2009ರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ ಮತ್ತು ಸಂಬಂಧಿತ ನಿಯಮಗಳ ಅಡಿಯಲ್ಲಿ ಮನೆಗೆಲಸದವರನ್ನು ನೋಂದಾಯಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿದೆ.
ಕಾಯಿದೆಯಡಿ ನೋಂದಾಯಿತರಾದ ವ್ಯಕ್ತಿಗಳಿಗೆ ವಿವಿಧ ಯೋಜನೆಗಳ ಅಡಿ ಬೇರೆ ಬೇರೆ ರೀತಿಯ ಪ್ರಯೋಜನಗಳು ದೊರೆಯಲಿವೆ. ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ಈ ನೋಟಿಸ್ ಜಾರಿ ಮಾಡಿದೆ.
ನ್ಯಾಷನಲ್ ಸ್ಯಾಂಪಲ್ ಸರ್ವೇ ಪ್ರಕಾರ, 39 ಲಕ್ಷ ಜನ, ಅಂದರೆ, 13 ಲಕ್ಷ ಪುರುಷರು ಹಾಗೂ 26 ಲಕ್ಷ ಮಹಿಳೆಯರು ಮನೆಗಲೆಸದವರಾಗಿ ದುಡಿಯುತ್ತಿದ್ದಾರೆ. ಆದರೆ ನಿಜವಾದ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪ್ರತ್ಯೇಕ ಪಾತ್ರೆಗಳ ಬಳಕೆ, ಶೌಚಾಲಯಗಳ ಬಳಕೆ ನಿಷೇಧ ಸೇರಿದಂತೆ ಮನೆಗೆಲಸದವರ ವಿರುದ್ಧದ ವಿವಿಧ ತರತಮ ನೀತಿಗಳನ್ನು ಅರ್ಜಿಯಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ.
ಕಾಯಿದೆಯಡಿ ಮನೆಗೆಲಸದವರನ್ನು ನೋಂದಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದು, ವಿಶೇಷವಾಗಿ ಕೋವಿಡ್-19 ಅವಧಿಯಲ್ಲಿ, ಬೆಂಗಳೂರು ನಗರದ ನಾಲ್ಕು ಲಕ್ಷಕ್ಕೂ ಹೆಚ್ಚು ಮೆನಗೆಲಸದವರು ಮತ್ತು ರಾಜ್ಯದಾದ್ಯಂತ ಇನ್ನೂ ಅನೇಕರು ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು, ಉದ್ಯೋಗವಿಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯಿಲ್ಲದೆ ಉಳಿದಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ಅವಧಿಯಲ್ಲಿ ಅಸಂಘಟಿತ ಕಾರ್ಮಿಕ ವಲಯದ ವಿವಿಧ ವರ್ಗಗಳಿಗೆ ರಾಜ್ಯ ಸರ್ಕಾರ ಹಣಕಾಸಿನ ನೆರವು ಘೋಷಿಸಿದೆ. ಆದರೆ ಬಹುತೇಕ ಮನೆಗೆಲಸದವರಿಗೆ ಜೀವನೋಪಾಯದ ಮಾರ್ಗಗಳು ಕಾಣದಿದ್ದರೂ ಸರ್ಕಾರ ಅಂಹವರಿಗೆ ಯಾವುದೇ ಆರ್ಥಿಕ ಸಹಾಯ ನೀಡಿಲ್ಲ ಎಂದು ದೂರಲಾಗಿದೆ. ಮನೆಗೆಲಸದವರು ತಮ್ಮ ಕೆಲಸದ ಸ್ಥಳಗಳಲ್ಲಿ ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ಪ್ರವೃತ್ತಿಯ ಬಗ್ಗೆಯೂ ಅರ್ಜಿ ಕಳವಳ ವ್ಯಕ್ತಪಡಿಸಿದೆ.
“ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ ನಿರ್ದಿಷ್ಟವಾಗಿ ಗೃಹ ಕಾರ್ಮಿಕರನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡರೂ ಕೂಡ ಸ್ಥಳೀಯ ದೂರು ಸಮಿತಿಗಳು ನಿಷ್ಕ್ರಿಯವಾಗಿರುವ ಕಾರಣ ಮನೆಗೆಲಸದವರು ತಮ್ಮ ಉದ್ಯೋಗದಾತರಿಂದ ಲೈಂಗಿಕ ಕಿರುಕುಳಕ್ಕೆ ತುತ್ತಾಗುತ್ತಿದ್ದಾರೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಯಿದೆಯಡಿ ಮನೆಗೆಲಸದವರನ್ನು ನೋಂದಣಿ ಮಾಡಬೇಕು ಎಂದು ಒಕ್ಕೂಟ ಕೋರಿದ್ದು ಮಾರ್ಚ್ 25 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
[ಅರ್ಜಿಯನ್ನು ಇಲ್ಲಿ ಓದಿ]