ವಯೋಮಿತಿ ಸಡಿಲಿಕೆ ಹಾಗೂ ಶುಲ್ಕದಲ್ಲಿ ವಿನಾಯಿತಿ ಇದ್ದರೂ ಸಹ ಮೀಸಲಾತಿ ವರ್ಗದ ಅಭ್ಯರ್ಥಿಗಳನ್ನು ಮೀಸಲಾತಿ ರಹಿತ ವರ್ಗ ಅಥವಾ ಸಾಮಾನ್ಯ ವರ್ಗಕ್ಕೆ ಪರಿಗಣಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ [ಸಾಹಿಮ್ ಹೊಸೈನ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].
ವಯೋಮಿತಿ ಸಡಿಲಿಕೆ ಸವಲತ್ತು ಪಡೆದಿರುವ ಮೀಸಲಾತಿ ವರ್ಗದ ಅಭ್ಯರ್ಥಿಗಳನ್ನು ಮೀಸಲಾತಿ ರಹಿತ ವರ್ಗಕ್ಕೆ ಸೇರಿಸಲಾಗದು ಎಂದು ತೀರ್ಪು ನೀಡಿದ್ದ ಪಶ್ಚಿಮ ಬಂಗಾಳದ ಆಡಳಿತ ನ್ಯಾಯಮಂಡಳಿಯ ಆದೇಶವನ್ನು ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಎಂ ಡಿ ಶಬ್ಬರ್ ರಶೀದಿ ಅವರಿದ್ದ ಪೀಠ ರದ್ದುಗೊಳಿಸಿದೆ.
ರಾಜ್ಯ ಸರ್ಕಾರದ ಆಹಾರ ಮತ್ತು ಸರಬರಾಜು ಇಲಾಖೆಯ ಸಬ್-ಇನ್ಸ್‌ಪೆಕ್ಟರ್ ಹುದ್ದೆಗೆ 2018ರಲ್ಲಿ ಪ. ಬಂಗಾಳ ಲೋಕಸೇವಾ ಆಯೋಗ ನಡೆಸಿದ್ದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ಆದೇಶ ಹೊರಡಿಸಿತ್ತು.
ಮೀಸಲಾತಿ ಪಡೆದ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಮತ್ತು ಶುಲ್ಕದಲ್ಲಿ ಸಡಿಲಿಕೆ ಮಾಡಲಾಗಿದೆ ಎಂದರೆ ಅದು ಆ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಸವಲತ್ತು ನೀಡಿದೆ ಎಂದರ್ಥವಲ್ಲ. ಹೀಗಾಗಿ ಅರ್ಹತೆಗೆ ಅನುಗುಣವಾಗಿ ಅವರನ್ನು ಮೀಸಲಾತಿ ರಹಿತ ವರ್ಗದಲ್ಲಿ ಪರಿಗಣಿಸಲು ಸರ್ಕಾರದ ಕಡೆಯಿಂದ ನಿಷೇಧ ಇಲ್ಲದಿರುವುದಾಗ ಅವರನ್ನು ಅನರ್ಹಗೊಳಿಸಲಾಗದು ಎಂಬುದಾಗಿ ನ್ಯಾಯಾಲಯ ನುಡಿದಿದೆ.
ಮೀಸಲಾತಿ ರಹಿತ ಮತ್ತು ಮೀಸಲಾತಿ ಸವಲತ್ತು ಪಡೆದ ವರ್ಗಗಳಿಗೆ ಹೊಸದಾಗಿ ಪಟ್ಟಿ ತಯಾರಿಸುವಂತೆ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಪಾಲಿಸಬೇಕಾದ ವಿಧಾನವನ್ನು ಲೋಕಸೇವಾ ಆಯೋಗ ಪಾಲಿಸಿದೆ ಎಂದು ತಿಳಿಸಿ ಆಯೋಗದ ನೇಮಕಾತಿ ಪ್ರಕ್ರಿಯೆಯನ್ನು ಎತ್ತಿಹಿಡಿಯಿತು.