ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

“ಮುಂದಿನ ವಿಚಾರಣೆವರೆಗೆ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಬಾರದು” ಎಂದು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ಮಾಡಿದೆ.
PSI Exam
PSI Exam
Published on

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಮುಂದಿನ ವಿಚಾರಣೆವರೆಗೆ ತಡೆ ನೀಡಿದೆ.

ಕೋಲಾರದ ಚಂದನ್‌ ವಿ, ವಸಂತ್‌ ನಾಯಕ್‌, ಆಶಾ ಸಣಕಲ್ಲ ಮತ್ತು ಇತರರು ಪ್ರತ್ಯೇಕವಾಗಿ ಮರು ಪರೀಕ್ಷೆ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಚಂದ್ರಶೇಖರ್‌ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠವು ಬುಧವಾರ ನಡೆಸಿತು.

“ಮುಂದಿನ ವಿಚಾರಣೆವರೆಗೆ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಬಾರದು” ಎಂದು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ಮಾಡಿದೆ.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಪಿ ಎಸ್ ರಾಜಗೋಪಾಲ್, ಡಿ ಆರ್ ರವಿಶಂಕರ್ ಮತ್ತು ಎ ಎಸ್ ಪೊನ್ನಣ್ಣ ಅವರು “ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದೆ ಮತ್ತು 32 ಮಂದಿ ಕಳಂಕಿತರು ಎಂದು ಗುರುತಿಸಿ ಅವರ ವಿರುದ್ಧ ಆರೋಪಪಟ್ಟಿಯನ್ನೂ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಹೀಗಾಗಿ, ಕಳಂಕಿತರನ್ನು ಮತ್ತು ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಅವಕಾಶವಿರುವುದರಿಂದ ಮರು ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ” ಎಂದು ಆಕ್ಷೇಪಿಸಿದರು.

ಮುಂದುವರಿದು, “ಈಗಾಗಲೇ ಆಯ್ಕೆಯಾಗಿರುವ ನೂರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಲಿದೆ. ಹಲವು ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿದ್ದು, ಅವರಿಗೆ ಉದ್ಯೋಗ ಲಭಿಸುವುದು ಕಷ್ಟವಾಗಲಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್ ಸುಬ್ರಮಣ್ಯ ಅವರು “ಪಿಎಸ್‌ಐ ಹಗರಣ ದೊಡ್ಡದಿದ್ದು, ಹಲವು ಅಧಿಕಾರಿಗಳು, ಅಭ್ಯರ್ಥಿಗಳು, ಮಧ್ಯವರ್ತಿಗಳು ಭಾಗಿಯಾಗಿದ್ದಾರೆ. ಪರೀಕ್ಷೆಯಲ್ಲೇ ಅಕ್ರಮವಾಗಿರುವುದರಿಂದ ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ” ಎಂದರು.

Also Read
ರಾಜ್ಯ ಸರ್ಕಾರದ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಆದೇಶ ಎತ್ತಿ ಹಿಡಿದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

“ಪೊಲೀಸ್‌ ನೇಮಕಾತಿ ಪ್ರಾಧಿಕಾರದ ವಿರುದ್ಧವೇ ಅಕ್ರಮವೆಸಗಿರುವ ಆರೋಪವಿರುವ ಹಿನ್ನೆಲೆಯಲ್ಲಿ ಕಳಂಕಿತ ಹಾಗೂ ಕಳಂಕಿತರಲ್ಲದ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮರುಪರೀಕ್ಷೆಯ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ವಿವರಿಸಿದರು.

ರಾಜ್ಯ ಸರ್ಕಾರವು ಏಪ್ರಿಲ್‌ 29ರಂದು ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ಆದೇಶ ಹೊರಡಿಸಿತ್ತು. ಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸುವ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ, ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಜುಲೈ 19ರಂದು ವಜಾಗೊಳಿಸಿತ್ತು.

Kannada Bar & Bench
kannada.barandbench.com