ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಗುರುವಾರ ತೆರವುಗೊಳಿಸಿರುವ ಕರ್ನಾಟಕ ಹೈಕೋರ್ಟ್, ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅನುಮತಿಸಿದೆ.
ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲು ಕಲ್ಪಿಸುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇತ್ತೀಚೆಗೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಡಿ ಜಿ ರಾಘವೇಂದ್ರ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ರಾಜ್ಯ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವು ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಮಧ್ಯಂತರ ವರದಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಕುರಿತು ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಪೀಠವು ಸ್ಪಷ್ಟಪಡಿಸಿದೆ.
ಹೀಗಾಗಿ, ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಡಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 2ಸಿ ಮೀಸಲು ಕಲ್ಪಿಸುವ ಸಂಬಂಧ ಕಳೆದ ಚಳಿಗಾಲದ ಅಧಿವೇಶನದಲ್ಲಿ ಕೈಗೊಂಡಿದ್ದ ನಿರ್ಧಾರಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಸರ್ಕಾರಕ್ಕಿದ್ದ ಅಡ್ಡಿ ನಿವಾರಣೆಯಾದಂತಾಗಿದೆ.
ರಾಜ್ಯ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ ಹಾಗೂ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದ ಆಲಿಸಿದ ಪೀಠವು ಅರ್ಜಿ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಜನವರಿ 12ರಂದು ನೀಡಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿತು.
ಇದಕ್ಕೂ ಮುನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪರ ವಕೀಲರು, ಮಧ್ಯಂತರ ಆದೇಶ ತೆರವುಗೊಳಿಸುವಂತೆ ಪೀಠಕ್ಕೆ ಮನವಿ ಮಾಡಿದರು. 2ಎ ಮೀಸಲಾತಿಗೆ ತೊಂದರೆಯಾಗುವಂತಹ ಯಾವುದೇ ಕೆಲಸವನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ. ಪ್ರವರ್ಗ 2ಎಗೆ ಲಭ್ಯವಿರುವ ಮೀಸಲಾತಿಯನ್ನು ಅಡ್ಡಿಪಡಿಸುವ ಯಾವುದೇ ಉದ್ದೇಶವನ್ನೂ ಸರ್ಕಾರ ಹೊಂದಿಲ್ಲ. ಪ್ರಕರಣದಲ್ಲಿ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರದಿಂದ ಪ್ರವರ್ಗ 2ಎ ಅಡಿಯಲ್ಲಿನ ಮೀಸಲಾತಿಯ ಪ್ರಮಾಣ ಬದಲಾಗುವುದಿಲ್ಲ ಎಂದು ಭರವಸೆ ನೀಡಿ, ಈ ಕುರಿತು ನ್ಯಾಯಾಲಯಕ್ಕೆ ಲಿಖಿತ ಮುಚ್ಚಳಿಕೆ ಸಲ್ಲಿಸಿದರು.
ಅದನ್ನು ಪರಿಗಣಿಸಿದ ಪೀಠವು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನಿರ್ದೇಶಿಸಿ ಜನವರಿ 12ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿತು.
ಪಿಐಎಲ್‌ಗೆ ಆಕ್ಷೇಪಣೆ ಸಲ್ಲಿಸಿದ್ದ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯಿದೆ-1995ರ ಸೆಕ್ಷನ್ 9 ಪ್ರಕಾರ ಯಾವುದಾದರೂ ಒಂದು ಸಮುದಾಯ ತಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲಿಸುವುದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅವಕಾಶವಿದೆ. ಮನವಿ ಮಾಡಿದ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದೆಯೇ ಎಂಬ ಬಗ್ಗೆ ವಿಚಾರಣೆ/ಸಮೀಕ್ಷೆ/ತನಿಖೆ ನಡೆಸಿ ಹಿಂದುಳಿದ ವರ್ಗಗಳ ವರ್ಗೀಕರಣದ ಬಗ್ಗೆ ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಬೇಕಾಗುತ್ತದೆ. ಕಾಯಿದೆಯ ಸೆಕ್ಷನ್ 11ರ ಪ್ರಕಾರ, ಸರ್ಕಾರವು ಆಯೋಗದೊಂದಿಗೆ ಸಮಾಲೋಚಿಸಿ, ಪ್ರತಿ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಅವಕಾಶವಿದ್ದು, ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು.
ಅರ್ಜಿದಾರರ ಆಕ್ಷೇಪ: 2000ನೇ ಇಸವಿಯಲ್ಲಿ ಲಿಂಗಾಯತ ಸಮುದಾಯದ ಕೆಲ ಉಪ ಪಂಗಡಗಳ ಮೀಸಲಾತಿ ಕೋರಿಕೆಯನ್ನು ತಿರಸ್ಕರಿಸಿ ಹಿಂದುಳಿದ ವರ್ಗಗಳ ಆಯೋಗವು ಕೆಲ ಶಿಫಾರಸ್ಸುಗಳನ್ನು ಮಾಡಿತ್ತು. ಆದರೂ, ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿ ಆಧರಿಸಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸಲು ಸರ್ಕಾರ ಮುಂದಾಗುತ್ತಿದೆ. ಆದರೆ, ವೀರಶೈವ/ಲಿಂಗಾಯತ ಸಮುದಾಯದ ಉಪ ಪಂಗಡವನ್ನು ತಾತ್ಕಾಲಿಕ ಪ್ರಕ್ರಿಯೆಯ ಮೂಲಕ ಪ್ರವರ್ಗಕ್ಕೆ 2ಎಗೆ ಸೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅರ್ಜಿಯನ್ನು ಜನವರಿ 12ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ಮಾಡಿತ್ತು.