
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಟ ದರ್ಶನ್ ಮತ್ತಿತರರು ಮಂಗಳವಾರ ಬೆಂಗಳೂರಿನ ಸತ್ರ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಈರಪ್ಪ ಪವಡಿ ನಾಯ್ಕ್ ಅವರ ಮುಂದೆ ಮೊದಲ ಆರೋಪಿ ಪವಿತ್ರಾ ಗೌಡ, ಎರಡನೇ ಆರೋಪಿ ದರ್ಶನ್ ಸೇರಿ 14 ಆರೋಪಿಗಳು ಹಾಜರಾಗಿದ್ದರೆ, ಇತರ ಮೂವರು ಆರೋಪಿಗಳಾದ ಕಾರ್ತಿಕ್, ಕೇಶವ್ ಹಾಗೂ ನಿಖಿಲ್ ಗೈರಾಗಿದ್ದರು.
ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಾಲಯ, ಅರ್ಜಿಯ ಮುಂದಿನ ವಿಚಾರಣೆ ವೇಳೆ ಆರೋಪ ನಿಗದಿಪಡಿಸುವುದಾಗಿ ತಿಳಿಸಿತು.
ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು ಪ್ರಕರಣದಲ್ಲಿ ಕೆಲವರು ಆರೋಪದಿಂದ ಮುಕ್ತಗೊಳಿಸಲು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದ್ದರಿಂದ, ಈಗಿರುವ ಹಂತದಲ್ಲೇ (ಆರೋಪ ನಿಗದಿಗೂ ಮುನ್ನ ವಿಚಾರಣೆ) ಪ್ರಕರಣ ಮುಂದುವರಿಯಲಿ. ಆರೋಪ ನಿಗದಿಪಡಿಸುವ ಹಂತಕ್ಕೆ ಹೋಗಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಮನವಿ ಪರಿಗಣಿಸಿದ ನ್ಯಾಯಾಲಯವು ಆರೋಪ ನಿಗದಿಗೆ ದಿನಾಂಕ ಗೊತ್ತುಪಡಿಸದೆ, ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.
ದರ್ಶನ್, ಪವಿತ್ರಾ ಗೌಡಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದರ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ.