ಮತಗಳ್ಳತನ: ರಾಹುಲ್ ಆರೋಪ ಕುರಿತು ಎಸ್ಐಟಿ ತನಿಖೆ ಕೋರಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ

ಅರ್ಜಿದಾರರು ಬೇರೆ ರೀತಿ ಅರ್ಜಿ ಸಲ್ಲಿಸಬಹುದೇ ವಿನಾ ಪಿಐಎಲ್ ಮುಖಾಂತರ ಅಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ನುಡಿಯಿತು.
Rahul Gandhi and Supreme Court
Rahul Gandhi and Supreme Court
Published on

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ಮತದಾರರ ಪಟ್ಟಿ ತಿರುಚಿ ಅಕ್ರಮ ಎಸಗಲಾಗಿದೆ ಎಂದು ರಾಹುಲ್‌ ಗಾಂಧಿ ಅವರು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅರ್ಜಿದಾರರು ಬೇರೆ ರೀತಿ ಅರ್ಜಿ ಸಲ್ಲಿಸಬಹುದೇ ವಿನಾ ಪಿಐಎಲ್ ಮುಖಾಂತರ ಸುಪ್ರೀಂ ಕೋರ್ಟ್‌ಗೆ ಅಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ನುಡಿಯಿತು.

Also Read
ಮತಗಳ್ಳತನ ಕುರಿತು ರಾಹುಲ್ ಆರೋಪ: ಎಸ್ಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಬೇರೆಡೆ ಪರಿಹಾರ ಹುಡುಕುವಂತೆ ನ್ಯಾಯಾಲಯ ಸಲಹೆ ನೀಡಿದಾಗ, ಚುನಾವಣಾ ಆಯೋಗಕ್ಕೆ ಪತ್ರ ಬರೆದರೂ ಅದನ್ನು ಪರಿಗಣಿಸಿಲ್ಲ ಎಂದು ಅರ್ಜಿದಾರರು ತಿಳಿಸಿದರು.

"ಸಾರ್ವಜನಿಕ ಹಿತಾಸಕ್ತಿಗಾಗಿ ಸಲ್ಲಿಸಲಾಗಿದೆ ಎಂದು ಹೇಳಲಾದ ರಿಟ್ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. "ಅರ್ಜಿದಾರರು ಲಭ್ಯವಿರುವ ಪರಿಹಾರ  ಪಡೆಯಲು ಸ್ವಾತಂತ್ರ್ಯ ಹೊಂದಿದ್ದಾರೆ" ಎಂದು ನ್ಯಾಯಾಲಯ ಅರ್ಜಿ ತಿರಸ್ಕರಿಸುವ ವೇಳೆ ತಿಳಿಸಿತು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ನಕಲಿ, ಅನಧಿಕೃತ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿತ್ತು. ಇದು ಒಬ್ಬ ವ್ಯಕ್ತಿ ಒಂದು ಮತ ಚಲಾಯಿಸಬೇಕು ಎಂಬ ತತ್ವಕ್ಕೆ ಮಾರಕ ಎಂದು ಅರ್ಜಿ ದೂರಿತ್ತು.

ಕೆಲವು ಮತದಾರರಿಗೆ ಒಂದೇ ಇಪಿಐಸಿ (ಎಪಿಕ್) ಗುರುತಿನ ಚೀಟಿ ಇದ್ದರೂ ಹಲವು ಕ್ಷೇತ್ರಗಳಲ್ಲಿ ಅವರ ಹೆಸರು ನೋಂದಣಿಯಾಗಿದ್ದು ಕೆಲವರು ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿಯೇ 40,000ಕ್ಕೂ ಅಧಿಕ ಅನಧಿಕೃತ ಮತದಾರರು, 10,000ಕ್ಕೂ ಅಧಿಕ ನಕಲಿ ದಾಖಲೆಗಳು ಕಂಡುಬಂದಿವೆ. ಮಹಾರಾಷ್ಟ್ರದಲ್ಲಿಯೂ ಇಂಥದ್ದೇ ಅಕ್ರಮ ನಡೆದಿದೆ ಎಂದು ಅದು ಹೇಳಿತ್ತು. ಅಲ್ಲದೆ ಕಲಬುರ್ಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆಯೂ ಅರ್ಜಿ ಆರೋಪ ಮಾಡಿತ್ತು.   

Also Read
ಸಿಖ್ಖರ ಬಗ್ಗೆ ಹೇಳಿಕೆ: ರಾಹುಲ್ ಗಾಂಧಿ ಅರ್ಜಿಯ ತೀರ್ಪು ಕಾಯ್ದಿರಿಸಿದ ಅಲಾಹಾಬಾದ್ ಹೈಕೋರ್ಟ್

ಹೀಗೆ ಮತದಾರರ ಪಟ್ಟಿ ತಿರುಚುವುದು ಸಂವಿಧಾನದ 324, 325 ಮತ್ತು 326ನೇ ವಿಧಿಗಳ ಅಡಿಯಲ್ಲಿ ಪ್ರತಿಪಾದಿಸಲಾದ ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ಮೂಲತತ್ವಕ್ಕೆ ಧಕ್ಕೆಯಾಗುತ್ತದೆ ಮತ್ತು 14 ಮತ್ತು 21ನೇ ವಿಧಿ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿ ಹೇಳಿತ್ತು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಂವಿಧಾನದ ಮೂಲಭೂತ ಸಂರಚನೆಯ ಭಾಗ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹೇಳಿದ್ದು ಮತದಾನ ಅಕ್ರಮ ಕುರಿತಂತೆ ಸ್ವತಂತ್ರ ತನಿಖೆ ನಡೆಸಬೇಕು ಜೊತೆಗೆ ಭಾರತೀಯ ಚುನಾವಣಾ ಆಯೋಗ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಬೇಕು ಎಂದು ಅರ್ಜಿ ಕೋರಿತ್ತು.

Kannada Bar & Bench
kannada.barandbench.com