[ರೇಣುಕಾಸ್ವಾಮಿ ಕೊಲೆ ಪ್ರಕರಣ] ಎಸ್‌ಪಿಪಿ ಪ್ರಸನ್ನ ಕುಮಾರ್‌ ಬದಲಾವಣೆ ಇಲ್ಲ; ಮಾಧ್ಯಮಗಳಿಂದ ಕಲ್ಪಿತ ವರದಿ: ಸಿಎಂ

ಪ್ರಸನ್ನ ಕುಮಾರ್‌ ಬದಲಾವಣೆ ಮಾಡಲು ನನ್ನ ಮೇಲೆ ಯಾವುದೇ ಸಚಿವ, ಶಾಸಕರಿಂದ ಒತ್ತಡವಿಲ್ಲ. ಒತ್ತಡ ಹಾಕಿದರೆ ಅದನ್ನು ನಾನು ಕೇಳುವುದೂ ಇಲ್ಲ. ಈ ನೆಲದ ಕಾನೂನಿನ ರೀತಿ ತನಿಖೆಯಾಗುತ್ತದೆ ಎಂದು ಟ್ವೀಟ್‌ ಮೂಲಕ ತಿಳಿಸಿರುವ ಸಿಎಂ ಸಿದ್ದರಾಮಯ್ಯ.
Chief Minister Siddaramaiah
Chief Minister Siddaramaiah

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದಿಸಲು ನೇಮಕಗೊಂಡಿರುವ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ ಅವರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಎಸ್‌ಪಿಪಿ ಬದಲಾವಣೆ ವಿಚಾರದಲ್ಲಿ ಮಾಧ್ಯಮಗಳಿಂದ ಕಲ್ಪಿತ ವರದಿ ಸೃಷ್ಟಿಯಾಗಿದೆ ಎಂದು ರಾಜ್ಯ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಪ್ರಸನ್ನ ಕುಮಾರ್‌ ಬದಲಾವಣೆ ಮಾಡಲು ನನ್ನ ಮೇಲೆ ಯಾವುದೇ ಸಚಿವ, ಶಾಸಕರಿಂದ ಒತ್ತಡವಿಲ್ಲ. ಒತ್ತಡ ಹಾಕಿದರೆ ಅವೆಲ್ಲವನ್ನೂ ನಾನು ಕೇಳುವುದೂ ಇಲ್ಲ. ಈ ನೆಲದ ಕಾನೂನು ಏನು ಹೇಳುತ್ತದೆಯೋ ಅದರಂತೆ ತನಿಖೆಯಾಗುತ್ತದೆ” ಎಂದು ಹೇಳಿದ್ದಾರೆ.

Also Read
ನಟ ದರ್ಶನ್‌ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿರುವ ವಕೀಲ ಪ್ರಸನ್ನಕುಮಾರ್‌ ಯಾರು?

“ಪ್ರಕರಣದಲ್ಲಿ ಒತ್ತಡವೋ, ಇನ್ನೊಂದೋ ಈ ಯಾವುದಕ್ಕೂ ನಾನು ಗಮನ ಕೊಡುವವನಲ್ಲ. ಪೊಲೀಸರಿಗೆ ಪ್ರಕರಣದ ತನಿಖೆಯಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಎಸ್‌ಪಿಪಿ ಬದಲಾವಣೆಯ ಪ್ರಸ್ತಾವ ನನ್ನ ಮುಂದೆ ಈವರೆಗೂ ಬಂದೇ ಇಲ್ಲ. ಇದಕ್ಕೆ ಸಂಬಂಧಪಟ್ಟಂತೆ ಈಗ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಕಲ್ಪಿತ ವರದಿಗಳು. ಇದರಲ್ಲಿ ಯಾವುದೇ ಹುರುಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Kannada Bar & Bench
kannada.barandbench.com