ಪಿಎಂಎಲ್ಎ: ಆರೋಪ ನಿರಾಕರಿಸಿದವರ ಮೇಲೆ ಸಾಕ್ಷ್ಯ ರುಜುವಾತಿನ ಹೊಣೆ ಹೊರಿಸುವುದು ಅಪಾಯಕಾರಿ ಎಂದು ಕೇರಳ ಹೈಕೋರ್ಟ್ ಕಳವಳ

ಪಿಎಂಎಲ್ಎ ನಿಯಮಾವಳಿಗಳಡಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಲೈಫ್ ಮಿಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೀಠದಲ್ಲಿ ನಡೆಯಿತು.
Justice A Badharudeen, Kerala HC and PMLA
Justice A Badharudeen, Kerala HC and PMLA

ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2022ರಲ್ಲಿ ನೀಡಿದ್ದ ತೀರ್ಪಿನಲ್ಲಿ ಎತ್ತಿಹಿಡಿಯಲಾದ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ನಿಯಮಾವಳಿಗಳ ಅಡಿಯಲ್ಲಿ ಆರೋಪ ನಿರಾಕರಿಸಿದವರ ಮೇಲೆ ಸಾಕ್ಷ್ಯ ರುಜುವಾತಿನ ಹೊಣೆ ಹೊರಿಸುವ ನಿಯಮದ ಬಗ್ಗೆ ಕೇರಳ ಹೈಕೋರ್ಟ್‌ ಗುರುವಾರ ಕಳವಳ ವ್ಯಕ್ತಪಡಿಸಿದೆ.

ಲೈಫ್ ಮಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತಮ್ಮ ವಿರುದ್ಧ ದಾಖಲಿಸಿರುವ ಪಿಎಂಎಲ್‌ಎ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾ. ಎ ಬದರುದ್ದೀನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
[ವಿಚ್ಛೇದನ] ಪತಿಗೆ ಆಭರಣದ ಹೊಣೆ ಒಪ್ಪಿಸಿದ್ದು ಸಾಬೀತಾದರೆ ಮಾತ್ರ ಮರಳಿ ಪಡೆಯುವ ಹಕ್ಕು ಪತ್ನಿಗಿದೆ: ಕೇರಳ ಹೈಕೋರ್ಟ್

ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಪಿಎಂಎಲ್‌ಎ ನಿಯಮಾವಳಿಗಳನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಪೀಠ ನೀಡಿದ ತೀರ್ಪನ್ನು ಶಿವಶಂಕರ್ ಪರ ಹಾಜರಾದ ಹಿರಿಯ ವಕೀಲ ಜೈದೀಪ್ ಗುಪ್ತಾ ಪ್ರಸ್ತಾಪಿಸಿದರು.

ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆಯೇ ಎಂದು ಸ್ಪಷ್ಟಪಡಿಸುವಂತೆ ನ್ಯಾ. ಬದರುದ್ದೀನ್ ತಿಳಿಸಿದರು. ಆರೋಪಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸುವ ಹೊರೆಯನ್ನು ಪರಿಣಾಮಕಾರಿಯಾಗಿ ವಿಧಿಸುವ ನಿಯಮಾವಳಿಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು ಮೌಖಿಕವಾಗಿ “ಇದು ತುಂಬಾ ಅಪಾಯಕಾರಿಯಾಗಿ ತೋರುತ್ತದೆ” ಎಂದರು.

ಮಾದಕವಸ್ತು ಮತ್ತು ಅಮಲು ಪದಾರ್ಥ ಕಾಯಿದೆಯಂತಹ (ಎನ್‌ಡಿಪಿಎಸ್‌ ಕಾಯಿದೆ) ಬೇರೆ ಕಾಯಿದೆಗಳಲ್ಲಿ ಇದೇ ರೀತಿಯ ನಿಬಂಧನೆಗಳಿದ್ದರೂ ಪಿಎಂಎಲ್‌ಎಯ ಜಾಮೀನಿಗೆ ಸಂಬಂಧಿಸಿದ ಸೆಕ್ಷನ್‌  45ರ ಅಡಿ ಮತ್ತಷ್ಟು ನಿಯಮಗಳನ್ನು ಸೇರಿಸಿರುವುದು ಹೆಚ್ಚು ಸಮಸ್ಯಾತ್ಮಕವಾಗಿದೆ ಎಂದರು. ಪ್ರಕರಣದ ವಿಚಾರಣೆ ಮಾರ್ಚ್‌ 27ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com