ಕೊಡವರಿಗೆ ಮೀಸಲಾತಿ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್, ಆಯೋಗದ ಶಿಫಾರಸು ಒಪ್ಪಲು ನಿರ್ದೇಶನ

ನಮ್ಮದು ಕಲ್ಯಾಣ ರಾಜ್ಯ, ಹಿಂದಿನ ಈಸ್ಟ್ ಇಂಡಿಯಾ ಕಂಪೆನಿಯಲ್ಲ. ಕಲ್ಯಾಣ ರಾಜ್ಯ ನಾಗರಿಕರಿಗೆ ಸೂಕ್ತವಾದಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.
Karnataka High Court and Kodavas

Karnataka High Court and Kodavas

ಕೊಡವರಿಗೆ ಮೀಸಲಾತಿಯ ಕೆಲ ಪ್ರಯೋಜನಗಳನ್ನು ಒದಗಿಸಬೇಕು ಎಂದು ಹೇಳಿದ್ದ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸನ್ನು ಅಂಗೀಕರಿಸುವಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ [ಕೊಡವ ನ್ಯಾಷನಲ್‌ ಕೌನ್ಸಿಲ್‌ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ನಡುವಣ ಪ್ರಕರಣ].

ಆಯೋಗದ ಸಲಹೆ ಗಂಗಾಜಲದಷ್ಟು ಸ್ಪಟಿಕಶುಭ್ರವಾಗಿದೆ. ಅರ್ಜಿ ಸಲ್ಲಿಸಿರುವ ಕೊಡವ ನ್ಯಾಷನಲ್‌ ಕೌನ್ಸಿಲ್‌ (ಸಿಎನ್‌ಸಿ) ಸಂಸ್ಥೆಯ ಅಹವಾಲನ್ನು ಕೂಲಂಕಷ ಪರಿಶೀಲನೆ ಬಳಿಕ, ಎಲ್ಲ ಸ್ತರಗಳಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈ ಶಿಫಾರಸು ಮಾಡಲಾಗಿದೆ. ಸಕ್ಷಮ ಪ್ರಾಧಿಕಾರ ಅಂಗೀಕರಿಸಿಲ್ಲ ಎಂಬ ಒಂದೇ ಕಾರಣಕ್ಕೆ ಆಯೋಗದ ಸಲಹೆ ಸ್ವೀಕರಿಸುವುದನ್ನು ಸರ್ಕಾರ ತಳ್ಳಿಹಾಕುವಂತಿಲ್ಲ ಎಂದು ನ್ಯಾ. ಕೃಷ್ಣ ಎಸ್‌ ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

ಸರ್ಕಾರ ಪ್ರಕಟಿಸಿದ ಒಬಿಸಿ ಪಟ್ಟಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ 'ಕೊಡಗರು' ಎಂಬ ಪದ ಬಳಸಲಾಗಿದೆ. ಇದರ ಬದಲಿಗೆ ಕನ್ನಡದಲ್ಲಿ ಕೊಡವ, ಕೊಡವರು ಎಂದೂ ಇಂಗ್ಲಿಷ್‌ನಲ್ಲಿ Codava', 'Codavaru' ಎಂದು ಬಳಸಬೇಕು ಎಂದು ಆಯೋಗ 2010 ರಲ್ಲಿ ಶಿಫಾರಸು ಮಾಡಿತ್ತು. ಸಿದ್ದಲಿಂಗಯ್ಯ ಸಮಿತಿ ಮತ್ತು ಡಾ. ಸಿ ಎಸ್‌ ದ್ವಾರಕನಾಥ್‌ ಸಮಿತಿ 2005 ಮತ್ತು 2010ರಲ್ಲಿ ಕೂಲಂಕಷ ಅಧ್ಯಯನದ ಬಳಿಕ ಈ ಶಿಫಾರಸು ಮಾಡಿದ್ದವು. ಆದರೆ 14.10.2015ರಲ್ಲಿ ಸರ್ಕಾರ ಹೊರಡಿಸಿದ ಆದೇಶ ಈ ಶಿಫಾರಸುಗಳನ್ನು ಕಡೆಗಣಿಸಿದೆ ಎಂದು ದೂರಿ ಸಿಎನ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. 18.08.2021ರಂದು ಮಧ್ಯಂತರ ಆದೇಶ ನೀಡಿದ್ದ ನ್ಯಾಯಾಲಯದ ಸಮನ್ವಯ ಪೀಠ ಶಿಫಾರಸುಗಳನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು. ಆದರೆ ಇದಕ್ಕೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತು.

ವಾದಗಳನ್ನು ಆಲಿಸಿರುವ ನ್ಯಾಯಾಲಯ “ವರ್ಷಗಳೇ ಉರುಳಿದರೂ ಒಂದು ಎಲೆ ಕೂಡ ಅಲುಗಾಡಿಲ್ಲ. ಸಾಂವಿಧಾನಿಕ ಅನಿವಾರ್ಯತೆ ಇಲ್ಲದಿದ್ದರೂ, ಮನುಷ್ಯನ ಬದುಕಿನ ಕ್ಷಣಿಕತೆಯ ಕಾರಣಕ್ಕಾದರೂ ರಿಯಾಯ್ತಿ ನೀಡುವ ಸಲುವಾಗಿ ಸರ್ಕಾರದ ಅಂಗಗಳು ತ್ವರಿತಗೊಳ್ಳಬೇಕು ಎಂದು ಕುಟುಕಿದೆ.

Also Read
ಕೊಡವ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ: ಬುಡಕಟ್ಟು ಅಧ್ಯಯನ ನಡೆಸಿಲ್ಲ ಎಂದಾದರೆ ಮರು ಸಮೀಕ್ಷೆ ಮಾಡಬೇಕು – ಹೈಕೋರ್ಟ್‌

ಸರ್ಕಾರ ಸಲಹೆ ಸ್ವೀಕರಿಸದೆ ಇರಬಹುದು. ಆದರೆ ಹಾಗೆ ಶಿಫಾರಸನ್ನು ಸ್ವೀಕರಿಸದೆ ಇರುವುದಕ್ಕಾಗಿ ಸಮರ್ಥ ಮತ್ತು ಬಲವಾದ ಕಾರಣಗಳನ್ನು ಅದು ನೀಡಬೇಕಾಗುತ್ತದೆ. ಇದಕ್ಕೆ ವಿರುದ್ಧವಾದ ವಾದವನ್ನು ಪುರಸ್ಕರಿಸಲು ಸಾಧ್ಯವಿಲ್ಲ. ನಮ್ಮದು ಕಲ್ಯಾಣ ರಾಜ್ಯ, ಹಿಂದಿನ ಈಸ್ಟ್‌ ಇಂಡಿಯಾ ಕಂಪೆನಿಯಲ್ಲ. ಕಲ್ಯಾಣ ರಾಜ್ಯ ನಾಗರಿಕರಿಗೆ ಸೂಕ್ತವಾದಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದಿದೆ.

ಅರ್ಜಿದಾರರು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂಬ ಸರ್ಕಾರದ ವಾದಕ್ಕೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ವರ್ಷಗಳ ಕಾಲ ವಿಚಾರಣೆ ನಡೆದಿದ್ದು ಈಗ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಕೋರುವ ಸರ್ಕಾರದ ನಡೆ ವಿಶ್ವಾಸ ಮೂಡಿಸುವುದಿಲ್ಲ ಎಂದಿದೆ.

ಅರ್ಜಿದಾರರ ಪರವಾಗಿ ವಕೀಲ ಬಿ ಎ ಬೆಳ್ಳಿಯಪ್ಪ ವಾದ ಮಂಡಿಸಿದ್ದರು. ಪ್ರತಿವಾದಿಗಳನ್ನು ವಕೀಲ ಬಿ ವಿ ಕೃಷ್ಣ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com