[ಪಾಸ್‌ಪೋರ್ಟ್‌ ನವೀಕರಣ] ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿರುವಾಗ ವಿಚಾರಣಾ ನ್ಯಾಯಾಲಯದ ಅನುಮತಿ ಕೋರಲು ಒತ್ತಾಯಿಸಲಾಗದು

ಅಧಿಸೂಚನೆಯ ಉದ್ದೇಶ, ವಸ್ತು ಮತ್ತು ಜಾರಿ ಸಾಧ್ಯತೆಯನ್ನು ಇಲ್ಲಿ ಗಮನಿಸಬೇಕಿದೆ. ಇಲ್ಲವಾದರೆ, ಕಾನೂನಿನ ಅರ್ಥವಂತಿಕೆಯನ್ನು ಹೂತುಹಾಕಿ ಬರಿದೇ ಅದರ ಕಪ್ಪು ಅಕ್ಷರಗಳನ್ನು ಕಾರ್ಯಗತಗೊಳಿಸಿದಂತಾಗುತ್ತದೆ ಎಂದ ಕರ್ನಾಟಕ ಹೈಕೋರ್ಟ್‌.
Justice Krishna S Dixit and Karnataka HC
Justice Krishna S Dixit and Karnataka HC

ವಿಚಾರಣಾಧೀನ ನ್ಯಾಯಾಲಯದಿಂದ ಯಾವುದೇ ಆದೇಶ ನಿರೀಕ್ಷಿಸದೇ ಆರು ವಾರಗಳ ಒಳಗೆ ಮಹಿಳೆ ಸಲ್ಲಿಸಿರುವ ಪಾಸ್‌ಪೋರ್ಟ್‌ ನವೀಕರಣ ಕೋರಿಕೆಯನ್ನು ಪರಿಗಣಿಸುವಂತೆ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗೆ (ಆರ್‌ಪಿಒ) ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

2021ರ ಸೆಪ್ಟೆಂಬರ್‌ 6ರಂದು ಹೊರಡಿಸಿರುವ ಆದೇಶದ ಅನ್ವಯ ಆರ್‌ಪಿಒ ತಮ್ಮ ಪಾಸ್‌ಪೋರ್ಟ್‌ ನವೀಕರಣ ಮನವಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಬೆಂಗಳೂರಿನ ಕಸ್ತೂರಿ ರಾಜುಪೇಟ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

‍“ಪಾಸ್‌ಪೋರ್ಟ್‌ ನವೀಕರಣಗೊಂಡರು ಅಥವಾ ಅದು ನವೀಕರಣಗೊಳ್ಳದಿದ್ದರೂ ಸಂಬಂಧಪಟ್ಟ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯದ ಅನುಮತಿ ಪಡೆಯದೇ ಅರ್ಜಿದಾರೆಯು ವಿದೇಶ ಪ್ರಯಾಣ ಮಾಡುವಂತಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಕಸ್ತೂರಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣವಿದ್ದು, ಅದಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಹೀಗಾಗಿ, ಪಾಸ್‌ಪೋರ್ಟ್‌ ಕಾಯಿದೆಯ 1993ರ ಆಗಸ್ಟ್‌ 25ರ ಅಧಿಸೂಚನೆಯ ಅನ್ವಯ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯದಿಂದ ಅನುಮತಿ ಕೋರುವುದು ಅವರಿಗೆ ಅಸಾಧ್ಯ” ಎಂದು ಪೀಠ ಹೇಳಿದೆ.

"1993ರ ಅಧಿಸೂಚನೆಯು ಸಾಮಾನ್ಯ ಸಂದರ್ಭಗಳಿಗೆ ಅನ್ವಯಿಸುತ್ತದೆ. ಕ್ರಿಮಿನಲ್ ಪ್ರಕ್ರಿಯೆಗಳನ್ನು ತಡೆಹಿಡಿಯದೇ ಇದ್ದಾಗ ವಿಚಾರಣಾ ನ್ಯಾಯಾಧೀಶರು ಕೆಲಸ ಮಾಡಲು ಮುಕ್ತವಾಗಿರುತ್ತಾರೆ. ಇದಕ್ಕೆ ವಿರುದ್ಧವಾದ ವಾದವು ಅಸಾಧ್ಯವಾದ ಕಾರ್ಯವನ್ನು ಮಾಡಲು ಜನರನ್ನು ಪ್ರೇರೇಪಿಸಿದಂತಾಗುತ್ತದೆ" ಎಂದು ಪೀಠ ಅಭಿಪ್ರಾಯಪಟ್ಟಿದೆ.

"ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿರುವಾಗ ಕ್ರಿಮಿನಲ್‌ ಪ್ರಕರಣ ಬಾಕಿ ಇದೆ ಎಂಬ ಏಕೈಕ ಕಾರಣ ನೀಡಿ ಅಧಿಸೂಚನೆಯನ್ನು ಮುಂದೆ ಮಾಡಿ ಪಾಸ್‌ಪೋರ್ಟ್‌ ನವೀಕರಿಸಲು ನಿರಾಕರಿಸಲಾಗದು. ಅಧಿಸೂಚನೆಯ ಉದ್ದೇಶ, ವಸ್ತು ಮತ್ತು ಜಾರಿ ಸಾಧ್ಯತೆಯನ್ನು ಇಲ್ಲಿ ಗಮನಿಸಬೇಕಿದೆ. ಇಲ್ಲವಾದರೆ, ಕಾನೂನಿನ ಅರ್ಥವಂತಿಕೆಯನ್ನು ಹೂತುಹಾಕಿ ಬರಿದೇ ಅದರ ಕಪ್ಪು ಅಕ್ಷರಗಳನ್ನು ಕಾರ್ಯಗತಗೊಳಿಸಿದಂತಾಗುತ್ತದೆ" ಎಂದು ಪೀಠ ಹೇಳಿದೆ.

Also Read
ಮಗಳ ಪಾಸ್‌ಪೋರ್ಟ್‌ಗಾಗಿ ವಿಚ್ಛೇದಿತ ತಾಯಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ: ಪಾಸ್‌ಪೋರ್ಟ್‌ ಅಧಿಕಾರಿಗೆ ₹ 25 ಸಾವಿರ ದಂಡ

ಅರ್ಜಿದಾರೆ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್‌ ಪ್ರಕರಣದ ಎಲ್ಲಾ ಪ್ರಕ್ರಿಯೆಗಳಿಗೆ ಹೈಕೋರ್ಟ್‌ 2020ರ ಡಿಸೆಂಬರ್‌ 10ರಂದು ತಡೆ ನೀಡಿದೆ” ಎಂದು ವಾದಿಸಿದ್ದರು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಹಾಯಕ ಸಾಲಿಸಿಟರ್‌ ಜನರಲ್‌ ಶಾಂತಿ ಭೂಷಣ್‌ ಎಚ್‌ ಅವರು “ಕ್ರಿಮಿನಲ್‌ ಪ್ರಕರಣಕ್ಕೆ ತಡೆ ನೀಡಿದ್ದರೂ ಅದನ್ನು ಬಾಕಿ ಎಂದು ಪರಿಗಣಿಸಲಾಗುತ್ತದೆ” ಎಂದು ಹೇಳುವ ಮೂಲಕ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಹೊರಡಿಸಿರುವ ಆದೇಶವನ್ನು ಸಮರ್ಥಿಸಿದ್ದರು.

Attachment
PDF
Kasturi Rajupeta Versus UOI (2).pdf
Preview

Related Stories

No stories found.
Kannada Bar & Bench
kannada.barandbench.com