ಜಾತಿ ಅಸಮಾನತೆ ತೊಡೆಯಲು ಮೀಸಲಾತಿಯು ಭರವಸೆಯ ಆಶಾಕಿರಣ: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ಜಾತಿ ತನ್ನ ಪ್ರಭಾವ ಮುಂದುವರೆಸಿದ್ದು ವಿಭಿನ್ನ ಜಾತಿ ಗುಂಪುಗಳ ನಡುವಿನ ಆರ್ಥಿಕ ಅವಕಾಶಗಳನ್ನು ಆವರಿಸಿಕೊಳ್ಳುತ್ತಿದೆ ಎಂದು ಸಿಜೆಐ ಅಭಿಪ್ರಾಯಪಟ್ಟರು.
ಸಿಜೆಐ ಡಿ.ವೈ.ಚಂದ್ರಚೂಡ್
ಸಿಜೆಐ ಡಿ.ವೈ.ಚಂದ್ರಚೂಡ್

ಜಾತಿ ವ್ಯವಸ್ಥೆ ಎಂಬುದು ಚಾರಿತ್ರಿಕ ಅಸಮಾನತೆಗಳಲ್ಲಿ ಮಾತ್ರವಲ್ಲದೆ ಇಂದಿನ ಸಂಕೀರ್ಣ ವಾಸ್ತವಗಳಲ್ಲಿಯೂ ಬೇರೂರಿದ್ದು ಕಾನೂನಿನೊಳಗಿರುವ ಸಂಕೀರ್ಣತೆ ಸಮಾಜದಲ್ಲಿ ಅಂತಹ ವಿಭಜನೆಗಳನ್ನು ಮುಂದುವರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ.

ಏಷಿಯಾ ಮತ್ತು ಪೆಸಿಫಿಕ್‌ ಕಾನೂನು ಸಂಘದ ವತಿಯಿಂದ ಬೆಂಗಳೂರಿನಲ್ಲಿ ನ.24ರಿಂದ 27ರವರೆಗೆ ನಡೆಯುತ್ತಿರುವ 36ನೇ ಲಾಏಷಿಯಾ ಸಮಾವೇಶದ ಎರಡನೇ ದಿನವಾದ ಇಂದು 'ಅಸ್ಮಿತೆ, ವ್ಯಕ್ತಿ ಮತ್ತು ಪ್ರಭುತ್ವ: ಸ್ವಾತಂತ್ರ್ಯದ ಹೊಸ ಮಾರ್ಗಗಳು' ಎಂಬ ವಿಷಯದ ಕುರಿತು ವರ್ಚುವಲ್‌ ವಿಧಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಾತಿ ತನ್ನ ಪ್ರಭಾವ ಮುಂದುವರೆಸಿದ್ದು ವಿಭಿನ್ನ ಜಾತಿ ಗುಂಪುಗಳ ಆರ್ಥಿಕ ಅವಕಾಶಗಳನ್ನು ಆವರಿಸಿಕೊಳ್ಳುತ್ತಿದೆ ಎಂದು ಸಿಜೆಐ ಅಭಿಪ್ರಾಯಪಟ್ಟರು.

ಮೀಸಲಾತಿ ಅಥವಾ ಅಂತಹ ಸಕಾರಾತ್ಮಕ ಕ್ರಮ ಜಾತಿ ಆಧಾರಿತ ಅಸಮಾನತೆಗಳನ್ನು ತೊಡೆದುಹಾಕಲು ಭರವಸೆಯ ದೀಪವಾಗಿ ಉಳಿಯಲಿದೆ ಎಂದು ಅವರು ಒತ್ತಿ ಹೇಳಿದರು.

"ಅಸಮಾನತೆಯನ್ನು ಮುಂದುವರಿಸುವಂತಹ ಕಾನೂನಿನ ಅಂತರ್ಗತ ಸಂಕೀರ್ಣತೆಗಳನ್ನು ನಾವು ಒಪ್ಪಿಕೊಳ್ಳಬೇಕಿದೆ. ನಾವು ನಮ್ಮ ದೃಷ್ಟಿಕೋನಗಳನ್ನು ಹಿಗ್ಗಿಸಿಕೊಳ್ಳಬೇಕಿದೆ. ಜನಪ್ರಿಯ ಸಾರ್ವಭೌಮತ್ವದ ಕಲ್ಪನೆ ಎಂಬುದು ಬಹುತ್ವವನ್ನು ತನ್ನ ತಿರುಳಾಗಿಸಿಕೊಂಡಿರಬೇಕು. ಸಂಕೀರ್ಣ ಜಾತಿ ವ್ಯವಸ್ಥೆಯು ಕೇವಲ ಚಾರಿತ್ರಿಕವಾದಂತಹ ಅಸಮಾನತೆಗಳಲ್ಲಿ ಮಾತ್ರವಲ್ಲದೆ, ಇಂದಿನ ಸಂಕೀರ್ಣ ವಾಸ್ತವಗಳಲ್ಲಿಯೂ ಬೇರೂರಿದೆ. ಸಕಾರಾತ್ಮಕ ಕ್ರಿಯೆಯು (ಮೀಸಲಾತಿ) ಪರಿವರ್ತನಕಾರಿ ಕ್ರಿಯೆಯಾಗಿ ಹೊರಹೊಮ್ಮಲಿದೆ. ಇದು ಹಳೆಯ ಜಾತಿ ಅಸಮಾನತೆಗಳನ್ನು ತೊಡೆದುಹಾಕಲು ಭರವಸೆಯ ದೀಪವಾಗಿ ಕಾರ್ಯನಿರ್ವಹಿಸಲಿದೆ" ಎಂದು ಅವರು ಹೇಳಿದರು.

ವಕೀಲರು ಸ್ವಾತಂತ್ರ್ಯ, ಅಸ್ಮಿತೆ ಮತ್ತು ಅದನ್ನು ಮಿತಿಗೊಳಿಸುವ ಪ್ರಭುತ್ವದ ಪಾತ್ರವನ್ನು ಹೇಗೆ ಎದುರುಗೊಳ್ಳುವ ಪರಿಸ್ಥಿತಿ ಉದ್ಭವಿಸಿದೆ ಎಂಬುದನ್ನು ಸಿಜೆಐ ತಮ್ಮ ಭಾಷಣದಲ್ಲಿ ವಿವರಿಸಿದರು,

ಸ್ವಾತಂತ್ರ್ಯವೆಂದರೆ ವೈಯಕ್ತಿಕ ಕ್ರಿಯೆಗಳು ಮತ್ತು ನಿರ್ಧಾರಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸದಿರುವುದು ಎನ್ನುವ ಐತಿಹಾಸಿಕ ಅರ್ಥೈಸುವಿಕೆಗೆ ಇರುವ ಮಿತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಅವರು ಹೇಳಿದರು.

ಯಾವುದೇ ಜ್ಞಾನ ತಟಸ್ಥ ಅಥವಾ ನಿಸ್ಪಕ್ಷಪಾತದಿಂದ ಕೂಡಿರಲು ಸಾಧ್ಯವಿಲ್ಲ ಎಂದು ಸಿಜೆಐ ಹೇಳಿದ್ದಾರೆ. "ಯಾವುದೇ ಜ್ಞಾನ ಎಂಬುದು ಸೈದ್ಧಾಂತಿಕವಾಗಿ ತಟಸ್ಥವಲ್ಲ ಮತ್ತು ಅಧಿಕಾರದ ಉದ್ದೇಶ ಮೇಲೆ ಅನಿಶ್ಚಿತವಾಗಿ ಇರುವುದಿಲ್ಲ. ಸ್ವಾತಂತ್ರ್ಯದ ನಮ್ಮ ಪರಿಕಲ್ಪನೆಯಲ್ಲಿನ ಪರಿವರ್ತನಶೀಲತೆಯನ್ನು ಗಮನಿಸಬಹುದು," ಎಂಬುದಾಗಿ ಅವರು ವಿವರಿಸಿದರು.

ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ವ್ಯವಸ್ಥಿತ ತಾರತಮ್ಯಗಳನ್ನು ತೆಗೆದುಹಾಕಲು, ಜನರು ವಿವಿಧ ಅಸ್ಮಿತೆಗಳಲ್ಲಿ ಸೀಮಿತಗೊಳ್ಳದಂತೆ ನಾವು ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಭಾರತದಲ್ಲಿ ಅಂಗವಿಕಲರು ಎದುರಿಸುತ್ತಿರುವ ತೊಂದರೆಗಳತ್ತಲೂ ಬೆರಳು ಮಾಡಿದ ಅವರು "ವಿಕಲಚೇತನರು ತಮ್ಮ ಅರ್ಹತೆಗಳ ಕುರಿತಂತೆ ಪ್ರಮಾಣಪತ್ರ ಪಡೆಯಬೇಕೆಂದು ಒತ್ತಾಯಿಸಲಾಗುತ್ತದೆ. ಇದು ಪ್ರಭುತ್ವ ಮಾನದಂಡಗಳನ್ನು ರೂಪಿಸುವ ಸಮಸ್ಯೆಗೆ ಕಾರಣವಾಗಿದ್ದು, ನಮ್ಮ ಒಟ್ಟಾರೆ ಭೌತಿಕ ಮೂಲಸೌಕರ್ಯವನ್ನು ಸರಿಪಡಿಸುವ ಬದಲು ಅನೇಕರು [ಪ್ರವೇಶಗಳು, ಪ್ರಯೋಜನಗಳು / ಯೋಜನೆಗಳನ್ನು] ಅವುಗಳಿಂದ ವಂಚಿತರಾಗುವಂತೆ ಮಾಡಿದೆೆ. ನಾವು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಅವರಿಗೆ ರಕ್ಷಣೆಯ ಅಗತ್ಯವಿದೆ ಎಂಬ ಕಲ್ಪನೆಗೆ ಇದು ಕಾರಣವಾಗಿದೆ" ಎಂದು ಅವರು ಹೇಳಿದರು.

ವ್ಯವಸ್ಥಿತ ಅಡೆತಡೆಗಳನ್ನು ತೆಗೆದುಹಾಕುವುದರಿಂದ ಮಾತ್ರ ಸ್ವಾತಂತ್ರ್ಯದ ಕೊರತೆಯನ್ನು ಕೊನೆಗೊಳಿಸಬಹುದು ಎಂದು ಅವರು ಹೇಳಿದರು.

"ಕನ್ನಡಕಗಳು ವ್ಯಾಪಕವಾಗಿ ಲಭ್ಯವಿರುವುದರಿಂದ ಕನ್ನಡಕ ಧರಿಸುವ ನನ್ನಂತಹ ಜನರನ್ನು ಅಂಗವಿಕಲರೆಂದು ಪರಿಗಣಿಸುವುದಿಲ್ಲ. ಅಂತಹ ಜನ ಜೀವನಾವಕಾಶಗಳಿಂದ ವಂಚಿತರಾಗುವುದಿಲ್ಲ. ವ್ಯವಸ್ಥಿತ ಅಡೆತಡೆಗಳು ಮತ್ತು ಅಸಮಾನತೆಗಳನ್ನು ತೆಗೆದುಹಾಕುವ ಅಂಶವಾಗಿ ಸ್ವಾತಂತ್ರ್ಯವನ್ನು ನೆನಪಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಸ್ವಯಂ ಅಸ್ಮಿತೆಗಳು ತಾರತಮ್ಯಕ್ಕೆ ಕಾರಣವಾಗದ ಸೌಮ್ಯ ವ್ಯತ್ಯಾಸಗಳಾಗಿರಬೇಕು" ಎಂದು ಅವರು ತಿಳಿಸಿದರು.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಮಾತನಾಡಿ "ಇಂದಿನ ಡಿಜಿಟಲ್ ಸಂದರ್ಭವು ವಕೀಲಿಕೆಯ ಆಯಸ್ಸನ್ನು ಮರುವ್ಯಾಖ್ಯಾನಿಸಿದ್ದು ತನ್ನ ಸಾಮರ್ಥ್ಯವನ್ನು ಮರುರಚಿಸಿಕೊಂಡಿದೆ. ಡಿಜಿಟಲ್ ಯುಗದಲ್ಲಿ ಸಮಯ ಮತ್ತು ಸ್ಥಳದ ಕಲ್ಪನೆ ಆಳವಾದ ಬದಲಾವಣೆಗೆ ಒಳಗಾಗಿದೆ. ಹೀಗಾಗಿ ನಾವು ನಿರಂತರ ಕಲಿಕೆಗೆ ಮುಂದಾಗಬೇಕಿದೆ. ಕಾನೂನು ಆಡಳಿತ ಮೂಲಧಾತುವಾಗಿರುವ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ " ಎಂದರು.

[ಸಮಾವೇಶದ ದೃಶ್ಯಗಳನ್ನು ವೀಕ್ಷಿಸಲು ಕೆಳಗೆ ಕ್ಲಿಕ್ಕಿಸಿ]

Kannada Bar & Bench
kannada.barandbench.com