

ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ಅನುಪಾಲನಾ ಅಫಿಡವಿಟ್‌ಗಳನ್ನು ಸಲ್ಲಿಸಲು ವಿಫಲವಾದ ಕಾರಣ ಪಶ್ಚಿಮ ಬಂಗಾಳ, ದೆಹಲಿ ಹಾಗೂ ತೆಲಂಗಾಣ ಹೊರತುಪಡಿಸಿ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ, ಮುಂದಿನ ವಿಚಾರಣೆಯ ದಿನ ಅಧಿಕಾರಿಗಳು ಗೈರುಹಾಜರಾದರೆ, ದಂಡ ವಿಧಿಸಲಾಗುವುದು ಅಥವಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
"ಅಧಿಕಾರಿಗಳು ಪತ್ರಿಕೆಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಓದಲಿಲ್ಲವೇ? ಅವರಿಗೆ ನೋಟಿಸ್ ನೀಡದಿದ್ದರೂ ಅವರು ಇಲ್ಲಿ ಇರಬೇಕಿತ್ತು. ನವೆಂಬರ್ 3 ರಂದು ಎಲ್ಲಾ ಮುಖ್ಯ ಕಾರ್ಯದರ್ಶಿಗಳು ಹಾಜರಿರಬೇಕು... " ಎಂದು ಪೀಠ ಹೇಳಿದೆ.
ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿ- 2023ರ ಪಾಲನೆ ಬಗ್ಗೆ ತಿಳಿಸುವಂತೆ ನ್ಯಾಯಾಲಯ ಈ ಹಿಂದೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಆದರೆ, ಪಶ್ಚಿಮ ಬಂಗಾಳ, ದೆಹಲಿ ಹಾಗೂ ತೆಲಂಗಾಣ ರಾಜ್ಯಗಳು ಮಾತ್ರ ಅನುಪಾಲನಾ ಅಫಿಡವಿಟ್ ಸಲ್ಲಿಸಿವೆ ಎಂದು ನ್ಯಾಯಾಲಯ ಇಂದು ತಿಳಿಸಿದೆ.
"ಬೀದಿ ನಾಯಿ ಹಾವಳಿ ಘಟನೆಗಳು ನಿರಂತರ ನಡೆಯುತ್ತಿವೆ. ವಿದೇಶಗಳ ದೃಷ್ಟಿಯಲ್ಲಿ ದೇಶ ಕೆಟ್ಟದಾಗಿ ಬಿಂಬಿತವಾಗುತ್ತಿದೆ. ಈ ಬಗ್ಗೆ ಸುದ್ದಿ ಕೂಡ ಪ್ರಕಟವಾಗಿದೆ" ಎಂದು ನ್ಯಾಯಮೂರ್ತಿ ನಾಥ್ ಆತಂಕ ವ್ಯಕ್ತಪಡಿಸಿದರು.
ನಾಯಿಗಳ ಮೇಲೆ ಕ್ರೌರ್ಯ ನಡೆಯುತ್ತಿರುವ ಬಗ್ಗೆ ವಕೀಲರೊಬ್ಬರು ಪ್ರಸ್ತಾಪಿಸಿದಾಗ, ನ್ಯಾಯಾಲಯವು
"ಮನುಷ್ಯರ ವಿರುದ್ಧ ನಡೆಯುವ ಕ್ರೌರ್ಯದ ಬಗ್ಗೆ ಏನು ಹೇಳುತ್ತೀರಿ?" ಎಂದು ಕೇಳಿತು.
ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಬಯಸುವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. ಎಲ್ಲ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಪ್ರಕರಣದಲ್ಲಿ ಪಕ್ಷಕಾರರಾಗಲು ಬಯಸಿದರೆ ಎಷ್ಟು ಕೋಟಿ ಪಕ್ಷಕಾರಾಗಲಿದ್ದಾರೆ ಎಂದು ನ್ಯಾಯಾಲಯವು ಅಸಮಾಧಾನ ಸೂಚಿಸಿತು.
ಇಡೀ ದೆಹಲಿಯನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವಂತೆ ದೆಹಲಿ ಸರ್ಕಾರ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಹಾಗೂ ನವದೆಹಲಿ ಮಹಾನಗರ ಪಾಲಿಕೆಗಳಿಗೆ (ಎನ್‌ಡಿಎಂಸಿ) ಸುಪ್ರೀಂ ಕೋರ್ಟ್ ಆಗಸ್ಟ್ 11ರಂದು ಆದೇಶಿಸಿತ್ತು. ಈ ವಿಚಾರದ ಕುರಿತು ದೇಶಾದ್ಯಂತ ಪರ- ವಿರೋಧದ ಚರ್ಚೆಗಳು ನಡೆದಿದ್ದವು.