ಸಿಖ್ಖರ ಬಗ್ಗೆ ಹೇಳಿಕೆ: ರಾಹುಲ್ ವಿರುದ್ಧ ಎಫ್ಐಆರ್ ದಾಖಲಿಸಲು ಉತ್ತರ ಪ್ರದೇಶ ನ್ಯಾಯಾಲಯ ನಕಾರ

ಕಳೆದ ವರ್ಷ ಅಮೆರಿಕದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಲಾಗಿತ್ತು.
Rahul Gandhi
Rahul Gandhi Facebook
Published on

ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಭಾರತದ ಸಿಖ್ಖರಲ್ಲಿ ಅಭದ್ರತೆಯ ಭಾವನೆಯಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿದ್ದ ಅರ್ಜಿಯನ್ನು ಉತ್ತರ ಪ್ರದೇಶದ ವಾರಾಣಸಿ ನ್ಯಾಯಾಲಯ ತಿರಸ್ಕರಿಸಿದೆ.  

ಮಾಧ್ಯಮ ವರದಿಗಳ ಪ್ರಕಾರ ವಾಷಿಂಗ್‌ಟನ್‌ ಡಿಸಿಯಲ್ಲಿ ಸೆಪ್ಟೆಂಬರ್ 10 ರಂದು ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಅವರು, “ ಈ ಹೋರಾಟವು ಭಾರತದಲ್ಲಿ ಸಿಖ್ಖರಿಗೆ ಪೇಟವನ್ನು ಧರಿಸಲು ಅವಕಾಶವಿದೆಯೇ, ಕಡಗವನ್ನು ಧರಿಸಲು ಅನುಮತಿ ಇದೆಯೇ, ಗುರುದ್ವಾರಕ್ಕೆ ಹೋಗಲು ಸಾಧ್ಯವಿದೆಯೇ ಎಂಬುದರ ಕುರಿತಾಗಿದೆ. ಇದಕ್ಕಾಗಿಯೇ ಈ ಹೋರಾಟ, ಇದು ಎಲ್ಲ ಧರ್ಮಗಳಿಗೆ ಸಂಬಂಧಿಸಿದ ಹೋರಾಟ" ಎಂದಿದ್ದರು.

Also Read
ಮಾನಹಾನಿ ಪ್ರಕರಣ: ಹೆಚ್ಚವರಿ ಸಾಕ್ಷಿಗಳ ವಿಚಾರಣೆ ಪ್ರಶ್ನಿಸಿದ್ದ ರಾಹುಲ್ ಅರ್ಜಿ ಪುರಸ್ಕರಿಸಿದ ಗುವಾಹಟಿ ಹೈಕೋರ್ಟ್

ಹೇಳಿಕೆ ಪ್ರಚೋದನಕಾರಿಯಾಗಿದ್ದು ರಾಹುಲ್‌ ಅವರು ತಮ್ಮ ರಾಜಕೀಯ ಆಷಾಢಭೂತಿತನ ಮುಂದುವರೆಸಲು ಜನರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ನಾಗೇಶ್ವರ ಮಿಶ್ರಾ ಎಂಬವರು ವಾರಣಾಸಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಅಕ್ಟೋಬರ್ 17 ರಂದು ಹೊರಡಿಸಲಾದ ಆದೇಶದಲ್ಲಿ, ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ನೀರಜ್ ಕುಮಾರ್ ತ್ರಿಪಾಠಿ ಅವರು, ಅಪರಾಧ ನಡೆಯಬಹುದೆಂಬ ಬರೀ ಊಹೆಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗುವುದಿಲ್ಲ ಎಂದಿದ್ದಾರೆ.

ಖಲಿಸ್ತಾನ್ ಪರ ಗುಂಪುಗಳು ಭಾರತದಲ್ಲಿ ಹಿಂಸಾಚಾರ ಹರಡಲು ಈ ಹೇಳಿಕೆ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆತಂಕವನ್ನು ಮಿಶ್ರಾ ವ್ಯಕ್ತಪಡಿಸಿದ್ದರೂ, ತಮ್ಮ ವಾದ ಬೆಂಬಲಿಸಲು ಯಾವುದೇ ದೃಢ  ಪುರಾವೆಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ದೂರುದಾರರು ತಮ್ಮ ಅರ್ಜಿಯಲ್ಲಿ ಆಪಾದಿತ ಭಾಷಣದ ದಿನಾಂಕ, ಸಮಯ ಅಥವಾ ಸ್ಥಳವನ್ನು ನಮೂದಿಸಲು ವಿಫಲರಾಗಿದ್ದಾರೆ ಎಂದು ಹೇಳಿತು.

Also Read
ಮತಗಳ್ಳತನ: ರಾಹುಲ್ ಆರೋಪ ಕುರಿತು ಎಸ್ಐಟಿ ತನಿಖೆ ಕೋರಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ

ರಾಹುಲ್‌ ಅಮೆರಿಕದಲ್ಲಿ ಹೇಳಿಕೆ ನೀಡಿದ್ದರಿಂದ, ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ದೂರನ್ನು ಸ್ವೀಕರಿಸಲು ಆರಂಭದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರಾಕರಿಸಿತ್ತು.

ಆದರೆ  ಜುಲೈ 21ರಂದು ವಾರಾಣಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅರ್ಜಿಯನ್ನು ಮರು ವಿಚಾರಣೆ ನಡೆಸುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು. ಎಫ್‌ಐಆರ್ ಅಥವಾ ತನಿಖೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 208 ಅಡಿಯಲ್ಲಿ ಅನುಮತಿ ಅಗತ್ಯವಿಲ್ಲ, ಬದಲಿಗೆ ವಿಚಾರಣೆಗೆ ಮಾತ್ರ ಅನುಮತಿ ಬೇಕು ಎಂದು ಅದು ಹೇಳಿತ್ತು.   

Kannada Bar & Bench
kannada.barandbench.com