
ಪರಸ್ಪರ ಸಮ್ಮತಿಯಿಂದ ಬೆಳೆಸಿಕೊಂಡಿದ್ದ ಸಂಬಂಧ ಹಳಸಿದರೆ ಅಥವಾ ಸಂಗಾತಿ ಬೇರ್ಪಟ್ಟರೆ ಆಗ ಪುರುಷನ ವಿರುದ್ಧ ಮದುವೆಯಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಪ್ರಕರಣ ದಾಖಲಿಸಲಾಗದು ಎಂದು ಸುಪ್ರೀಂ ಕೋರ್ಟ್ ಈಚೆಗೆ ತಿಳಿಸಿದೆ [ಅಮೋಲ್ ಭಗವಾನ್ ನೆಹುಲ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಈ ಬಗೆಯ ಪ್ರಕರಣಗಳು ನ್ಯಾಯಾಲಯಗಳಿಗೆ ಹೊರೆಯಾಗುವುದಲ್ಲದೆ, ಇಂತಹ ಘೋರ ಅಪರಾಧದ ಆರೋಪಹೊತ್ತ ವ್ಯಕ್ತಿಗೆ ಅಪಖ್ಯಾತಿ ತರುತ್ತವೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮ ಅವರಿದ್ದ ಪೀಠ ತಿಳಿಸಿದೆ.
ಮದುವೆಯಾಗುವುದಾಗಿ ಭರವಸೆ ನೀಡಿ ನಂತರ ಆ ಭರವಸೆ ಈಡೇರಿಸದೆ ಇರುವ ಪ್ರತಿಯೊಂದು ಪ್ರಕರಣವನ್ನೂ ಸುಳ್ಳು ಆಶ್ವಾಸನೆ ಎಂದು ಪರಿಗಣಿಸಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಆರೋಪಿಗಳ ವಿರುದ್ಧ ವಿಚಾಣೆ ನಡೆಸುವ ನ್ಯಾಯಾಲಯಗಳ ಪ್ರವೃತ್ತಿಯ ಬಗ್ಗೆಯೂ ತಾನು ಪದೇ ಪದೇ ಕಳವಳ ವ್ಯಕ್ತಪಡಿಸಿರುವುದಾಗಿ ಅದು ಹೇಳಿತು.
“ಸಮ್ಮತಿಯ ಸಂಬಂಧ ಹಳಸಿದೆ ಅಥವಾ ಸಂಗಾತಿ ದೂರವಾಗಿದ್ದಾರೆ ಎಂಬುದು ಸರ್ಕಾರದ ಕ್ರಿಮಿನಲ್ ವ್ಯವಸ್ಥೆಯನ್ನು ಪ್ರಚೋದಿಸಲು ಆಧಾರವಾಗದು. ಅಂತಹ ನಡೆದ ನ್ಯಾಯಾಲಯಗಳ ಮೇಲೆ ಹೊರೆಯಾಗುವುದಲ್ಲದೆ, ಇಂತಹ ಘೋರ ಅಪರಾಧದ ಆರೋಪಹೊತ್ತ ವ್ಯಕ್ತಿಗೆ ಅಪಖ್ಯಾತಿ ತರುತ್ತವೆ. ಈ ನ್ಯಾಯಾಲಯವು ನಿಬಂಧನೆಗಳ (ಐಪಿಸಿ ಸೆಕ್ಷನ್ 376) ದುರುಪಯೋಗದ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದೆ. ಮದುವೆಯಾಗುವುದಾಗಿ ಭರವಸೆ ನೀಡಿ ನಂತರ ಆ ಭರವಸೆ ಈಡೇರಿಸದೆ ಇರುವ ಪ್ರತಿಯೊಂದು ಪ್ರಕರಣವನ್ನೂ ಸುಳ್ಳು ಆಶ್ವಾಸನೆ ಎಂದು ಪರಿಗಣಿಸಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಮೊಕದ್ದಮೆ ಹೂಡುವುದನ್ನು ಮೂರ್ಖತನ ಎಂದು ಹೇಳಿದೆ” ಎಂಬುದಾಗಿ ನ್ಯಾಯಾಲಯ ಮೇ 26ರಂದು ನೀಡಿದ ತೀರ್ಪಿನಲ್ಲಿ ಹೇಳಿದೆ.
ತನ್ನ ವಿರುದ್ದದ ವಿಚಾರಣೆ ರದ್ದುಗೊಳಿಸದ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಅಮೋಲ್ ಭಗವಾನ್ ನೆಹುಲ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 376(2)(n) (ಒಬ್ಬಳೇ ಮಹಿಳೆಯ ಮೇಲೆ ಪುನರಾವರ್ತಿತ ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು), 504 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಸಕ್ತ ಪ್ರಕರಣದಲ್ಲಿ ಮದುವೆಯ ಸುಳ್ಳು ಭರವಸೆ ನೀಡಿ ಜೂನ್ 2022ರಿಂದ ಜುಲೈ 2023ರವರೆಗೆ ಅಮೋಲ್ ತನ್ನ ಮೇಲೆ ಬಲಾತ್ಕಾರ ನಡೆಸಿರುವುದಾಗಿ 40 ವರ್ಷದ ಮಹಿಳೆ ದೂರು ನೀಡಿದ್ದರು.
ಆಕೆಗೆ ಈಗಾಗಲೇ ವಿವಾಹವಾಗಿದ್ದು ಮಾಜಿ ಪತಿಯಿಂದ ಖುಲಾನಾಮ (ಮಹಿಳೆ ಗಂಡನಿಂದ ಕೋರುವ ವಿಚ್ಛೇದನ) ಪಡೆದು 4 ವರ್ಷದ ಮಗನೊಂದಿಗೆ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಳು. ಅಮೋಲ್ ಆಕೆಯ ನೆರೆಮನೆಯಲ್ಲಿ ವಾಸವಾಗಿದ್ದರು. ತನನ್ನು ಮದುವೆಯಾಗುವುದಾಗಿ ತಿಳಿಸಿದ್ದ ಅಮೋಲ್ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು. ಆದರೆ ಇಬ್ಬರೂ ಅನ್ಯಧರ್ಮಕ್ಕೆ ಸೇರಿದ್ದರಿಂದ ಆತನ ಮನೆಯವರು ವಿವಾಹಕ್ಕೆ ಸ್ಪಷ್ಟವಾಗಿ ನಿರಾಕರಿಸಿದರು. ನಂತರ ಆಕೆ ಎಫ್‌ಐಆರ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೋಲ್ ನಿರೀಕ್ಷಣಾ ಜಾಮೀನು ಕೋರಿ ಕರಾಡ್‌ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತ್ತು.
ನಂತರ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಅಮೋಲ್ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದರಿಂದ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ಲೈಂಗಿಕ ಸಂಭೋಗ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಮತ್ತು ಕೇವಲ ಮದುವೆಯಾಗುವ ಭರವಸೆಯ ಮೇಲೆ ನಡೆಸಲಾಗಿದೆ ಎಂಬುದು ದಾಖಲೆಗಳಿಂದ ಕಂಡುಬರುವುದಿಲ್ಲ. ಐಪಿಸಿ ಸೆಕ್ಷನ್ 506 ರ ಅಡಿಯಲ್ಲಿ ಅಪರಾಧ ನಡೆದಿದೆ ಎನ್ನುವುದಕ್ಕೆ ಬಲಾತ್ಕಾರ ನಡೆಸಿರುವ ಅಥವಾ ಗಾಯಗೊಳಿಸುವ ಬೆದರಿಕೆ ಹಾಕಿರುವ ಪುರಾವೆಗಳಿಲ್ಲ. ಮೇಲ್ಮನವಿದಾರರ ಸಂವಹನ ಕಡಿಮೆಯಾಗಿದ್ದರಿಂದ ದೂರುದಾರೆು ಆಕ್ರೋಶಗೊಂಡಿದ್ದರು, ಇದೇ ಕಾರಣಕ್ಕೆ ಅಮೋಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಅಮೋಲ್‌ಗೆ ಕೇವಲ 25 ವರ್ಷ ವಯಸ್ಸಾಗಿದ್ದು, ಅವರ ಭವಿಷ್ಯ ಸುದೀರ್ಘವಾದುದು ಎಂಬುದನ್ನು ಪರಿಗಣಿಸಿದ ನ್ಯಾಯಾಲಯ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವುದು ನ್ಯಾಯದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿತು. ಅದರಂತೆ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದ ಅದು ಅಮೋಲ್ ವಿರುದ್ಧದದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿತು.