[ಎಸ್‌ಸಿ/ಎಸ್‌ಟಿ ಉದ್ಯೋಗಿಗಳಿಗೆ ಬಡ್ತಿ] ಸಮರ್ಪಕ ಪ್ರಾತಿನಿಧ್ಯದ ಮಾನದಂಡವನ್ನು ನ್ಯಾಯಾಲಯ ನಿಗದಿಪಡಿಸಲಾಗದು: ಸುಪ್ರೀಂ

ಎಂ ನಾಗರಾಜ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದ 2006ರ ತೀರ್ಪಿನ ಅನ್ವಯ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯದ ಕುರಿತು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ನಿರ್ಧರಣಾತ್ಮಕ ದತ್ತಾಂಶ ಸಂಗ್ರಹಿಸುವುದು ಅವರ ಹೊಣೆಗಾರಿಕೆ ಎಂದ ನ್ಯಾಯಾಲಯ.
Nageswara rao, Sanjiv khanna and BR Gavai

Nageswara rao, Sanjiv khanna and BR Gavai

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ) ಉದ್ಯೋಗಿಗಳಿಗೆ ಸರ್ಕಾರಿ ಸೇವೆಯ ಬಡ್ತಿಯಲ್ಲಿ ಸಮರ್ಪಕ ಪ್ರಾತಿನಿಧ್ಯ ನಿರ್ಧರಿಸಲು ಯಾವುದೇ ಮಾನದಂಡವನ್ನು ರೂಪಿಸಲು ತನಗೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟವಾಗಿ ಹೇಳಿದೆ [ಜರ್ನೈಲ್‌ ಸಿಂಗ್ ವರ್ಸಸ್‌ ಲಚ್ಮಿ ನರೈನ್ ಗುಪ್ತ]. ಅದರ ಹೊಣೆಗಾರಿಕೆ ರಾಜ್ಯ ಸರ್ಕಾರಗಳದ್ದು ಎಂದಿದೆ.

ನಾಗರಾಜ್‌ ತೀರ್ಪಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿ ಸಲ್ಲಿಸಲಾಗಿದ್ದ ಮನವಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಸಂಜೀವ್‌ ಖನ್ನಾ ಮತ್ತು ಬಿ ಆರ್‌ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ಮಾಡಿದೆ.

“ಎಂ ನಾಗರಾಜ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದ 2006ರ ತೀರ್ಪಿನ ಅನ್ವಯ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯದ ಕುರಿತು ನಿರ್ಧರಣಾತ್ಮಕ ದತ್ತಾಂಶ ಸಂಗ್ರಹಿಸುವುದು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಹೊಣೆಗಾರಿಕೆ” ಎಂದು ಪೀಠ ಸ್ಪಷ್ಟಪಡಿಸಿದೆ.

“ಪ್ರಾತಿನಿಧ್ಯದ ಅಸಮರ್ಪಕತೆ ನಿರ್ಧರಿಸಲು ನಾವು ಯಾವುದೇ ಅಳತೆಗೋಲು ರೂಪಿಸಲು ಸಾಧ್ಯವಿಲ್ಲ. ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ನಿರ್ಧರಣಾತ್ಮಕ ದತ್ತಾಂಶವನ್ನು ಸಂಗ್ರಹಿಸುವುದು ಸಂಬಂಧಪಟ್ಟ ರಾಜ್ಯಗಳ ಹೊಣೆಗಾರಿಕೆ. ಎಸ್‌ಸಿ/ಎಸ್‌ಟಿಯ ಪ್ರಾತಿನಿಧ್ಯದ ಅಸಮರ್ಪಕತೆಯನ್ನು ನಿರ್ಧರಿಸಲು ಅಳತೆಗೋಲನ್ನು ನಿರ್ಣಯಿಸಲು ನಾವು ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.

“ಕಾಲಕ್ಕೆ ತಕ್ಕಂತೆ ಪರಿಶೀಲನೆಯ ಬಳಿಕ ಪ್ರಾತಿನಿಧ್ಯದ ಅಸಮರ್ಪಕತೆಯ ಮೌಲ್ಯಮಾಪನದ ಹೊರತಾಗಿ ಪ್ರಮಾಣೀಕರಿಸಬಹುದಾದ ದತ್ತಾಂಶದ ಸಂಗ್ರಹಣೆಯು ಕಡ್ಡಾಯವಾಗಿದೆ” ಎಂದು ಪೀಠ ಹೇಳಿದೆ.

ನಾಗರಾಜ್‌ ಪ್ರಕರಣದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಪದೋನ್ನತಿಯಲ್ಲಿ ಮೀಸಲಾತಿ ಕಲ್ಪಿಸುವುದನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಎತ್ತಿ ಹಿಡಿದಿತ್ತು.

ನಿರ್ಧರಣಾತ್ಮಕ ದತ್ತಾಂಶವನ್ನು ಸಂಗ್ರಹಿಸುವ ವಿಚಾರದಲ್ಲಿ ಬಿ ಕೆ ಪವಿತ್ರ 2 ಪ್ರಕರಣದಲ್ಲಿನ ತೀರ್ಪು ಎಂ ನಾಗರಾಜ್‌ ಪ್ರಕರಣದ ತೀರ್ಪಿನೊಂದಿಗೆ ವಿರೋಧಾಭಾಸ ಹೊಂದಿದೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ಅಲ್ಲದೆ, ನಾಗರಾಜ್‌ ಪ್ರಕರಣದ ತೀರ್ಪು ಪೂರ್ವಾನ್ವಯವಲ್ಲ, ತೀರ್ಪು ಹೊರಬಿದ್ದಂದಿನಿಂದ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿತು. ನಿರ್ಧರಣಾತ್ಮಕ ದತ್ತಾಂಶದ ಸಂಗ್ರಹದ ವೇಳೆ 'ಶ್ರೇಣಿ'ಯನ್ನು ಒಂದು ಗುಂಪಾಗಿ ಪರಿಗಣಿಸಿ ಬಡ್ತಿ ಮೀಸಲಾತಿ ನಿರ್ಧರಿಸಬೇಕೆ ಹೊರತು ಸಂಪೂರ್ಣ ಸೇವಾ ಸಮೂಹವನ್ನು ಪರಿಗಣನೆಗೆ ತೆಗೆದುಕೊಳ್ಳುವಂತಿಲ್ಲ ಎಂದು ತಿಳಿಸಿತು.

ಪದೋನ್ನತಿಯಲ್ಲಿ ಮೀಸಲಾತಿ ಕಲ್ಪಿಸುವಾಗ ಕೆಳಗಿನ ಮೂರು ಷರತ್ತುಗಳನ್ನು ಪೂರೈಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಅವುಗಳೆಂದರೆ:

  • ಮೀಸಲಾತಿ ನೀಡಲು ಉದ್ದೇಶಿಸಿರುವ ವರ್ಗದ ಹಿಂದುಳಿದಿರುವಿಕೆಯನ್ನು ರಾಜ್ಯ ಸರ್ಕಾರ ತೋರಿಸಬೇಕು.

  • ಸೇವೆಯಲ್ಲಿ ಅಂತಹ ವರ್ಗದ ಪ್ರಾತಿನಿಧ್ಯದ ಕೊರೆತೆ ತೋರಿಸಬೇಕು.

  • ಭಾರತದ ಸಂವಿಧಾನದ 335ನೇ ವಿಧಿಯ ಅನುಪಾಲನೆಯ ದೃಷ್ಟಿಯಿಂದ ಆಡಳಿತದ ದಕ್ಷತೆಯ ನಿರ್ವಹಣೆಯೊಂದಿಗೆ ಮೀಸಲಾತಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.

Also Read
ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯಗಳು ಆದೇಶ ನೀಡುವಂತಿಲ್ಲ: ಸುಪ್ರೀಂ ಕೋರ್ಟ್

2018ರಲ್ಲಿ ನಾಗರಾಜ್‌ ಪ್ರಕರಣದ ತೀರ್ಪು ಮರುಪರಿಶೀಲಿಸಲು ಕೋರಲಾಗಿತ್ತು. ಆದರೆ, ನಾಗರಾಜ್‌ ತೀರ್ಪನ್ನು ಎತ್ತಿಹಿಡಿದ ನ್ಯಾಯಾಲಯುವ ಏಳು ನ್ಯಾಯಮೂರ್ತಿಗಳ ಪೀಠದಿಂದ ಅದರ ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿತ್ತು.

ಬಳಿಕ, ಕೆಲವು ರಾಜ್ಯಗಳು ಎಸ್‌ಸಿ/ಎಸ್‌ಟಿ ಮೀಸಲಾತಿ ಜಾರಿಗೆ ತರಲು ಮುಂದಾಗಿದ್ದಾಗ ನಾಗರಾಜ್‌ ಪ್ರಕರಣದಲ್ಲಿ ವಿಧಿಸಲಾಗಿರುವ ಷರತ್ತುಗಳನ್ನು ಪೂರೈಸಲಾಗಿಲ್ಲ ಎಂದು ಅವುಗಳನ್ನು ಹೈಕೋರ್ಟ್‌ಗಳು ರದ್ದುಗೊಳಿಸಿದ್ದವು. ಇದನ್ನು ಪ್ರಶ್ನಿಸಿ ಆ ರಾಜ್ಯಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದವು.

ನಾಗರಾಜ್‌ ಪ್ರಕರಣದ ತೀರ್ಪನ್ನು ಮರುಪರಿಶೀಲಿಸುವುದಿಲ್ಲ. ಆದರೆ, ಸದರಿ ಪ್ರಕರಣದಲ್ಲಿ ವಿಧಿಸಲಾಗಿರುವ ಷರತ್ತುಗಳಿಗೆ ಸ್ಪಷ್ಟನೆ ನೀಡಲಾಗುವುದು ಎಂದು ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು.

Related Stories

No stories found.
Kannada Bar & Bench
kannada.barandbench.com