Karnataka HC and BDA
Karnataka HC and BDA

ಶಿವರಾಮ ಕಾರಂತ ಬಡಾವಣೆಯ ದತ್ತಾಂಶ, ತಪಶೀಲು ಪಟ್ಟಿ ಸಿದ್ಧಪಡಿಸಲು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶನ

ಹೈಕೋರ್ಟ್‌ ನಿವೃತ್ತ ನ್ಯಾ. ಎ ವಿ ಚಂದ್ರಶೇಖರ್‌ ಅವರ ನೇತೃತ್ವದ ಸಮಿತಿಯು ವಿಸರ್ಜನೆಯಾಗಿರುವುದರಿಂದ ಅದರ ನೆರವು ಪಡೆದು ಇನ್ವೆಂಟರಿ ಸಿದ್ಧಪಡಿಸಬಾರದು ಎಂದ ನ್ಯಾಯಾಲಯ.

ಬೆಂಗಳೂರಿನ ಡಾ. ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ದತ್ತಾಂಶ, ತಪಶೀಲು ಪಟ್ಟಿ (ಇನ್ವೆಂಟರಿ) ಸಿದ್ಧಪಡಿಸುವಂತೆ ರಿಜಿಸ್ಟ್ರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್‌ ಮತ್ತು ಎಂ ನಾಗಪ್ರಸನ್ನ ಅವರ ನೇತೃತ್ವದ ವಿಶೇಷ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಹೈಕೋರ್ಟ್‌ ನಿವೃತ್ತ ನ್ಯಾ. ಎ ವಿ ಚಂದ್ರಶೇಖರ್‌ ಅವರ ನೇತೃತ್ವದ ಸಮಿತಿಯು ವಿಸರ್ಜನೆಯಾಗಿರುವುದರಿಂದ ಅದರ ನೆರವು ಪಡೆದು ಇನ್ವೆಂಟರಿ ಸಿದ್ಧಪಡಿಸಬಾರದು. ಆದ್ದರಿಂದ, ಇನ್ವೆಂಟರಿ ಸಿದ್ಧಪಡಿಸುವ ವಿಚಾರದಲ್ಲಿ ಸಮಿತಿ ಯಾವ ಪಾತ್ರವೂ ಇಲ್ಲ. ಇನ್ವೆಂಟರಿ ಸಿದ್ಧಪಡಿಸುವ ಸಂದರ್ಭದಲ್ಲಿ ಸಮಿತಿಗೆ ನೆರವಾಗಿದ್ದ ಅಧಿಕಾರಿಗಳು ಕಂಪ್ಯೂಟರ್‌ ರಿಜಿಸ್ಟ್ರಾರ್‌ ಅವರಿಗೆ ನೆರವು ನೀಡಬೇಕು” ಎಂದು ನ್ಯಾಯಾಲಯ ಹೇಳಿದೆ.

ಕ್ಲೌಡ್‌ನಲ್ಲಿ ಅಡಕವಾಗಿರುವ ದತ್ತಾಂಶವು ಹೈಕೋರ್ಟ್‌ಗೆ ಲಭ್ಯವಾಗುವಂತೆ ಮಾಡಲು ಈ ಹಿಂದೆ ಸೇವೆ ಪಡೆದಿದ್ದ ಕಂಪೆನಿಯ ಸದಸ್ಯರ ನೆರವು ಪಡೆಯಬಹುದು. ಇದನ್ನು ಬಳಕೆ ಮಾಡಿಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಫೆಬ್ರವರಿ 7ರ ವಿಚಾರಣೆಯಂದು ಬಾಕಿ ಉಳಿದಿರುವ ಮತ್ತು ವರ್ಗಾವಣೆಗೊಂಡಿರುವ ಪ್ರರಕಣಗಳನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಂತೆ 2,700 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬಿಡಿಎ ನಿರ್ಮಿಸುತ್ತಿರುವ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ನಿಟ್ಟಿನಲ್ಲಿ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಈ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಕಾನೂನು ಹೋರಾಟ ನಡೆದು ಎಲ್ಲ ಹಂತದಲ್ಲಿನ ನ್ಯಾಯಾಲಯಗಳು ಸರ್ಕಾರದ ಭೂ ಸ್ವಾಧೀನ ಪ್ರಕ್ರಿಯೆ ಕ್ರಮವನ್ನು ಎತ್ತಿ ಹಿಡಿದಿದ್ದವು.

ಆದರೆ, ಬಡಾವಣೆ ಅಧಿಸೂಚನೆ ಪ್ರಕಟವಾಗುವುದಕ್ಕೂ ಮುನ್ನ ಆ ಪ್ರದೇಶದಲ್ಲಿನ ಜಮೀನು ಮಾಲೀಕರು ಅಭಿವೃದ್ಧಿಪಡಿಸಿದ್ದ ಬಡಾವಣೆ ಮತ್ತು ಉದ್ದೇಶಿತ ಬಡಾವಣೆ ವ್ಯಾಪ್ತಿಯಲ್ಲಿನ ಕಂದಾಯ ನಿವೇಶನಗಳು ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿಕೊಂಡ ಮನೆಗಳ ಸಕ್ರಮೀಕರಣ, ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Also Read
ಶಿವರಾಮ ಕಾರಂತ ಬಡಾವಣೆ: ನಿವೃತ್ತ ನ್ಯಾ. ಚಂದ್ರಶೇಖರ್‌ ಸಮಿತಿ ವಿಸರ್ಜನೆಗೆ ಹೈಕೋರ್ಟ್‌ ಅಸ್ತು

ಈ ಮೇಲ್ಮನವಿಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ 2020 ಡಿಸೆಂಬರ್ 3ರಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಿತ್ತು. ಈ ಸಮಿತಿಯು ನ್ಯಾಯಾಲಯದ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಸೂಚಿಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಸಮಿತಿಯ ಅವಧಿ 2023ರ ಡಿಸೆಂಬರ್ 31ಕ್ಕೆ ಮುಕ್ತಾಯವಾಗಿತ್ತು.

ಇದೇ ವೇಳೆ  ಸಮಿತಿಯ ಅಧ್ಯಕ್ಷರು, ಸಮಿತಿಗೆ ವಹಿಸಲಾಗಿದ್ದ ಕೆಲಸ ಪೂರ್ಣಗೊಂಡಿರುವ ಕಾರಣ ಸಮಿತಿಯನ್ನು ವಿಸರ್ಜಿಸಬಹುದು ಎಂದು ತಿಳಿಸಿದ್ದರು. ಆದರೆ, ಸಮಿತಿಯ ಇತರೆ ಸದಸ್ಯರು, ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಇರುವ ಹಲವು ದೂರುಗಳನ್ನು ಪರಿಹರಿಸಲು ಸಮಿತಿಯ ಅಧಿಕಾರಾವಧಿಯನ್ನು ಪುನಾ ಆರು ತಿಂಗಳು ವಿಸ್ತರಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಕೋರಿಕೆಯ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ವರ್ಗಾಯಿಸಿ, ಸಮಿತಿಯ ಮುಂದುವರಿಕೆ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ನೀವೇ ತೀರ್ಮಾನ ಕೈಗೊಳ್ಳಿ ಎಂದು ನಿರ್ದೇಶಿಸಿತ್ತು. ಈ ನಿರ್ದೇಶನದ ಅನುಸಾರ ಈ ವಿಶೇಷ ವಿಭಾಗೀಯ ಪೀಠವನ್ನು ರಚಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com