ಪತ್ನಿ ಆತ್ಮಹತ್ಯೆ: ರಾಷ್ಟ್ರೀಯ ಹಿತಾಸಕ್ತಿ ಕಾರಣ ನೀಡಿ ವಿಜ್ಞಾನಿ ಶಿಕ್ಷೆ ಆದೇಶ ತಡೆ ಹಿಡಿದ ಉತ್ತರಾಖಂಡ ಹೈಕೋರ್ಟ್‌

ತನಗೆ ಶಿಕ್ಷೆ ವಿಧಿಸಿರುವುದರಿಂದ ಲಸಿಕೆ ಸಂಶೋಧನೆಯಲ್ಲಿ ತೊಡಗಲು ಅವಕಾಶ ದೊರೆಯುತ್ತಿಲ್ಲ ಎಂದು ಆರೋಪಿ ವಿಜ್ಞಾನಿ ವಾದಿಸಿದ್ದರು.
Uttarakhand High Court
Uttarakhand High Court
Published on

ಪತ್ನಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಲಸಿಕೆ ವಿಜ್ಞಾನಿಯೊಬ್ಬರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಉತ್ತರಾಖಂಡ ಹೈಕೋರ್ಟ್‌ ಈಚೆಗೆ ತಡೆ ಹಿಡಿದಿದ್ದು ಆತ ಸಂಶೋಧನಾ ಕಾರ್ಯವನ್ನು ಮತ್ತೆ ಆರಂಭಿಸಲು ಅನುಮತಿ ನೀಡದಿದ್ದರೆ ಅದರಿಂದ ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ [ ಆಕಾಶ್ ಯಾದವ್ ಮತ್ತು ಸರ್ಕಾರ ನಡುವಣ ಪ್ರಕರಣ].

ತನ್ನನ್ನು ದೋಷಿ ಎಂದು ತೀರ್ಪು ನೀಡಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವಿಜ್ಞಾನಿ ಮೇಲ್ಮನವಿ ಸಲ್ಲಿಸಿದ್ದರು. ಶಿಕ್ಷೆ ವಿಧಿಸಿರುವುದರಿಂದ ಲಸಿಕೆ ಸಂಶೋಧನಾ ಕಾರ್ಯದಲ್ಲಿ ತೊಡಗಲು ಅವಕಾಶ ನೀಡುತ್ತಿಲ್ಲ ಎಂದು ವಿಜ್ಞಾನಿ ವಾದಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ರವೀಂದ್ರ ಮೈಥಾನಿ ಮಧ್ಯಂತರ ಆದೇಶ ಹೊರಡಿಸಿದರು. ವಿಜ್ಞಾನಿಗಳ ಲಸಿಕೆ ಸಂಶೋಧನಾ ಕಾರ್ಯ ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ ಎಂದರು.

Also Read
ಮಾಜಿ ಸಂಸದ ದೇಲ್ಕರ್‌ ಆತ್ಮಹತ್ಯೆ ಪ್ರಕರಣ:"ಅಪಮಾನ ಆತ್ಮಹತ್ಯೆಗೆ ಪ್ರಚೋದನೆಯಾಗುತ್ತದೆಯೇ?" ಸುಪ್ರೀಂ ಪ್ರಶ್ನೆ

ಐಐಟಿ ಖರಗ್‌ಪುರದಿಂದ ಪಿಎಚ್‌ಡಿ ಪದವಿ ಪಡೆದ ವಿಜ್ಞಾನಿ ಮತ್ತು ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ಆಕಾಶ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವರದಕ್ಷಿಣೆ ಕಿರುಕುಳ ಮತ್ತು ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಅವರ ಮೇಲಿತ್ತು. ತನ್ನ ಸಾವಿಗೆ ವಿಜ್ಞಾನಿ ಪತಿ ಕಾರಣ ಎಂದು ಪತ್ನಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಸಿಕ್ಯೂಷನ್‌ ತಿಳಿಸಿತ್ತು.

ವರದಕ್ಷಿಣೆ ಸಾವಿಗೆ ಸಂಬಂಧಿಸಿದಂತೆ ಆರೋಪಿಯನ್ನು ದೋಷಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್‌ 306ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ದೋಷಿ ಎಂದು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ವಿಜ್ಞಾನಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಮೇಲ್ಮನವಿ ಇತ್ಯರ್ಥವಾಗುವವರೆಗೆ ತನ್ನನ್ನು ದೋಷಿ ಎಂದಿರುವ ತೀರ್ಪು ಮತ್ತು ವಿಧಿಸಲಾದ ಶಿಕ್ಷೆಗೆ ತಡೆ ನೀಡಬೇಕೆಂದು ಅವರು ಹೈಕೋರ್ಟ್‌ಗೆ ಒತ್ತಾಯಿಸಿದ್ದರು. ಈ ಮಧ್ಯೆ ಏಪ್ರಿಲ್ 7ರಂದು ಜಾಮೀನಿನ ಮೇಲೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.

ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಿಜ್ಞಾನಿ ಪರ ವಕೀಲರು ವಿಚಾರಣಾ ನ್ಯಾಯಾಲಯದ ತೀರ್ಪಿನಿಂದಾಗಿ ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ವಾದಿಸಿದ್ದರು.

ಐಪಿಸಿ ಸೆಕ್ಷನ್ 304-ಬಿ (ವರದಕ್ಷಿಣೆ ಸಾವು) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 (ವರದಕ್ಷಿಣೆ ಸಾವು) ಅಡಿಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿರುವುದರಿಂದ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಾದಿಸಲಾಯಿತು.

ಈ ವಾದಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಪತ್ನಿ ಬರೆದಿದ್ದ ಆತ್ಮಹತ್ಯೆ ಪತ್ರದಲ್ಲಿ ಅವರ ಹೆಸರಿರುವುದನ್ನು ಪ್ರಸ್ತಾಪಿಸಿತು.

Also Read
ಐಐಟಿ ಖರಗ್‌ಪುರದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ: ಸಂಸ್ಥೆ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ

ರಾಮ ನಾರಂಗ್ ಮತ್ತು ರಮೇಶ್ ನಾರಂಗ್ ನಡುವಣ ಪ್ರಕರಣ ಹಾಗೂ ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣ ಸೇರಿದಂತೆ ಸುಪ್ರೀಂ ಕೋರ್ಟ್ ನೀಡಿದ ವಿವಿಧ ತೀರ್ಪುಗಳನ್ನು ಅವಲಂಬಿಸಿದ ನ್ಯಾಯಾಲಯ, ಅಸಾಧಾರಣ ಪ್ರಕರಣಗಳಲ್ಲಿ, ತೀರ್ಪಿನ ಪರಿಣಾಮಗಳು ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದರೆ ಮೇಲ್ಮನವಿ ನ್ಯಾಯಾಲಯವು ಶಿಕ್ಷೆಯನ್ನು ಅಮಾನತುಗೊಳಿಸಬಹುದು ಎಂದಿತು.

ಯಾದವ್ ಅವರ ಮೇಲ್ಮನವಿ ಇತ್ಯರ್ಥವಾಗುವವರೆಗೆ ಅಪರಾಧ ಸಾಬೀತು ತೀರ್ಪು ಮತ್ತು ವಿಧಿಸಲಾದ ಶಿಕ್ಷೆಯನ್ನು ಸ್ಥಗಿತಗೊಳಿಸಲು ನ್ಯಾಯಾಲಯ ತೀರ್ಮಾನಿಸಿತು.  

Kannada Bar & Bench
kannada.barandbench.com