ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಮರಣೋತ್ತರ ವರದಿಗಳ ಕುರಿತು ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಶನಿವಾರ ವಾದ ಪೂರ್ಣಗೊಳಿಸಿದ್ದಾರೆ.
ನಟ ದರ್ಶನ್, ಪವಿತ್ರಾಗೌಡ, ಲಕ್ಷ್ಮಣ್, ಲೋಕೇಶ್ ಮತ್ತು ರವಿಶಂಕರ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ನಡೆಸಿದರು.
ನಾಗೇಶ್ ಅವರ ವಾದ ಆಲಿಸಿದ ನ್ಯಾಯಾಲಯವು ಇತರೆ ಅರ್ಜಿದಾರ/ಆರೋಪಿಗಳ ಪರ ವಕೀಲರ ವಾದ ಆಲಿಸಲು ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದೆ. ಇಂದು ನಾಗೇಶ್ ಅವರ ವಾದಾಂಶದ ಪ್ರಮುಖ ವಿಚಾರಗಳು ಇಂತಿವೆ.
ಮೋಹನ್ ರಾಜ್ ಎಂಬವರು ದರ್ಶನ್‌ಗೆ ನೀಡಬೇಕಿದ್ದ ಹಣವನ್ನು ಮೇ 2ರಂದು ನೀಡಿದ್ದರು. ಆದರೆ, ರೇಣುಕಾಸ್ವಾಮಿಯ ಕೊಲೆ ಸಾಕ್ಷ್ಯ ನಾಶ ಮಾಡಲು ದರ್ಶನ್ ಹಣ ಸಂಗ್ರಹಿಸಿಟ್ಟಿದ್ದರು ಎಂದು ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆಗೆ ರೇಣುಕಾಸ್ವಾಮಿ ಯಾರೆಂಬುದೇ ಜಗತ್ತಿಗೆ ಗೊತ್ತಿರಲಿಲ್ಲ.
ದರ್ಶನ್ ಅವರು ಈ ಹಿಂದೆ ಮಾಲೀಕರಾಗಿದ್ದ ಡಿ ಬೀಟ್ಸ್ ಕಡೆಯಿಂದ ಮೋಹನ್ ರಾಜ್ ಪುತ್ರಿಯ ಡ್ಯಾನ್ಸ್ ಆಲ್ಬಂ ಅನ್ನು ದರ್ಶನ್ ಮಾಡಿಸಿಕೊಟ್ಟಿದ್ದರು. ಇದಕ್ಕಾಗಿ ಅವರಿಂದ ಫೆಬ್ರವರಿ 2ರಂದು ದರ್ಶನ್ ಹಣ ಪಡೆದಿದ್ದು, ಅದನ್ನು ಮೇ 2ರಂದು ಹಿಂದಿರುಗಿಸಿದ್ದಾಗಿ ಮೋಹನ್ ರಾಜ್ ಪೊಲೀಸರಿಗೆ ತಿಳಿಸಿದ್ದಾರೆ. ಹೀಗಿರುವಾಗ ರೇಣುಕಾಸ್ವಾಮಿ ಕೊಲೆ ಆದ ಬಳಿಕ ದರ್ಶನ್ ಹಣ ಸಂಗ್ರಹಿಸಿದ್ದಾರೆ ಎಂದು ಹೇಳುವುದು ಹೇಗೆ?
ರೇಣುಕಾಸ್ವಾಮಿ ಎಂಬವನನ್ನು ಮುಂದೆ ಒಂದು ದಿನ ಕೊಲ್ಲಬೇಕಾಗುತ್ತದೆ. ಆ ಸಂಬಂಧ ದರ್ಶನ್ ಮೇಲೆ ಆರೋಪಪಟ್ಟಿ ಸಲ್ಲಿಸಲಾಗುತ್ತದೆ. ಈ ಸಂಬಂಧ ಸಾಕ್ಷಿಗಳಿಗೆ ಹಣ ನೀಡಬೇಕಾಗುತ್ತದೆ ಎಂದು ಊಹಿಸಲು ಸಾಧ್ಯವೇ? ರೇಣುಕಾಸ್ವಾಮಿ ಎಂಬಾತ ಇದ್ದಾನೆ ಎಂಬುದು ಗೊತ್ತಾಗಿದ್ದು ಜೂನ್ 6ರಂದು. ಅಲ್ಲಿಯವರೆಗೆ ಆತನನ್ನು ಗೌತಮ್ ಎಂದೇ ನಂಬಲಾಗುತ್ತಿತ್ತು. ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ಕಥೆಯಂತಿದೆ ಪೊಲೀಸರ ತನಿಖಾ ವರದಿ.
ಸೆಕ್ಯೂರಿಟಿ ಗಾರ್ಡ್ ಹೇಳಿಕೆಯಲ್ಲಿ ಘಟನೆ ಕುರಿತು ವಿವರಿಸಲಾಗಿದೆ. ಜೂನ್ 9ರಂದು ಕೃತ್ಯದ ಸ್ಥಳ ಜಪ್ತಿ ಮಾಡಲಾಗಿದೆ. ಪೊಲೀಸರು ಜೂನ್ 9ರಂದೇ ಸ್ಥಳದಲ್ಲಿದ್ದಾಗ ಜೂನ್ 12ರವರೆಗೆ ಕಾಯುವ ಅಗತ್ಯವಿತ್ತೇ? ಜೂನ್ 9ರಂದೇ ಪೊಲೀಸರಿಗೆ ಕೃತ್ಯದ ಸಂಪೂರ್ಣ ಮಾಹಿತಿ ಇತ್ತು. ಹೀಗಿದ್ದಾಗ ದರ್ಶನ್ ಹೇಳಿಕೆ ನೀಡುವವರೆಗೆ ಏಕೆ ಸುಮ್ಮನಿದ್ದರು? ಹೇಳಿಕೆ ನಂತರ ಏಕೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪಿಎಸ್‌ಐ ವಿನಯ್ ಹೇಳಿಕೆಯಲ್ಲಿ ವಾಚ್‌ಮನ್ ಕೊಠಡಿಯಲ್ಲಿದ್ದ ಎರಡು ಸಿಸಿಟಿವಿ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಲಾಗಿದೆ.
ಡಿವಿಆರ್ ಸಾಕ್ಷ್ಯವನ್ನು ನಾಶಪಡಿಸಿಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಜೂನ್ 9ರಂದೇ ಪಿಎಸ್‌ಐ ವಿನಯ್ ಅವರು ಅದನ್ನು 14ನೇ ಆರೋಪಿಗೆ ಕಳುಹಿಸಿದ್ದಾರೆ. ಇದು ಹೇಗೆ ಸಾಧ್ಯ? ವಿಡಿಯೋ ಡಿಲೀಟ್ ಮಾಡಿದ್ದು ಯಾರು?
ಪಿಎಸ್‌ಐ ವಿನಯ್ ಮೊಬೈಲ್ ಏಕೆ ಜಪ್ತಿ ಮಾಡಿಲ್ಲ? ಅವರ ಮೊಬೈಲ್‌ನಿಂದ ವಿಡಿಯೊವನ್ನು ಏಕೆ ರಿಟ್ರೀವ್ ಮಾಡಿಲ್ಲ. ರಕ್ತದ ಕಲೆ ಇರುವ ಎರಡು ಮರದ ಕೊಂಬೆ ವಶಕ್ಕೆ ಪಡೆದಿದ್ದಾರೆ. ಎಫ್‌ಎಸ್‌ಎಲ್ ವರದಿಯಲ್ಲಿ ರಕ್ತವೇ ಇಲ್ಲ ಎಂದಿದೆ. ಇಂಥ ತನಿಖೆ ಆಧಾರದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಸಾಧ್ಯವೇ?
ಸ್ಥಳದಲ್ಲಿದ್ದ ಮಣ್ಣನ್ನು ಸಂಗ್ರಹಿಸಲಾಗಿದ್ದು, ಎಫ್‌ಎಸ್‌ಎಲ್ ವರದಿಯಲ್ಲಿ ರಕ್ತದ ಕಲೆ ಇತ್ತು ಎಂದಿದೆ. ಪಂಚನಾಮೆಯಲ್ಲಿ ಇಲ್ಲದ್ದು ಎಫ್‌ಎಸ್‌ಎಲ್ ವರದಿಯಲ್ಲಿ ಹೇಗೆ ಬಂತು? ಇದೆಲ್ಲವೂ ಪೊಲೀಸರು ಸಾಕ್ಷಿ ತಿರುಚಿರುವುದಕ್ಕೆ ಉದಾಹರಣೆ. ದರ್ಶನ್ ಚಪ್ಪಲಿ ಶೂ ಆಗಿರುವಾಗ ಇದರಲ್ಲೇನು ವಿಶೇಷವಿಲ್ಲ.
14ನೇ ಆರೋಪಿ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಫೋಟೊ ಇತ್ತು ಎಂದು ಹೇಳಲಾಗಿದೆ. ಆ ಫೋಟೊವನ್ನು ರಿಟ್ರೀವ್ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಪಿಎಸ್‌ಐ ತಮ್ಮ ಹೇಳಿಕೆಯಲ್ಲಿ ತಾನು ಅಂದು ಕೇರಳದಲ್ಲಿದ್ದಾಗಿ ಹೇಳಿದ್ದಾರೆ. ಆದರೆ, ಮೃತನ ಫೋಟೊವನ್ನು ಕಳುಹಿಸಿದ್ದೇ ಪಿಎಸ್‌ಐ ವಿನಯ್. ಆದರೆ, ವಿನಯ್ ಮೊಬೈಲ್ ಜಪ್ತಿ ಮಾಡಿ ಫೋಟೊ ರಿಟ್ರೀವ್ ಮಾಡಿಲ್ಲ. ಹೀಗಾಗಿ ಇದೊಂದು ಕ್ಲಾಸಿಕ್ ತನಿಖೆ ಎಂದು ಹೇಳಲು ಸಾಧ್ಯವೇ?
ಜೂನ್ 9ರ ಬೆಳಿಗ್ಗೆ 10ಕ್ಕೆ ರಸ್ತೆ ಬದಿಯಲ್ಲಿ ರೇಣುಕಾಸ್ವಾಮಿ ಮೃತದೇಹ ಬಿಸಾಡಲಾಗಿದೆ ಎಂದು ದೂರು ದಾಖಲಿಸಲಾಗಿದೆ. ತಕ್ಷಣವೇ ದೇಹದ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ, ಜೂನ್ 11ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೇಕೆ ಮಾಡಿದರು? ಜೂನ್ 11ರ ಮಧ್ಯಾಹ್ನ 2.45ಕ್ಕೆ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ದೇಹದ ಗುರುತು ಪತ್ತೆಯಾಗಿಲ್ಲ ಎಂದು ಸಬೂಬು ನೀಡಲಾಗಿದೆ. ಆದರೆ, ಮಹಜರಿಗೆ ಗುರುತಿನ ಪತ್ತೆ ಏಕೆ ಬೇಕಿತ್ತು?