ಭೌತಿಕ ಕಲಾಪ ಪುನಾರಂಭ: ಮತ್ತೊಂದು ಸುಳಿವು ನೀಡಿದ ಸುಪ್ರೀಂ ಕೋರ್ಟ್‌

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಭೌತಿಕ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಹಿಂದೆ ನ್ಯಾಯಾಲಯ ನಿರ್ದೇಶನ ನೀಡಿದ್ದರ ಬಗ್ಗೆ ಗಮನಸೆಳೆದರು. ಈ ವೇಳೆ ಭೌತಿಕ ಕಲಾಪದ ವಿಚಾರ ಪ್ರಸ್ತಾಪವಾಗಿತ್ತು.
ಭೌತಿಕ ಕಲಾಪ ಪುನಾರಂಭ: ಮತ್ತೊಂದು ಸುಳಿವು ನೀಡಿದ ಸುಪ್ರೀಂ ಕೋರ್ಟ್‌
Supreme Court

ಶೀಘ್ರದಲ್ಲೇ ಭೌತಿಕ ಕಲಾಪ ನಡೆಸುವುದಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಪರಿಶೀಲಿಸುವ ಸಾಧ್ಯತೆಯ ಸ್ಪಷ್ಟ ಸುಳಿವುಗಳನ್ನು ಸುಪ್ರೀಂ ಕೋರ್ಟ್‌ ನೀಡಿದ್ದು, “ಭೌತಿಕ ಕಲಾಪ ಅತಿಶೀಘ್ರದಲ್ಲೇ ನಡೆಯಲಿದೆ” ಎಂದು ಪೀಠ ಹೇಳಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೀಠದ ಮುಂದೆ ಹಾಜರಾದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು ಭೌತಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು ಎಂದು ಉಲ್ಲೇಖಿಸಿದಾಗ ಮೇಲಿನ ವಿಚಾರ ಪ್ರಸ್ತಾಪವಾಗಿದೆ.

“ಸದರಿ ಪ್ರಕರಣವನ್ನು ಭೌತಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ನಿರ್ದೇಶಿಸಲಾಗಿದೆ. ಅದು ಸದ್ಯದಲ್ಲೇ ನಡೆಯುವ ಸಾಧ್ಯತೆಯಿಲ್ಲ” ಎಂದು ರೋಹಟ್ಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, “ಅದಕ್ಕೆ (ಭೌತಿಕ ಕಲಾಪಕ್ಕೆ) ಹೆಚ್ಚಿನ ಸಮಯವೇನು ಹಿಡಿಯುವುದಿಲ್ಲ ರೋಹಟ್ಗಿ ಅವರೇ. ಅದು ಶೀಘ್ರದಲ್ಲೇ ಆಗಲಿದೆ” ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು.

ಭೌತಿಕ ವಿಚಾರಣೆಗಳನ್ನು ನಡೆಸುವ ಕುರಿತು ಪರಿಸ್ಥಿತಿ ಅವಲೋಕನವನ್ನು ಸುಪ್ರೀಂ ಕೋರ್ಟ್‌ ನಡೆಸುವ ಸಾಧ್ಯತೆ ಇದೆ ಎಂಬ ಸುಳಿವನ್ನು ಜನವರಿ 20ರಂದು ಮತ್ತೊಂದು ಪೀಠವೂ ನೀಡಿತ್ತು.

ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠವು ಮಹಾರಾಷ್ಟ್ರ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ (ಎಸ್‌ಇಬಿಸಿ) ಕಾಯಿದೆ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸುವಾಗ, “ಜನವರಿ 25ರಿಂದ ವಿಚಾರಣೆ (ಮರಾಠಾ ಮೀಸಲಾತಿ ಪ್ರಕರಣ) ಆರಂಭಿಸುವ ಇಚ್ಛೆಯನ್ನು ನಾವು ಹೊಂದಿಲ್ಲ. ಎರಡು ವಾರಗಳ ಬಳಿಕ ನಿರ್ದೇಶನಗಳನ್ನು ನೀಡಲು ನಾವು ಪ್ರಕರಣವನ್ನು ಬಾಕಿ ಉಳಿಸಿಕೊಳ್ಳುತ್ತೇವೆ. ಈ ವೇಳೆಗೆ ನಮಗೆ ಯಾವಾಗ ಭೌತಿಕ ವಿಚಾರಣೆ ಆರಂಭಿಸುತ್ತೇವೆ ಎಂಬುದು ತಿಳಿದಿರುತ್ತದೆ. ಆಗ ನಾವು ದಿನಾಂಕ ನಿಗದಿಗೊಳಿಸಬಹುದು (ಅಂತಿಮ ವಿಚಾರಣೆಗೆ),” ಎಂದು ಹೇಳಿತ್ತು.

ಸದರಿ ಪ್ರಕರಣವನ್ನು ಭೌತಿಕವಾಗಿ ನಡೆಸುವಂತೆ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ರೋಹಟ್ಗಿ ಅವರು ನ್ಯಾಯಾಲಯಕ್ಕೆ ಮೊರೆ ಇಟ್ಟಾಗ ಪೀಠವು ಮೇಲಿನಂತೆ ಹೇಳಿದೆ. ಸಾಮಾನ್ಯ ರೀತಿಯಲ್ಲಿ ಚಟುವಟಿಕೆ ನಡೆಸುವ ಇರಾದೆಯನ್ನು ಸುಪ್ರೀಂ ಕೋರ್ಟ್‌ ಹೊಂದಿದೆ. ಆದರೆ, ವೈದ್ಯಕೀಯ ತಜ್ಞರ ಅಭಿಪ್ರಾಯ ಪಡೆಯದೇ ನಿರ್ಧಾರ ಕೈಗೊಳ್ಳಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅಂದೇ ಹೇಳಿದ್ದರು. ದೆಹಲಿ ಹೈಕೋರ್ಟ್‌ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಭೌತಿಕ ಕಲಾಪ ಆರಂಭಿಸುವ ಜನವರಿ 14ರ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಬೊಬ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಭೌತಿಕ ವಿಚಾರಣೆಯ ಕುರಿತಾದ ವಿಚಾರವನ್ನು ಹಿರಿಯ ವಕೀಲ ವಿಕಾಸ್‌ ಸಿಂಗ್‌ ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಜೆಐ ಬೊಬ್ಡೆ ಅವರು “ಹಿಂದಿನಂತೆ ಚಟುವಟಿಕೆಗಳಿಗೆ ಮರಳುವುದು ನಮಗೂ ಅಗತ್ಯವಿದೆ. ಆದರೆ, ವೈದ್ಯಕೀಯ ಕ್ಷೇತ್ರದ ತಜ್ಞರ ಅಭಿಪ್ರಾಯ ಪಡೆಯದೇ ಹಾಗೆ ಮಾಡಲಾಗದು,” ಎಂದಿದ್ದರು.

Also Read
ಭೌತಿಕ ವಿಚಾರಣೆಯಿಂದ ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ ಇಟ್ಟಂತಾಗುತ್ತದೆ: ಮುಂಬೈ ವಕೀಲರು

ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್‌ 23ರಿಂದ ವಿಡಿಯೋ ಕಾನ್ಸರೆನ್ಸ್‌ ಮೂಲಕ ಸರ್ವೋಚ್ಚ ನ್ಯಾಯಾಲಯ ಕಾರ್ಯಾಚರಣೆ ನಡೆಸುತ್ತಿದೆ. ನ್ಯಾಯಾಲಯಕ್ಕೆ ವಕೀಲರು ಮತ್ತು ಕಕ್ಷಿದಾರರ ಪ್ರವೇಶ ನಿಷೇಧಿಸಿ ಮಾರ್ಚ್‌ 23ರಂದು ಸುತ್ತೋಲೆ ಹೊರಡಿಸಿದ್ದ ಸುಪ್ರೀಂ ಕೋರ್ಟ್‌ ತುರ್ತು ಪ್ರಕರಣಗಳನ್ನು ವಿಡಿಯೋ ಕಾನ್ಸರೆನ್ಸ್‌ ಮೂಲಕ ನಡೆಸಲಾಗುವುದು ಎಂದಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಭೌತಿಕ ವಿಚಾರಣೆ ಪುನಾರಂಭಿಸುವ ವಿಫಲ ಯತ್ನವನ್ನು ನ್ಯಾಯಾಲಯ ಮಾಡಿತ್ತು.

ನ್ಯಾಯಾಲಯದ ಕೊಠಡಿಗಳನ್ನು ಸೂಕ್ತ ಮಾರ್ಪಾಟು ಮಾಡುವ ಮೂಲಕ, ಸೀಮಿತ ವ್ಯಾಪ್ತಿಯಲ್ಲಿ ಭೌತಿಕ ವಿಚಾರಣೆ ನಡೆಸಲು ಮೂಲಸೌಕರ್ಯವನ್ನು ನ್ಯಾಯಾಲಯ ಕಲ್ಪಿಸಿತ್ತು. ಆದರೆ, ಅದಕ್ಕೆ ವಕೀಲರ ಪರಿಷತ್‌ನಿಂದ ಸೂಕ್ತ ಸ್ಪಂದನೆ ದೊರೆತಿರಲಿಲ್ಲ. ಬಾಂಬೆ ಮತ್ತು ದೆಹಲಿ ಹೈಕೋರ್ಟ್‌ ಸೇರಿದಂತೆ ಹಲವು ಹೈಕೋರ್ಟ್‌ಗಳಲ್ಲಿ ಭೌತಿಕ ವಿಚಾರಣೆ ಪುನಾರಂಭ ಮಾಡಲಾಗಿದೆ.

Related Stories

No stories found.