ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌, ಪವಿತ್ರ ಗೌಡ ಸಹಿತ ಆರೋಪಿಗಳ ಪೊಲೀಸ್‌ ಕಸ್ಟಡಿ ಜೂನ್‌ 20ರವರೆಗೆ ವಿಸ್ತರಣೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದಿಸಲು ವಕೀಲ ಪಿ ಪ್ರಸನ್ನಕುಮಾರ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದೆ.
Darshan and Pavitra Gowda
Darshan and Pavitra Gowda

ಬೆಂಗಳೂರಿನಲ್ಲಿ ನಡೆದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್‌, ಅವರ ಗೆಳತಿ ಪವಿತ್ರ ಗೌಡ ಸೇರಿ 10 ಮಂದಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಶನಿವಾರ ಮತ್ತೆ ಐದು ದಿನಗಳ ಕಾಲ ಅಂದರೆ ಜೂನ್‌ 20ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ.

ದರ್ಶನ್‌ ಸೇರಿ ಎಲ್ಲಾ ಆರೋಪಿಗಳನ್ನು ಕಾಮಾಕ್ಷಿ ಪಾಳ್ಯ ಠಾಣೆಯ ಪೊಲೀಸರು ಬೆಂಗಳೂರಿನ 24ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಉಸ್ತುವಾರಿಯಾಗಿರುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವನಾಥ್‌ ಚನ್ನಬಸಪ್ಪ ಗೌಡರ್‌ ಅವರ ಮುಂದೆ ಹಾಜರುಪಡಿಸಿದರು.

ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಮತ್ತು ದರ್ಶನ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು ಪವಿತ್ರ ಗೌಡ, ದರ್ಶನ್‌ ಸೇರಿ ಒಟ್ಟು 10 ಮಂದಿಯನ್ನು ಜೂನ್‌ 20ರವರೆಗೆ ಕಸ್ಟಡಿಗೆ ನೀಡಿದೆ.

ಪ್ರಕರಣ ನಡೆಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕವಾಗಿರುವ ಪಿ ಪ್ರಸನ್ನ ಕುಮಾರ್‌ ಅವರು “ರೇಣುಕಾಸ್ವಾಮಿ ಅವರ ಶವದ ಗುರುತು ಸಿಗದಂತೆ ಮಾಡಲು 30 ಲಕ್ಷ ರೂಪಾಯಿ ಆಮಿಷ ಒಡ್ಡಲಾಗಿತ್ತು. ಇದನ್ನು ವಶಪಡಿಸಿಕೊಳ್ಳಲಾಗಿದೆ. 10 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಿ ಡಿ ಯನ್ನು ನ್ಯಾಯಾಲಯ ಪರಿಶೀಲಿಸಬಹುದಾಗಿದೆ. 5 ಮತ್ತು 13ನೇ ಆರೋಪಿಗಳು ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿದ್ದಾರೆ. ಇದಕ್ಕೆ ಬಳಕೆ ಮಾಡಿರುವ ವಸ್ತುವನ್ನು ವಶಪಡಿಸಿಕೊಳ್ಳಬೇಕಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸುವ ಅಗತ್ಯ ಇರುವುದರಿಂದ 9 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಬೇಕು” ಎಂದು ಕೋರಿದರು.

ದರ್ಶನ್‌ ಪರವಾಗಿ ವಕೀಲ ಅನಿಲ್‌ ಬಾಬು ವಕಾಲತ್ತು ಹಾಕಿದ್ದು, ಪೊಲೀಸ್‌ ಕಸ್ಟಡಿಗೆ ನೀಡುವುದಕ್ಕೆ ಆಕ್ಷೇಪಿಸಿದರು.

ಪ್ರಕರಣದ ಹಿನ್ನೆಲೆ: ದರ್ಶನ್‌ ಗೆಳತಿ ಪವಿತ್ರ ಗೌಡಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಜೂನ್‌ 8ರಂದು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆಯ ವಾಹನಗಳನ್ನು ನಿಲ್ಲಿಸುವ ಖಾಸಗಿ ಶೆಡ್‌ ಒಂದರಲ್ಲಿ ಅವರ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವ ಆರೋಪ ದರ್ಶನ್‌ ಮತ್ತು ಸಹಚರರ ಮೇಲಿದೆ. ಆನಂತರ ಶವವನ್ನು ತಡರಾತ್ರಿ ಕಾಮಾಕ್ಷಿ ಪಾಳ್ಯ ಸಮೀಪದ ರಾಜಕಾಲುವೆಯಲ್ಲಿ ಎಸೆಯಲಾಗಿತ್ತು ಎಂದು ಆರೋಪಿಲಾಗಿದೆ.

Also Read
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ: ನಟ ದರ್ಶನ್‌, ಗೆಳತಿ ಪವಿತ್ರಾ ಗೌಡ ಸೇರಿ 13 ಮಂದಿ 6 ದಿನ ಪೊಲೀಸ್‌ ಕಸ್ಟಡಿಗೆ

ಸ್ಥಳೀಯರಿಂದ ಅನಾಥ ಶವದ ಬಗ್ಗೆ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ಭೇದಿಸಿ, ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿದ್ದ ದರ್ಶನ್‌ ಅವರನ್ನು ಬಂಧಿಸಿದ್ದರು. ಅಂದೇ ಮೊದಲ ಆರೋಪಿ ಪವಿತ್ರ ಗೌಡರನ್ನು ಬಂಧಿಸಿದ್ದರು. ಇಡೀ ಪ್ರಕರಣದ ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.

ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201, 120ಬಿ (ಪಿತೂರಿ) ಮತ್ತು 34ರ ಅಡಿ ಪ್ರಕರಣ ದಾಖಲಿಸಲಾಗಿದೆ. 

Kannada Bar & Bench
kannada.barandbench.com