

ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ನಡೆದಂತೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ದಂಗೆ ಮತ್ತು ಹಿಂಸಾಚಾರ ನಡೆಯಬೇಕು ಎಂದು ಪರಿಸರ ಹೋರಾಟಗಾರ, ಚಿಂತಕ ಸೋನಮ್ ವಾಂಗ್‌ಚುಕ್ ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಮತ್ತು ಲಡಾಖ್ ಆಡಳಿತ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ವಾಂಗ್ ಚುಕ್ ಕೇಂದ್ರ ಸರ್ಕಾರವನ್ನು ಪ್ರತ್ಯೇಕಿಸಿ ಬಿಂಬಿಸುವಂತಹ ವಿಭಜನೆಯ ಸನ್ನೆಗಳನ್ನು ನೀಡಿದ್ದಾರೆ. ಜೆನ್ ಜೀ (1997ರಿಂದ 2012ರವರೆಗೆ ಜನಿಸಿದ ಪೀಳಿಗೆ) ಯುವಕರನ್ನು ರಕ್ತಪಾತ ಮತ್ತು ಆಂತರಿಕ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅದು ದೂರಿದೆ.
ಕೇಂದ್ರ ಸರ್ಕಾರದಲ್ಲಿರುವವರನ್ನು ಅವರು ಎಂದು ಪ್ರತ್ಯೇಕಿಸಿ ವಾಂಗ್‌ಚುಕ್ ಬಿಂಬಿಸುತ್ತಿದ್ದಾರೆ. ಎನ್‌ಎಸ್‌ಎ ಅಡಿ ವಾಂಗ್‌ಚುಕ್ ಬಂಧಿಸಲು ನಾವು ಮತ್ತು ಅವರು ಎಂಬ ಪ್ರತ್ಯೇಕತೆ ಸಾಕು. ಇಲ್ಲಿ ನಾವು ಮತ್ತು ಅವರು ಎಂಬುದು ಇಲ್ಲ, ನಾವೆಲ್ಲರೂ ಭಾರತೀಯರು ಎಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಬಿ ವರಾಳೆ ಅವರಿದ್ದ ಪೀಠದೆದುರು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
“ನೇಪಾಳ ಅಥವಾ ಬಾಂಗ್ಲಾದೇಶದಂತೆ ಲಡಾಖ್ ಆಗಬೇಕೆಂದು ಆತ ಬಯಸುತ್ತಿದ್ದಾರೆಯೇ? ಅವರು ಸ್ಪಷ್ಟವಾಗಿ ಹೇಳಲು ಬಯಸುತ್ತಿರುವುದು ಇದನ್ನೇ. ಬಾಂಗ್ಲಾದೇಶದಲ್ಲಿ ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ಪ್ರಭಾವಿತರಾಗುವ ಯುವಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ದೇಶದಲ್ಲಿ ನಮ್ಮದು ಅವರದು ಎಂದು ಹೇಳಿದ ಕ್ಷಣ ನೀವು ದೇಶದ ವಿರುದ್ಧ ಏನೋ ಮಾಡುತ್ತಿದ್ದೀರಿ. ಇದು ಅವರ ಸರ್ಕಾರ ಅಲ್ಲ ನಮ್ಮ ಸರ್ಕಾರ” ಎಂದು ಮೆಹ್ತಾ ವಿವರಿಸಿದರು.
ಲಡಾಖ್‌ಗೆ ಪ್ರತ್ಯೇಕ ರಾಜ್ಯ ಸ್ಥಾನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಚಿಂತಕ, ಪರಿಸರವಾದಿ, ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಆಲಿಸಿತು.
ನೇಪಾಳದಲ್ಲಿ ಆದಂತೆ ಯುವ ಪೀಳಿಗೆಯನ್ನು ಅವರು ದಾರಿ ತಪ್ಪಿಸುತ್ತಿದ್ದಾರೆ. ಅರಬ್ ಕ್ರಾಂತಿಯಲ್ಲಿ (ಅರಬ್ ಸ್ಪ್ರಿಂಗ್) ಆತ್ಮಾಹುತಿ ನಡೆದಿತ್ತು. ಜೆನ್ ಜೀ ಇದನ್ನೇ ಮಾಡಬೇಕೆಂದು ಅವರು (ವಾಂಗ್‌ಚುಕ್) ಬಯಸುತ್ತಿದ್ದಾರೆ. ಇದು ರಕ್ತಪಾತ ಸಹಿತ ಅಂತರ್ಯುದ್ಧ ನಡೆಸಲು ನೀಡಿದ ಆಹ್ವಾನವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಗಡಿಗಳಲ್ಲಿ ನಿಯೋಜಿಸಲಾದ ಸಶಸ್ತ್ರ ಪಡೆಗಳಿಗೆ ಸರಕು ಸರಂಜಾಮು ಪೂರೈಸಲು ಲಡಾಖ್ ನಿರ್ಣಾಯಕವಾಗಿದ್ದು ವಾಂಗ್ಚುಕ್ ಇಲ್ಲಿ ಜನಾಭಿಪ್ರಾಯ ಸಂಗ್ರಹದ ಹೇಳಿಕೆ ನೀಡಿದ್ದರು ಎಂದು ಸರ್ಕಾರ ಆರೋಪಿಸಿದೆ.
ಇದಕ್ಕೆ ವಿರುದ್ಧವಾಗಿ, ಸರ್ಕಾರವನ್ನು ವಿಮರ್ಶಿಸುವುದು ಮತ್ತು ಪ್ರತಿಭಟಿಸುವುದು ಪ್ರಜಾಸತ್ತಾತ್ಮಕ ಹಕ್ಕು ಎಂದು ವಾಂಗ್‌ಚುಕ್ ಪರ ವಕೀಲರು ವಾದಿಸಿದರು. ನಾಳೆಯೂ (ಮಂಗಳವಾರ ಮಧ್ಯಾಹ್ನ) ವಿಚಾರಣೆ ಮುಂದುವರೆಯಲಿದೆ.