
ಅಕ್ರಮವಾಗಿ ಮತಾಂತರ ಮಾಡಿದ್ದಕ್ಕಾಗಿ ಇಬ್ಬರು ಮುಸ್ಲಿಮರು ಹಾಗೂ ಜೈನ ಧರ್ಮಕ್ಕೆ ಸೇರಿದ ಅಪ್ರಾಪ್ತ ಬಾಲಕನ ತಾಯಿ ತಪ್ಪಿತಸ್ಥರು ಎಂದು ಮಧ್ಯಪ್ರದೇಶದ ಇಂದೋರ್ ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿದೆ.
ಮಗುವಿನ ತಾಯಿ ಪ್ರಾರ್ಥನಾ ಶಿವಹಾರೆ (27), ಆಕೆಯ ಪ್ರಿಯಕರ ಇಲಿಯಾಸ್ ಅಹ್ಮದ್ ಖುರೇಷಿ (33) ಮತ್ತು ಇನ್ನೊಬ್ಬ ವ್ಯಕ್ತಿ ಮೊಹಮ್ಮದ್ ಜಾಫರ್ ಅಲಿ (37) ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಸಿಂಗ್ ಕುಶ್ವಾಹ, 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹5,000 ದಂಡ ವಿಧಿಸಿದರು.
ಇಲ್ಯಾಸ್ ಖುರೇಷಿ ಖುರೇಷಿ ಎಂಬಾತ ಪ್ರಾರ್ಥನಾಳನ್ನು ಮದುವೆಯಾಗಿ ನಂತರ ಆಕೆಯ ಮಗನನ್ನು ಮತಾಂತರಿಸಿದ್ದ. ಹುಡುಗನಿಗೆ ಬಲವಂತವಾಗಿ ಸುನ್ನತಿ ಮಾಡಿಸಿ ಶಾಲಾ ದಾಖಲೆಗಳಲ್ಲಿ ಅವನ ಹೆಸರನ್ನು ಬದಲಾಯಿಸಲಾಗಿತ್ತು ಎಂದು ದೂರಲಾಗಿತ್ತು.
ತಾನು ಹಿಂದೂ ಪದ್ದತಿಯಂತೆ ಪ್ರಾರ್ಥನಾ ಅವರನ್ನು ರಾಜಸ್ಥಾನದಲ್ಲಿ ವಿವಾಹವಾಗಿದ್ದೆ. ತಮ್ಮಿಬ್ಬರ ದಾಂಪತ್ಯದಿಂದ ಒಬ್ಬ ಮಗ ಜನಿಸಿದ್ದ. ಆದರೆ ತನ್ನ ಪತ್ನಿ ಪ್ರಾರ್ಥನಾ ಇಲ್ಯಾಸ್ ಅಹ್ಮದ್ ಖುರೇಷಿ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಮನೆಬಿಟ್ಟು ತೆರಳಿದಳು. ಮಗನನ್ನು ಕರೆದೊಯ್ಯಲು ವಿರೋಧ ವ್ಯಕ್ತಪಡಿಸಿದರೂ ಆಕೆ ಅದಕ್ಕೆ ನಿರಾಕರಿಸಿದ್ದಳು ಎಂದು ಅರ್ಜಿದಾರ ಮಹೇಶ್ ಕುಮಾರ್ ನಹತಾ ಆರೋಪಿಸಿದ್ದರು.
ಇಲ್ಯಾಸ್ ತನ್ನ ಮಗನಿಗೆ ಕಾನೂನುಬಾಹಿರವಾಗಿ ಸುನ್ನತಿ ಮಾಡಿಸಿದ್ದಾನೆ. ಅವನನ್ನು ಮುಸ್ಲಿಂ ಸಮುದಾಯಕ್ಕೆ ಬದಲಿಸಿ ಇಸ್ಲಾಂ ಧರ್ಮದ ಹೆಸರಿಟ್ಟಿದ್ದಾರೆ. ಜೊತೆಗೆ ಶಾಲಾ ದಾಖಲೆಗಳಲ್ಲೂ ಆತನ ಹೆಸರನ್ನು ಬದಲಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಆತ ಮುಸ್ಲಿಂ ಪದ್ದತಿಯಂತೆ ಜೀವಿಸುವಂತೆ ಮಾಡಿದ್ದಾರೆ ಎಂದು ದೂರಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಮತ್ತೊಬ್ಬ ಆರೋಪಿ ಮೊಹಮ್ಮದ್ ಜಾಫರ್ ಅಲಿ, ಅಪ್ರಾಪ್ತ ಬಾಲಕನ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರವನ್ನು ನಕಲಿ ಮಾಡಿದ್ದಾನೆ ಎಂದು ಅರಿಯಿತು. ಪ್ರಾರ್ಥನಾ ಮತ್ತು ಖುರೇಷಿ ಅವರ ಸೂಚನೆ ಇಲ್ಲದೆ ನಕಲು ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿತು.
ಹೀಗಾಗಿ, ಆರೋಪಿಗಳು ಹೊಂದಿದ್ದ ಸಮಾನ ಉದ್ದೇಶವನ್ನು ಮುಂದುವರಿಸಲು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂಬುದು ಸಂಶಯಾತೀತವಾಗಿ ಸಾಬೀತಾಗಿದೆ ಎಂದು ಆರೋಪಿಗಳಿಗೆ ಶಿಕ್ಷೆ ವಿಧಿಸುವಾಗ ನ್ಯಾಯಾಲಯ ಹೇಳಿತು.