ಬಿಪಿಸಿಎಲ್ ಜೊತೆಗಿನ 3 ದಶಕಗಳ ಭೂ ವ್ಯಾಜ್ಯ: ರಿಲಯನ್ಸ್‌ಗೆ ಮದ್ಯಂತರ ಪರಿಹಾರ ನೀಡಿದ ಸುಪ್ರೀಂ ಕೋರ್ಟ್
ಗುಜರಾತ್‌ನ ಜಾಮ್‌ನಗರದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನಡುವಿನ ಮೂರು ದಶಕಗಳಷ್ಟು ಹಳೆಯ ಭೂ ವ್ಯಾಜ್ಯದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ [ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಡುವಣ ಪ್ರಕರಣ].
ಜಾಮ್‌ನಗರದ ಮೋತಿ ಖಾವ್ಡಿಯಲ್ಲಿರುವ ಭೂಮಿಗೆ ಸಂಬಂಧಿಸಿದಂತೆ ಸ್ವಾಮ್ಯತ್ವ ಘೋಷಣೆ, ಮರುಸ್ವಾಧೀನ ಮತ್ತು ಲಾಭ ಪರಿಹಾರ (ಮೀನ್ ಪ್ರಾಫಿಟ್ : ಅಕ್ರಮವಾಗಿ ತನ್ನ ಆಸ್ತಿಯನ್ನು ಮತ್ತೊಬ್ಬರು ಹೊಂದಿದ್ದಾಗ ಆ ಅವಧಿಯಲ್ಲಿ ಪಡೆಯಬಹುದಾಗಿದ್ದ ಲಾಭದ ಲೆಕ್ಕಾಚಾರ) ಕೋರಿ ಬಿಪಿಸಿಎಲ್‌ಗೆ ತನ್ನ ದೂರನ್ನು ತಿದ್ದುಪಡಿ ಮಾಡಲು ಅವಕಾಶ ನೀಡಿ ಗುಜರಾತ್ ಹೈಕೋರ್ಟ್ ಮೇ 9ರಂದು ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ ಆರ್‌ಐಎಲ್ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ಮಧ್ಯಂತರ ಪರಿಹಾರ ನೀಡಿತು.
ಬಿಪಿಸಿಎಲ್ ಮತ್ತು ಆರ್‌ಐಎಲ್ ನಡುವಿನ ವ್ಯಾಜ್ಯ 1990ರ ದಶಕದಷ್ಟು ಹಳೆಯದು. ಗುಜರಾತ್ ಸರ್ಕಾರ ಬಿಪಿಸಿಎಲ್‌ಗಾಗಿ ಕಚ್ಚಾ ತೈಲ ಸಂಗ್ರಹಾಗಾರ ಸ್ಥಾಪಿಸಲು ಮೋತಿ ಖಾವ್ಡಿಯಲ್ಲಿ 349 ಹೆಕ್ಟೇರ್‌ಗಳಿಗೂ ಹೆಚ್ಚು ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ ಆ ಭೂಮಿಯಲ್ಲಿ ರಿಲಯನ್ಸ್ ಅಕ್ರಮವಾಗಿ ಗೋಡೆ ನಿರ್ಮಿಸಿದೆ ಎಂದು ಬಿಪಿಸಿಎಲ್ ಆರೋಪಿಸಿತು.
ಬಿಪಿಸಿಎಲ್ 1995 ರ ನವೆಂಬರ್‌ನಲ್ಲಿ ಜಾಮ್‌ನಗರದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಸಿವಿಲ್ ಮೊಕದ್ದಮೆ ಹೂಡಿತು. ರಿಲಯನ್ಸ್ ತನ್ನ ಭೂಪ್ರದೇಶದಲ್ಲಿ ಹಸ್ತಕ್ಷೇಪ ಮಾಡದಂತೆ ಅಥವಾ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕೆಂದು ಕೋರಿತು. ರಿಲಯನ್ಸ್ ತನ್ನ ಕೋರಿಕೆಗಳ ಮೂಲಕ ಸುಮಾರು 60 ಬಾರಿ ಪ್ರಕರಣದ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಮುಂದೂಡಿತ್ತು. ಅಂತಿಮವಾಗಿ, ಮಾರ್ಚ್ 2024ರಲ್ಲಿ ಸರ್ಕಾರಿ ದೂರಸಂವೇದಿ ಸಂಸ್ಥೆ ಬಿಐಎಸ್‌ಎಜಿ- ಎನ್ ಮೂಲಕ ಉಪಗ್ರಹ ಸಮೀಕ್ಷೆ ನಡೆಸಿ ವರದಿ ಪಡೆದ ನಂತರ ಬಿಪಿಸಿಎಲ್‌ಗೆ ಸೇರಿದ ಭೂಮಿಯನ್ನು ರಿಲಯನ್ಸ್ ಅತಿಕ್ರಮಿಸಿರುವುದು ದೃಢಪಟ್ಟಿತ್ತು.
ಈ ಸಮೀಕ್ಷೆ ಆಧರಿಸಿ, ಬಿಪಿಸಿಎಲ್ ಜೂನ್ 2024ರಲ್ಲಿ ಹೊಸ ತಿದ್ದುಪಡಿ ಅರ್ಜಿ ಸಲ್ಲಿಸಿತು, ಔಪಚಾರಿಕ ಸ್ವಾಮ್ಯತ್ವ ಘೋಷಣೆ, ಅತಿಕ್ರಮಣಗೊಂಡ ಭಾಗದ ಮರು ಸ್ವಾಧೀನ, ಅದರ ಅಧಿಕೃತ ಬಳಕೆಗಾಗಿ ಮಧ್ಯಂತರ ಲಾಭ ನೀಡುವಂತೆ ಕೋರಿತು. ವಿಚಾರಣಾ ನ್ಯಾಯಾಲಯ ಮನವಿಯನ್ನು ಭಾಗಶಃ ತಿರಸ್ಕರಿಸಿದ್ದರಿಂದ ಬಿಪಿಸಿಎಲ್ ಸಂವಿಧಾನದ 227ನೇ ವಿಧಿಯಡಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿತು.
2002ರಲ್ಲಿ ಜಾರಿಗೆ ಬಂದ ಸಿವಿಲ್ ಪ್ರಕ್ರಿಯಾ ಸಂಹಿತೆಯ ಆದೇಶ VI ನಿಯಮ 17ನ್ನು ವಿಚಾರಣಾ ನ್ಯಾಯಾಲಯ ತಪ್ಪಾಗಿ ಅನ್ವಯಿಸಿದೆ ಎಂದು ಹೈಕೋರ್ಟ್ ತೀರ್ಪು ನೀಡಿತು. ಇದನ್ನು ರಿಲಯನ್ಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಪ್ರಸ್ತುತ ಅರ್ಜಿ ಸಲ್ಲಿಸಿತ್ತು.
ರಿಲಯನ್ಸ್ ಅರ್ಜಿಗೆ ಸಂಬಂಧಿಸಿದಂತೆ ಮಂಗಳವಾರ ನೋಟಿಸ್ ನೀಡಿರುವ ಸುಪ್ರೀಂ ಕೋರ್ಟ್ ಜಾಮ್‌ನಗರ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸದಂತೆ ತಡೆ ನೀಡಿದೆ. ಈ ಆದೇಶದೊಂದಿಗೆ ಮೂರು ದಶಕದಷ್ಟು ಹಳೆಯದಾದ ಮೊಕದ್ದಮೆ ಮತ್ತೆ ಸ್ಥಗಿತಗೊಂಡಿದ್ದು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಬೇಕಿದೆ.
ಆರ್‌ಐಎಲ್ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಶ್ಯಾಮ್ ದಿವಾನ್ ಮತ್ತು ಮಿಹಿರ್ ಜೋಶಿ ಹಾಗೂ ಅವರ ತಂಡ ವಾದ ಮಂಡಿಸಿತು. ಬಿಪಿಸಿಎಲ್ ಸಂಸ್ಥೆಯನ್ನು ಹಿರಿಯ ವಕೀಲ ಬಲ್ಬೀರ್ ಸಿಂಗ್ ಮತ್ತವರ ತಂಡ ಪ್ರತಿನಿಧಿಸಿತ್ತು.