
ಮುಡಾ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ ತನಿಖೆ ವಹಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅರ್ಜಿದಾರ ವಕೀಲರೊಬ್ಬರ ನಡತೆಯ ಬಗ್ಗೆ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ನಿಲುವು, ಬಣ್ಣ ಬದಲಿಸುವ ನಿಮ್ಮ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮೌಖಿಕವಾಗಿ ಎಚ್ಚರಿಸಿದೆ.
ಮುಡಾ ಪ್ರಕರಣದ ಸಿಬಿಐ ತನಿಖೆ ಕೋರಿ ಮೈಸೂರಿನ ವಕೀಲ ಸಿ ಸಂತೋಷ್ ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲ ಬಿ ಎಸ್ ಸಾವಂತ್ ಅವರು “ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ (ಸ್ನೇಹಮಯಿ ಕೃಷ್ಣ) ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠವು (ನ್ಯಾಯಮೂರ್ತಿ ಎಂ ನಾಗಪ್ರಸನ್ನ) ಮೆರಿಟ್ ಇಲ್ಲ ಎಂದು ವಜಾಗೊಳಿಸಿದೆ. ಹೀಗಾಗಿ, ಅರ್ಜಿ ಹಿಂಪಡೆಯಲು ಮೆಮೊ ಸಲ್ಲಿಸಿದ್ದೇನೆ” ಎಂದರು.
ಆಗ ಪೀಠವು “ಅರ್ಜಿಯನ್ನು ಹಿಂಪಡೆಯುತ್ತಿರುವ ನಿಮ್ಮ ನಿಲುವು ನಿಮ್ಮ ಪ್ರಾಮಾಣಿಕತೆಯನ್ನು ನೇರವಾಗಿ ಪ್ರತಿಬಿಂಬಿಸುತ್ತದೆ. ನ್ಯಾಯಾಲಯದ ಮುಂದೆ ನೀವು ನಿಮ್ಮ ನಿಲುವನ್ನು ಬದಲಿಸುತ್ತಿದ್ದೀರಿ. 2024ರ ನವೆಂಬರ್ 4ರ ವಿಚಾರಣೆಯಲ್ಲಿ ನಾವು ನಿರ್ದಿಷ್ಟ ಆದೇಶ ಮಾಡಿದ್ದೇವೆ (ಮಾಧ್ಯಮಗಳ ವರದಿ ಆಧರಿಸಿ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯಕ್ಕೆ ಸಮಾಧಾನ ಉಂಟು ಮಾಡುವ ರೀತಿಯಲ್ಲಿ ಸೂಕ್ತವಾದ ನಿರ್ದಿಷ್ಟ ಮನವಿ ಮೂಲಕ ಪ್ರಕರಣವನ್ನು ಬಲಪಡಿಸಬೇಕು). ಅದನ್ನು ಪಾಲಿಸುವುದು ಬಿಟ್ಟು ನೀವು ಬೇರೆ ನಿರ್ಧಾರ ಕೈಗೊಳ್ಳುತ್ತಿದ್ದೀರಿ. ಮುಂದಿನ ವಿಚಾರಣೆಯಲ್ಲಿ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಸಾರ್ವಜನಿಕ ಹಿತಾಸಕ್ತಿ ದಾವೆದಾರರಾದ ನೀವು ಗಂಭೀರವಾಗಿಲ್ಲ” ಎಂದು ಕಿಡಿಕಾರಿತು.
ಮುಂದುವರಿದು, “ನಾವು ಪ್ರಕರಣದ ಬಗ್ಗೆ ಹೇಳುತ್ತಿಲ್ಲ. ನಿಮ್ಮ ನಡತೆಯ ಬಗ್ಗೆ ಹೇಳುತ್ತಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ವೇದಿಕೆ ಬಳಸಿಕೊಂಡು ನ್ಯಾಯಾಲಯದ ಮುಂದೆ ಪ್ರಕರಣದ ಕುರಿತು ನಿಮ್ಮ ನಿಲುವು, ಬಣ್ಣ ಬದಲಿಸುತ್ತಿದ್ದೀರಿ. ನಿಮ್ಮ ವಾದ, ಅರ್ಜಿ ಹಿಂಪಡೆಯುವ ಸಂಬಂಧದ ಮೆಮೊ, ವಿಚಾರಣೆಗೆ ಕೋರುವುದು, ಅರ್ಜಿ ಸಲ್ಲಿಸುವುದು.. ಇದೆಲ್ಲವೂ ನ್ಯಾಯಾಲಯದ ಗಮನದಲ್ಲಿದೆ. ವಾದ ಮಂಡಿಸಲು ನೀವು ಬರುತ್ತೀರೋ ಅಥವಾ ನಿಮ್ಮ ಹಿರಿಯ ವಕೀಲರು ಬರುತ್ತಾರೋ.. ಯಾರೇ ಬಂದರೂ ಎಚ್ಚರಿಕೆಯಿಂದ ಇರಿ, ನಿಮ್ಮ ನಡತೆ ಕುರಿತು ಕಠಿಣ ಕ್ರಮಕೈಗೊಳ್ಳುತ್ತೇವೆ. ಪಿಐಎಲ್ ವೇದಿಕೆಯನ್ನು ಈ ರೀತಿ ಬಳಕೆ ಮಾಡಿಕೊಳ್ಳಲು ಅನುಮತಿಸುವುದಿಲ್ಲ, ಪಿಐಎಲ್‌ನಲ್ಲಿ ನೈಜ ಅಂಶವಿದ್ದರೆ ನಿಮ್ಮ ಪರವಾಗಿ ಅದನ್ನು ನಾವು ಮುಂದುವರಿಸುತ್ತೇವೆ. ನೀವು ಏನು ಹೇಳುತ್ತಿದ್ದೀರಿ ಎಂಬುದು ನಮಗೆ ತಿಳಿದಿದೆ. ಎಲ್ಲವೂ ಬಹಿರಂಗವಾಗಿದೆ” ಎಂದು ಏರು ಧ್ವನಿಯಲ್ಲಿ ಪೀಠ ಹೇಳಿತು.
ಅಂತಿಮವಾಗಿ ಪ್ರಕರಣದ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಿತು.