ಮತಾಂತರ ಕುರಿತಾದ ಅರ್ಜಿ: ಅಟಾರ್ನಿ ಜನರಲ್ ನೆರವು ಕೇಳಿದ ಸುಪ್ರೀಂ ಕೋರ್ಟ್

ತಂಜಾವೂರಿನಲ್ಲಿ ನಡೆದ ವಿದ್ಯಾರ್ಥಿ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಎನ್ಐಎ ಸಲ್ಲಿಸಿದ್ದ ಹೊಸ ಅರ್ಜಿಯನ್ನು ತಮಿಳುನಾಡು ಸರ್ಕಾರ ಪ್ರಶ್ನಿಸಿತ್ತು. ಇದನ್ನು ಕೂಡ ನ್ಯಾಯಾಲಯ ತಿರಸ್ಕರಿಸಿದೆ.
Attorney General R Venkataramani and Supreme Court
Attorney General R Venkataramani and Supreme Court

ದೇಶದಲ್ಲಿ ನಡೆಯುತ್ತಿದೆ ಎನ್ನಲಾದ ಬಲವಂತದ ಮತ್ತು ಮೋಸದ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಸಹಾಯ ಕೋರಿದೆ.

ತಂಜಾವೂರಿನಲ್ಲಿ ನಡೆದ ವಿದ್ಯಾರ್ಥಿ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಎನ್‌ಐಎ ಸಲ್ಲಿಸಿದ್ದ ಹೊಸ ಅರ್ಜಿಯನ್ನು ತಮಿಳುನಾಡು ಸರ್ಕಾರ ಪ್ರಶ್ನಿಸಿತ್ತು. ಇದನ್ನು ಕೂಡ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತಿರಸ್ಕರಿಸಿದೆ.

Also Read
ಮತಾಂತರ ಪ್ರಶ್ನಿಸಿದ್ದ ಪಿಐಎಲ್‌ನಲ್ಲಿ ಅಲ್ಪಸಂಖ್ಯಾತ ಧರ್ಮಗಳ ಅವಹೇಳನ: ಪರಿಶೀಲಿಸಲು ಸೂಚಿಸಿದ ಸುಪ್ರೀಂ ಕೋರ್ಟ್

ʼಎನ್‌ಐಎ ಸಲ್ಲಿಸಿರುವ ಹೊಸ ಅರ್ಜಿ ನಿರಾಧಾರ ಹಾಗೂ ರಾಜಕೀಯ ಪ್ರೇರಿತ . ತಮಿಳುನಾಡಿನಲ್ಲಿ ಇಂತಹ ಮತಾಂತರದ ಪ್ರಶ್ನೆಯೇ ಇಲ್ಲ. ಶಾಸಕಾಂಗಈ ರೀತಿಯ ವಿಷಯಗಳನ್ನು ನಿರ್ಧರಿಸಲಿ. ನ್ಯಾಯಾಲಯ ಅದನ್ನು ಪರಿಗಣಿಸಬಾರದು ಎಂದು ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಪಿ ವಿಲ್ಸನ್‌ ವಾದಿಸಿದರು.

ಆದರೆ ಇದನ್ನು ಒಪ್ಪದ ನ್ಯಾಯಾಲಯ ಗಂಭೀರ ಎಂದು ಪರಿಗಣಿಸಲಾದ ಸಮಸ್ಯೆಯನ್ನು ಪರಿಶೀಲಿಸಲು ಈಗಾಗಲೇ ನಿರ್ಧರಿಸಿರುವುದಾಗಿ ತಿಳಿಸಿತು.

Also Read
ದೇಶದಲ್ಲಿರುವವರು ಇಲ್ಲಿನ ಸಂಸ್ಕೃತಿಯಂತೆ ನಡೆದುಕೊಳ್ಳಲಿ: ಮತಾಂತರ ಕುರಿತಾದ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ

"ಇಡೀ ದೇಶ, ಎಲ್ಲಾ ರಾಜ್ಯಗಳ ಬಗೆಗಿನ ಕಾಳಜಿ ನಮ್ಮದು. ನಿಮ್ಮ ರಾಜ್ಯದಲ್ಲಿ ಅದು (ಮತಾಂತರ) ನಡೆದಿದ್ದರೆ ಕೆಟ್ಟದು. ಇಲ್ಲದಿದ್ದರೆ ಒಳ್ಳೆಯದು. ಅದನ್ನು ಒಂದು ರಾಜ್ಯಕ್ಕೆ ಸಂಬಂಧಿಸಿದಂತೆ ನೋಡಬೇಡಿ. ಇದನ್ನು ರಾಜಕೀಯಗೊಳಿಸಬೇಡಿ" ಎಂದು ನ್ಯಾಯಮೂರ್ತಿ ಶಾ ಹೇಳಿದರು.

ಅರ್ಜಿಯಲ್ಲಿ ಕೆಲ ಅಲ್ಪಸಂಖ್ಯಾತ ಧರ್ಮಗಳ ವಿರುದ್ಧ ನೀಡಿದ ಹೇಳಿಕೆಗಳನ್ನು ತೆಗೆದುಹಾಕುವುದಿಲ್ಲ ಎಂದು ಪೀಠ ಹೇಳಿತು. ಹಿಂದಿನ ವಿಚಾರಣೆ ವೇಳೆ ಅಂತಹ ಹೇಳಿಕೆಗಳನ್ನು ಪರಿಶೀಲಿಸುವಂತೆ ಅರ್ಜಿದಾರರ ಪರ ಹಾಜರಿದ್ದ ವಕೀಲರಿಗೆ ನ್ಯಾಯಾಲಯ ಸೂಚಿಸಿತ್ತು. ತಾವು ಆ ಬಗ್ಗೆ ಒತ್ತಾಯಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಹಾಗೆ ಮಾಡದಂತೆ ಮತ್ತೊಮ್ಮೆ ಸೂಚಿಸಿದ ಪೀಠ ಇದೇ ವೇಳೆ ಸದ್ಯಕ್ಕೆ ಆ ಪದಗಳನ್ನು ಸದ್ಯಕ್ಕೆ ತೆಗೆಯುವುದಿಲ್ಲ ಎಂದು ಹೇಳಿತು.

ವಿಚಾರಣೆ ವೇಳೆ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ಕೋರಿಕೆಯ ಮೇರೆಗೆ ಪ್ರಕರಣದ ದಾವೆ ಶೀರ್ಷಿಕೆಯನ್ನು  ಮತಾಂತರದ ವಿಷಯದ ಕುರಿತಾದ ಪ್ರಕರಣ ಎಂದು ಪೀಠವು ಬದಲಿಸಿತು. ತಂಜಾವೂರು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಕುರಿತ ಹೊಸ ಮನವಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ಸೂಚಿಸಿತು. ಈ ವಿಚಾರದಲ್ಲಿ ಅಮಿಕಸ್ ಕ್ಯೂರಿಯಾಗಿ ಅಥವಾ ಬೇರೆ ರೀತಿಯಲ್ಲಿ ಸಹಾಯ ಮಾಡುವಂತೆ ಅದು ಅಟಾರ್ನಿ ಜನರಲ್ ಅವರನ್ನು ಕೇಳಿತು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿಯಲ್ಲಿ ನಡೆಯಲಿದೆ.

Kannada Bar & Bench
kannada.barandbench.com