ಮುಂಬೈನ ʼಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ- ಐಎನ್‌ಎಸ್ʼನಲ್ಲಿಯ ಆಸ್ತಿಯನ್ನು ತಮಗೆ ಒಪ್ಪಿಸಲು ವಿಳಂಬ ಧೋರಣೆ ಅನುಸರಿಸಿದ ಆರ್ಬಿಟ್ ಪ್ರಾಜೆಕ್ಟ್ ವಿರುದ್ಧ ಬಾಲಿವುಡ್ ನಟ ಸೈಫ್ ಅಲಿ ಖಾನ್ ಸಲ್ಲಿಸಿದ್ದ ಅರ್ಜಿಗೆ ಮಹಾರಾಷ್ಟ್ರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಇತ್ತೀಚೆಗೆ ಭಾಗಶಃ ಅನುಮತಿ ನೀಡಿದೆ [ಸೈಫ್ ಅಲಿ ಖಾನ್ ಪಟೌಡಿ ಮತ್ತು ಆರ್ಬಿಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಖಾನ್ ಅವರಿಗೆ ಆಸ್ತಿ ನೀಡಲು ತಾನು ಅನುಸರಿಸಿದ ವಿಳಂಬ ಧೋರಣೆಗೆ ಕಾರಣವೇನು ಎಂಬುದಕ್ಕೆ ಸಮರ್ಥನೀಯ ವಿವರಣೆ ಪ್ರತಿವಾದಿಯಾದ ಆರ್ಬಿಟ್ ಎಂಟರ್‌ಪ್ರೈಸಸ್‌ನಿಂದ ದೊರೆತಿಲ್ಲ ಎಂಬ ವಿಚಾರವನ್ನು ರೇರಾದ ನ್ಯಾಯಾಂಗ ಸದಸ್ಯ ಮಹೇಶ್ ಪಾಠಕ್ ತಿಳಿಸಿದರು.
ಸೈಫ್ ಅಲಿ ಖಾನ್ ಅವರು ಆರ್ಬಿಟ್ ಪ್ರಾಜೆಕ್ಟ್‌ನಿಂದ ಕ್ರಮವಾಗಿ ₹14 ಕೋಟಿ ಮತ್ತು ₹11 ಕೋಟಿ ಮೊತ್ತದ ಎರಡು ಗೃಹ ಯೂನಿಟ್‌ಗಳನ್ನು ಕಾಯ್ದಿರಿಸಿತ್ತು. ಆದರೆ ಒಟ್ಟು ಮೊತ್ತದ ಶೇ 20ರಷ್ಟು ಹಣ ಪಾವತಿಸುವಂತೆ ಸೂಚಿಸುವ ಬದಲು ₹ 13 ಕೋಟಿ ಮತ್ತು ₹ 10 ಕೋಟಿಗಳನ್ನು ಪಾವತಿಸುವಂತೆ ತಿಳಿಸಿ ಖಾನ್ ಅವರನ್ನು ದಿಕ್ಕುತಪ್ಪಿಸಲಾಯಿತು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಜುಲೈ 31, 2017 ರೊಳಗೆ ಖಾನ್ ಅವರಿಗೆ ಗೃಹ ಯೂನಿಟ್‌ಗಳನ್ನು ಸ್ವಾಧೀನಕ್ಕೆ ನೀಡುವ ಬದಲು ಎರಡು ವರ್ಷಗಳ ಕಾಲ ವಿಳಂಬ ಧೋರಣೆ ಅನುಸರಿಸಿತು. ಹೀಗಾಗಿ ವಿಳಂಬದ ಅವಧಿಗೆ ಬಡ್ಡಿ ಸಹಿತ ಹಣವನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ಖಾನ್ ಕೋರಿದ್ದರು.
ಪ್ರತಿವಾದಿ ಅತಿಯಾದ ವಿಳಂಬಕ್ಕೆ ಸಮಂಜಸ ಕಾರಣ ನೀಡಿಲ್ಲ ಎಂದಿರುವ ರೇರಾ ದೂರನ್ನು ಭಾಗಶಃ ಅನುಮತಿಸಿ ಆದೇಶದ ದಿನಾಂಕದಿಂದ 15 ದಿನಗಳ ಒಳಗೆ ಯೂನಿಟ್‌ಗಳನ್ನು ವರ್ಗಾಯಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿತು. ಅಲ್ಲದೆ ವಿಳಂಬ ಧೋರಣೆ ಅನುಸರಿಸಿದ್ದಕ್ಕಾಗಿ ಖಾನ್ ಅವರಿಗೆ ಫೆಬ್ರವರಿ 1, 2018 ರಿಂದ ವಾಸಯೋಗ್ಯ ಪ್ರಮಾಣಪತ್ರ ಪಡೆದಿರುವ ಫೆಬ್ರವರಿ 12, 2021ರವರೆಗೆ ಬಡ್ಡಿ ಪಾವತಿಸಬೇಕು ಎಂದು ಅದು ಹೇಳಿತು. ಅಲ್ಲದೆ ಪಾವತಿಸಬೇಕಾದ ಬಡ್ಡಿ ಕುರಿತಂತೆ ಗೃಹ ಯೂನಿಟ್‌ಗಳನ್ನು ತಮ್ಮ ಒಡೆತನಕ್ಕೆ ಪಡೆಯಲು ನೀಡಬೇಕಿರುವ ಬಾಕಿ ಮೊತ್ತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಎರಡೂ ಕಡೆಯ ಪಕ್ಷಕಾರರಿಗೆ ಅದು ಸ್ವಾತಂತ್ರ್ಯ ನೀಡಿತು.