಸಂತ್‌ ನಾಯಕ್‌, ಆಶಾ ಸಣಕಲ್ಲ ಮತ್ತು ರಾಜೇಶ್ವರಿ ಹಾಗೂ ಇತರರು ಪ್ರತ್ಯೇಕವಾಗಿ ಮರು ಪರೀಕ್ಷೆ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಪಿ ಎನ್‌ ದೇಸಾಯಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಅಭ್ಯರ್ಥಿಯೊಬ್ಬರನ್ನು ಪ್ರತಿನಿಧಿಸಬೇಕಿದ್ದ ವಕೀಲರೊಬ್ಬರು ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 19ಕ್ಕೆ ಮುಂದೂಡಿತು.

Also Read
ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

ಅಲ್ಲದೆ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಪಿಎಸ್‌ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ 2022ರ ಸೆಪ್ಟೆಂಬರ್‌ 28ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅಕ್ಟೋಬರ್‌ 19ರವರೆಗೂ ವಿಸ್ತರಿಸಿ, ವಿಭಾಗೀಯ ಪೀಠವು ಇದೇ ವೇಳೆ ಆದೇಶಿಸಿತು.

ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿದ್ದ ಸರ್ಕಾರವು ಮರುಪರೀಕ್ಷೆ ನಡೆಸುವುದಾಗಿ 2022ರ ಏಪ್ರಿಲ್‌ 29ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅದನ್ನು 2022ರ ಜುಲೈ 19ರಂದು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com