
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ ಸೋಮಶೇಖರ್ ಅವರನ್ನು ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಕೊಲಿಜಿಯಂ ನಿರ್ಧಾರಕ್ಕೆ ಬೆಂಗಳೂರು ವಕೀಲರ ಸಂಘವು (ಎಎಬಿ) ಸಂತಸ ವ್ಯಕ್ತಪಡಿಸಿದೆ.
ನ್ಯಾ. ಸೋಮಶೇಖರ್ ಅವರ ಹೆಸರು ಶಿಫಾರಸ್ಸು ಮಾಡುವ ಮೂಲಕ ನ್ಯಾಯಾಂಗ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಜಾರಿಯ ನಿಟ್ಟಿನಲ್ಲಿ ಕೊಲಿಜಿಯಂ ಸರಿಯಾದ ಹೆಜ್ಜೆ ಇಟ್ಟಿದ್ದು, ಇದು ಸದ್ಯದ ಅಗತ್ಯವಾಗಿದೆ ಎಂದು ಎಎಬಿ ಬಣ್ಣಿಸಿದೆ.
ಅಲ್ಲದೆ, ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಯನ್ನು ಶೀಘ್ರ ತುಂಬಲು ಅಗತ್ಯವಾಗುವಂತೆ ಹೈಕೋರ್ಟ್ ಕೊಲಿಜಿಯಂಗಳು ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸ್ಸು ಮಾಡುವಂತೆ ಸೂಚಿಸಲು ಸಿಜೆಐ ಅವರಿಗೆ ಎಎಬಿ ಮನವಿ ಮಾಡಿದೆ. ಈ ಸಂದರ್ಭದಲ್ಲಿಯೂ ಸಾಮಾಜಿಕ ನ್ಯಾಯದ ಪಾಲನೆ ಒತ್ತು ನೀಡುವಂತೆ ಅದು ಕೋರಿದೆ.
ಅಂತೆಯೇ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಆಸ್ತಿ ವಿವರ ಬಹಿರಂಗಪಡಿಸಿರುವಂತೆಯೇ ದೇಶದ ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳು ಆಸ್ತಿ ವಿವರ ಬಹಿರಂಗಪಡಿಸಲು ನಿರ್ದೇಶಿಸಿಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಎಎಬಿ ಮನವಿ ಮಾಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಿರುವಂತೆ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳೂ ತಮ್ಮ ಆಸ್ತಿ ವಿವರ ಬಹಿರಂಗಪಡಿಸಬೇಕು ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ ಎಂದು ಎಎಬಿ ಹೇಳಿದೆ.
ಮುಂದುವರೆದು, ಸಂವಿಧಾನ ಹೇಳುವಂತೆ ಸರ್ವೋಚ್ಚ ನ್ಯಾಯಾಲಯದದ ಆದೇಶವು ನೆಲದ ಕಾನೂನಾಗಿರಲಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಂತೆ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳೂ ತಮ್ಮ ಆಸ್ತಿ ವಿವರ ಬಹಿರಂಗಪಡಿಸುತ್ತಾರೆ ಎಂಬ ಭರವಸೆ ಹೊಂದಿದ್ದು, ಇದು ಹೈಕೋರ್ಟ್ ಮತ್ತು ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶರಿಗೆ ನೀತಿ ಸಂಹಿತೆಯ ಭಾಗವಾಗಬೇಕು ಎಂದು ಎಎಬಿ ಅಭಿಪ್ರಾಯಪಟ್ಟಿದೆ.