ಬಿಷಪ್‌ಗಳ ನಿವೃತ್ತಿ ವಯಸ್ಸು 67ರಿಂದ 70ಕ್ಕೆ ಏರಿಕೆ: ಕರ್ನಾಟಕ ಧರ್ಮಪ್ರಾಂತ್ಯದಿಂದ ಆದೇಶ ಉಲ್ಲಂಘನೆ ಎಂದ ಹೈಕೋರ್ಟ್

ಚರ್ಚ್‌ ಆಫ್‌ ಸೌತ್‌ ಇಂಡಿಯಾ (ಸಿಎಸ್‌ಐ) ಸಂವಿಧಾನದ ಐದನೇ ಅಧ್ಯಾಯದ ಕಲಂ 12(ಎ)ಗೆ ತಿದ್ದುಪಡಿ ಮಾಡಿ, ಬಿಷಪ್‌ಗಳ ನಿವೃತ್ತಿ ವಯಸ್ಸನ್ನು 67ರಿಂದ 70ಕ್ಕೆ ಏರಿಕೆ ಮಾಡಲು ಸಿಎಸ್‌ಐ ಕಾರ್ಯದರ್ಶಿಯು 2022ರ ಆ.18ರಂದು ಸುತ್ತೋಲೆ ಹೊರಡಿಸಿದ್ದರು.
Church
ChurchImage for representative purpose

ಪ್ರಾಟೆಸ್ಟೆಂಟ್‌ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದ ಬಿಷಪ್‌ಗಳ ನಿವೃತ್ತಿ ವಯಸ್ಸನ್ನು 67ರಿಂದ 70ಕ್ಕೆ ಹೆಚ್ಚಿಸುವ ಸೌತ್‌ ಇಂಡಿಯಾ ಚರ್ಚ್‌ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ನಿಲುವಳಿಗೆ ಒಪ್ಪಿಗೆ ನೀಡುವ ಮೂಲಕ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯವು ಧಿಕ್ಕರಿಸಿದೆ. ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ಆದೇಶ ಮಾಡಿದೆ [ಜೆ ಸಿ ಸಂಪತ್‌ ಕುಮಾರ್‌ ವರ್ಸಸ್‌ ಚರ್ಚ್‌ ಆಫ್‌ ಸೌತ್‌ ಇಂಡಿಯಾ].

ಬಿಷಪ್‌ಗಳ ಅಧಿಕಾರ ಹೆಚ್ಚಿಸುವ ನಿಲುವಳಿಗೆ ಒಪ್ಪಿಗೆ ನೀಡಲು ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯವು 2022ರ ಸೆಪ್ಟೆಂಬರ್‌ 12ರಂದು ನಡೆಸಲು ಉದ್ದೇಶಿಸಿದ್ದ ಧರ್ಮಪ್ರಾಂತ್ಯ ಒಕ್ಕೂಟಗಳ ವಿಶೇಷ ಸಭೆಯ ವಿರುದ್ಧ ಮಧ್ಯಂತರ ಪ್ರತಿಬಂಧಕಾದೇಶ ಮಾಡಲು ನಿರಾಕರಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ಮನೋರಾಯನ ಪಾಳ್ಯದ 71 ವರ್ಷದ ಜೆ ಸಿ ಸಂಪತ್‌ ಕುಮಾರ್‌ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು (ಎಂಎಫ್‌ಎ) ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

2022ರ ಸೆಪ್ಟೆಂಬರ್‌ 12ರಂದು ಧರ್ಮಪ್ರಾಂತ್ಯ ಒಕ್ಕೂಟಗಳ ವಿಶೇಷ ಸಭೆ ನಡೆಸದಂತೆ ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯಕ್ಕೆ ನಿರ್ಬಂಧಿಸಿ, ಸಂಪತ್‌ ಕುಮಾರ್‌ ಅವರು ಮೂಲ ದಾವೆಯ ಭಾಗವಾಗಿ ಸಲ್ಲಿಸಿದ್ದ ಎರಡನೇ ಮಧ್ಯಂತರ ಅರ್ಜಿಯನ್ನು ಪರಿಗಣಿಸಿ ವಿಚಾರಣಾಧೀನ ನ್ಯಾಯಾಲಯವು 2022ರ ಸೆಪ್ಟೆಂಬರ್‌ 9ರಂದು ಮಧ್ಯಂತರ ಪ್ರತಿಬಂಧಕಾದೇಶ ಮಾಡಿತ್ತು. ಸದರಿ ವಿಚಾರದ ಕುರಿತಾದ ವಿಚಾರಣೆಯನ್ನು ಎರಡು ಬಾರಿ ವಿಚಾರಣೆ ಮುಂದೂಡಿದ್ದ ವಿಚಾರಣಾಧೀನ ನ್ಯಾಯಾಲಯವು ಮೂರು (ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯ) ಮತ್ತು ಐದನೇ (ಚರ್ಚ್‌ ಆಫ್‌ ಸೌತ್‌ ಇಂಡಿಯಾ ಕಾರ್ಯದರ್ಶಿ) ಪ್ರತಿವಾದಿಗಳ ವಾದವನ್ನು ಆಲಿಸಿ, 2022ರ ಸೆಪ್ಟೆಂಬರ್‌ 9ರಂದು ಮಾಡಿದ್ದ ಆಕ್ಷೇಪಿತ ಮಧ್ಯಂತರ ಪ್ರತಿಬಂಧಕಾದೇಶವನ್ನು 2023ರ ಜನವರಿ 3ರಂದು ವಜಾ ಮಾಡಿತ್ತು. ಇದನ್ನು ಹೈಕೋರ್ಟ್‌ ಬದಿಗೆ ಸರಿಸಿದೆ.

“ಬಿಷಪ್‌ಗಳನ್ನು ಒಳಗೊಂಡ ಧರ್ಮಸಭೆಯು (ಸಿನಾಡ್‌) ಚರ್ಚ್‌ ಆಫ್‌ ಸೌತ್‌ ಇಂಡಿಯಾ ಸಂವಿಧಾನದ ಐದನೇ ಅಧ್ಯಾಯದ ಕಲಂ 12 (ಎ)ಗೆ ತಿದ್ದುಪಡಿ ಮಾಡಿ, ಬಿಷಪ್‌ಗಳ ನಿವೃತ್ತಿಯ ವಯಸ್ಸನ್ನು 67ರಿಂದ 70ಕ್ಕೆ ಏರಿಕೆ ಮಾಡುವುದರ ಸಂಬಂಧ ಸ್ವಾಯತ್ತ ಸಂಸ್ಥೆಯಾದ ಚರ್ಚ್‌ ಆಫ್‌ ಸೌತ್‌ ಇಂಡಿಯಾದ ಕಾರ್ಯದರ್ಶಿಯು 2022ರ ಆಗಸ್ಟ್‌ 18ರಂದು ಎಲ್ಲಾ ಧರ್ಮಪ್ರಾಂತ್ಯಗಳ ಒಕ್ಕೂಟಗಳಿಗೆ ಸುತ್ತೋಲೆ ಹೊರಡಿಸಿದ್ದರು. ಈ ನಿಲುವಳಿಗೆ ಅನುಮೋದನೆ ನೀಡುವ ಸಂಬಂಧ ಮೂಲ ದಾವೆ ಇತ್ಯರ್ಥವಾಗುವವರೆಗೆ ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಒಂದೊಮ್ಮೆ 2022ರ ಡಿಸೆಂಬರ್‌ 21ರಂದು ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯದಲ್ಲಿ ಯಾವುದಾದರೂ ನಿರ್ಣಯ ಕೈಗೊಂಡಿದ್ದರೆ ಅದಕ್ಕೆ ಯಾವುದೇ ಮಾನ್ಯತೆ ಇಲ್ಲ. ಅದನ್ನು ನಗಣ್ಯಗೊಳಿಸಿ, ಯಥಾಸ್ಥಿತಿ ಕಾಪಾಡಿಕೊಳ್ಳಬೇಕು” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

“ವಿಚಾರಣಾಧೀನ ನ್ಯಾಯಾಲಯದಲ್ಲಿ ಫಿರ್ಯಾದಿಯು ಮೇಲ್ನೋಟಕ್ಕೆ ಪ್ರಕರಣ ಸಾಬೀತುಪಡಿಸಿದ್ದು, ಅನುಕೂಲತೆಯ ಸಮತೋಲನವು ಫಿರ್ಯಾದಿಯ ಪರವಾಗಿದೆ. ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯವು ಉದ್ದೇಶಿತ ನಿರ್ಣಯ ಅನುಮೋದಿಸಿದರೆ ಫಿರ್ಯಾದಿಗೆ ಭಾರಿ ಸಮಸ್ಯೆಯಾಗಲಿದೆ. ಹೀಗಾಗಿ, ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯದ ವಿರುದ್ಧ ಫಿರ್ಯಾದಿಯು ಎರಡನೇ ಮಧ್ಯಂತರ ಅರ್ಜಿಯಲ್ಲಿ ಕೋರಿರುವಂತೆ ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆಯಲು ಅರ್ಹರಾಗಿದ್ದಾರೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

“2022ರ ಡಿಸೆಂಬರ್‌ 21ರಂದು ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯವು ವಿಚಾರಣಾಧೀನ ನ್ಯಾಯಾಲಯದ ಮಧ್ಯಂತರ ಆದೇಶಕ್ಕೆ ವಿರುದ್ಧವಾಗಿ ನಿರ್ಧಾರ ಕೈಗೊಂಡಿದ್ದು, ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲವಾಗಿದೆ. ಅಲ್ಲದೇ, ಯಥಾಸ್ಥಿತಿ ಕಾಯ್ದುಕೊಳ್ಳಬೇಕಿದೆ. ವಿಚಾರಣಾಧೀನ ನ್ಯಾಯಾಲಯವು ಆಕ್ಷೇಪಿತ ಆದೇಶವನ್ನು ವಜಾ ಮಾಡುವಾಗ ಅರ್ಜಿ ವಿಚಾರಣೆ ನಡೆಸಲು ವ್ಯಾಪ್ತಿ ಹೊಂದಿಲ್ಲ ಎಂದು ಹೇಳಿದೆ. ಆದರೆ, ಅರ್ಹತೆಯ ಆಧಾರದಲ್ಲಿ ಪಕ್ಷಕಾರರ ವಾದ ಆಲಿಸಿ, ಎರಡನೇ ಮಧ್ಯಂತರ ಅರ್ಜಿ ವಜಾ ಮಾಡಿದೆ. ಸೂಕ್ತ ನ್ಯಾಯಾಲಯದ ಮುಂದೆ ದಾವೆ ಕೊಂಡೊಯ್ಯಲು ಅದನ್ನು ಮರಳಿಸಿಲ್ಲ. ಮೂಲ ದಾವೆಯು ಇನ್ನೂ ವಿಚಾರಣಾಧೀನ ನ್ಯಾಯಾಲಯದಲ್ಲಿಯೇ ಬಾಕಿ ಉಳಿದಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

“ಚರ್ಚ್‌ ಆಫ್‌ ಸೌತ್‌ ಇಂಡಿಯಾ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರವನ್ನು ಅತ್ಯುನ್ನತ ಪ್ರಾಧಿಕಾರವಾದ ಧರ್ಮಸಭೆ (ಸಿನಾಡ್‌) ಹೊಂದಿದೆ ಎಂಬುದು ನಿರ್ವಿವಾದ. ಆದರೆ, ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರವು ಸಂಪೂರ್ಣವಾಗಿ ಪ್ರಸ್ತಾವಿತ ತಿದ್ದುಪಡಿಯ ಸಿಂಧುತ್ವಕ್ಕಿಂತ ಭಿನ್ನವಾಗಿದೆ. ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯದ ತೀರ್ಮಾನವು ಧರ್ಮಸಭೆಯ ನಿರ್ಣಯಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ ಎಂದು ವಿಚಾರಣಾಧೀನ ನ್ಯಾಯಾಲಯ ಹೇಳಿರುವುದು ಸರಿಯಲ್ಲ. ಏಕೆಂದರೆ, ಧರ್ಮಸಭೆಯಲ್ಲಿ ಕೈಗೊಂಡ ತಿದ್ದುಪಡಿ ನಿರ್ಣಯವನ್ನು ಮೂರನೇ ಎರಡು ಭಾಗದಷ್ಟು ಧರ್ಮಪ್ರಾಂತ್ಯಗಳು ಅನುಮೋದಿಸಬೇಕು. ಇದರಲ್ಲಿ ಕರ್ನಾಟಕ ಕೇಂದ್ರ ಧರ್ಮಪ್ರಾಂತ್ಯವೂ ಒಂದಾಗಿದೆ. ಎಷ್ಟು ಧರ್ಮಪ್ರಾಂತ್ಯಗಳು ಪರ ಮತ್ತು ವಿರುದ್ಧವಾಗಿವೆ ಎಂದು ಫಿರ್ಯಾದಿ ಹೇಳಿಲ್ಲ ಎಂದು ವಿಚಾರಾಣಾಧೀನ ನ್ಯಾಯಾಲಯ ಹೇಳಿರುವುದು ಸರಿಯಲ್ಲ. ಏಕೆಂದರೆ, ಫಿರ್ಯಾದಿಯ ಪರ ಅಥವಾ ವಿರುದ್ಧ ಆದೇಶ ಮಾಡಲು ಎಷ್ಟು ಸಂಖ್ಯೆ ಇದೆ ಎಂಬುದು ವಿಚಾರಣಾಧೀನ ನ್ಯಾಯಾಲಯಕ್ಕೆ ಬೇಡವಾದ ವಿಚಾರವಾಗಿದೆ. ಹೀಗಾಗಿ, ಎರಡನೇ ಮಧ್ಯಂತರ ಅರ್ಜಿಯನ್ನು ವಜಾ ಮಾಡಿ ವಿಚಾರಣಾಧೀನ ನ್ಯಾಯಾಲಯ ಮಾಡಿರುವ ಆದೇಶವು ಕಾನೂನುಬಾಹಿರವಾಗಿರುವುದರಿಂದ ಅದು ಬದಿಗೆ ಸರಿಸಲು ಅರ್ಹವಾಗಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ವಿವರಿಸಿದೆ.

ಧರ್ಮಪ್ರಾಂತ್ಯ ಒಕ್ಕೂಟದ ಎಲ್ಲಾ ಸದಸ್ಯರಿಗೆ ನೋಟಿಸ್‌ ಜಾರಿ ಮಾಡಲಾಗಿಲ್ಲ. ಇಡೀ ಪ್ರಕ್ರಿಯೆಯನ್ನು ಗೌಪ್ಯವಾಗಿ ನಡೆಸಲಾಗಿದೆ. ಸಭೆಯನ್ನು ಪಾರದರ್ಶಕವಾಗಿ ನಡೆಸಿಲ್ಲ. 2022ರ ಡಿಸೆಂಬರ್‌ 21ರಂದು ತಿದ್ದುಪಡಿಗೆ ಅನುಮೋದನೆ ನೀಡುವ ಸಭೆಯಲ್ಲಿ ಬಿಷಪ್‌ಗಳು ಮತ್ತು ಪಾಸ್ಟರ್‌ಗಳು ಭಾಗವಹಿಸಿದ್ದು, ಅವರನ್ನು ಅನರ್ಹಗೊಳಿಸಿದ್ದರೂ ಸಭೆಯಲ್ಲಿ ಭಾಗವಹಿಸಿದ್ದಾರೆ. ತಿದ್ದುಪಡಿಯಿಂದ ವೈಯಕ್ತಿಕವಾಗಿ ಅವರಿಗೆ ಲಾಭವಾಗಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯ ಮಾಡಿರುವ ಮಧ್ಯಂತರ ಆದೇಶ ಚಾಲ್ತಿಯಲ್ಲಿರುವಾಗ 2022ರ ಡಿಸೆಂಬರ್‌ 21ರಂದು ತುರ್ತಾಗಿ ನಿಲುವಳಿ ಜಾರಿ ಮಾಡಲಾಗಿದ್ದು, ಇದು ದುರ್ಬಲವಾಗಿರುವುದರಿಂದ ಅದನ್ನು ಬದಿಗೆ ಸರಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Attachment
PDF
J C Sampath Kumar and Church of South India and others.pdf
Preview

Related Stories

No stories found.
Kannada Bar & Bench
kannada.barandbench.com