ಸಾರ್ವಜನಿಕ ರಸ್ತೆಗಳಲ್ಲಿ ಹಬ್ಬ ಆಚರಣೆಗೆ ಅನುಮತಿ: ನೀತಿ ಪರಾಮರ್ಶಿಸಲು ಇದು ಸಕಾಲ ಎಂದ ಬಾಂಬೆ ಹೈಕೋರ್ಟ್

ಕಾಲ ಮತ್ತು ಬದಲಾಗುತ್ತಿರುವ ಜನಸಮುದಾಯದೊಂದಿಗೆ ಸಂಪ್ರದಾಯ, ಸಾಮಾಜಿಕ ಆಚರಣೆಗಳು ವಿಕಸನಗೊಳ್ಳಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.
ಸಾರ್ವಜನಿಕ ರಸ್ತೆಗಳಲ್ಲಿ ಹಬ್ಬ ಆಚರಣೆಗೆ ಅನುಮತಿ: ನೀತಿ ಪರಾಮರ್ಶಿಸಲು ಇದು ಸಕಾಲ ಎಂದ ಬಾಂಬೆ ಹೈಕೋರ್ಟ್
Published on

ಸಾರ್ವಜನಿಕ ರಸ್ತೆಗಳಲ್ಲಿ ಹಬ್ಬಗಳನ್ನು ಆಚರಿಸಲು ಅನುಮತಿ ನೀಡಬೇಕೇ ಎನ್ನುವುದನ್ನು ಪರಾಮರ್ಶಿಸುವುದಕ್ಕಾಗಿಹಬ್ಬಗಳನ್ನು ನಿಯಂತ್ರಿಸಲು ಇರುವ ನೀತಿಗಳ ಮರುಪರಿಶೀಲನೆ ನಡೆಸುವಂತೆ ಬಾಂಬೆ ಹೈಕೋರ್ಟ್‌ ಬುಧವಾರ ಅಧಿಕಾರಿಗಳು ಮತ್ತು ನೀತಿ ನಿರೂಪಕರನ್ನು ಒತ್ತಾಯಿಸಿದೆ [ಸಚಿನ್ ಡಿ. ಬಸರೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ನಡೆಯುವ ʼಮೊಸರಿನ ಕುಡಿಕೆʼ (ದಹಿ ಹಂಡಿ) ಒಡೆಯುವ ಹಬ್ಬದ ಆಚರಣೆಯನ್ನು ನಿಯಂತ್ರಿಸುತ್ತಿರುವ ವಿಧಾನಗಳ ಬಗ್ಗೆ ನ್ಯಾಯಮೂರ್ತಿಗಳಾದ ಸುನೀಲ್ ಬಿ ಶುಕ್ರೆ ಮತ್ತು ಫಿರ್ದೋಶ್ ಫೆರೋಜ್ ಪೂನಿವಾಲಾ ಅವರಿದ್ದ ವಿಭಾಗೀಯ ಪೀಠ ಕಳವಳ ವ್ಯಕ್ತಪಡಿಸಿತು.

ರಸ್ತೆಯಲ್ಲಿ ಮಾನವ ಪಿರಮಿಡ್‌ ರಚಿಸಿ ಬೆಣ್ಣೆ ಅಥವಾ ಮೊಸರಿನ ಕುಡಿಕೆ ಒಡೆಯುವ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್‌ನಲ್ಲಿ ಹೆಚ್ಚು ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ನಗರದ ಜಾಗವೊಂದರಲ್ಲಿ ʼಮೊಸರು ಕುಡಿಕೆʼ ಕಾರ್ಯಕ್ರಮ ಆಯೋಜಿಸಲು ಅನುಮತಿ ನಿರಾಕರಿಸಿದ ಸ್ಥಳೀಯ ಸಂಸ್ಥೆಯ ಆದೇಶ ಪ್ರಶ್ನಿಸಿ ಶಿವಸೇನಾ ಉದ್ಧವ್‌ ಠಾಕ್ರೆ ಬಣದ ಗುಂಪಿನ ಸದಸ್ಯ ಸಾಗರ್ ಬಸರೆ ಅರ್ಜಿ ಸಲ್ಲಿಸಿದ್ದರು. ಆದರೆ ಆಡಳಿತಾರೂಢ ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವ ಬಣ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿತ್ತು.

Also Read
ಹಜ್ ಧಾರ್ಮಿಕ ಆಚರಣೆ ಸಂವಿಧಾನದಿಂದ ರಕ್ಷಿತ: ಕೇಂದ್ರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಅಂಕುಶ

ವಾದ ಆಲಿಸಿದ ವಿಭಾಗೀಯ ಪೀಠ ಸಾರ್ವಜನಿಕ ರಸ್ತೆ ಅಥವಾ ಸರ್ಕಲ್‌ಗಳಲ್ಲಿ ಮೊಸರಿನ ಕುಡಿಕೆ ಒಡೆಯಲು ಜನರಿಗೆ ಅವಕಾಶ ನೀಡಿದಾಗ ಉಂಟಾಗಬಹುದಾದ ಅನನುಕೂಲತೆ ಮತ್ತು ಸಂಚಾರ ದಟ್ಟಣೆಯನ್ನು ಈಗ ಜಾರಿಯಲ್ಲಿರುವ ನೀತಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ತಿಳಿಸಿದೆ.

“ಜನರು ಹೆಚ್ಚು ಗುಂಪುಗೂಡುವ ಸಾರ್ವಜನಿಕ ಚೌಕಗಳಲ್ಲಿ ಮತ್ತು ಬೀದಿಗಳಲ್ಲಿ ಉತ್ಸವ ಆಚರಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂದು ನೀತಿ ನಿರೂಪಕರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ಇಂತಹ ಆಚರಣೆಗಳನ್ನು ಬಯಲು ಇಲ್ಲವೇ ಸಾರ್ವಜನಿಕ ಮೈದಾನಗಳಿಗೆ ಒತ್ತಾಯಪೂರ್ವಕವಾಗಿ ಸ್ಥಳಾಂತರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನೀತಿ ನಿರೂಪಕರು ಯೋಚಿಸಬೇಕು” ಎಂದು ಅದು ವಿವರಿಸಿದೆ.

ಕಾಲ ಮತ್ತು ಬದಲಾಗುತ್ತಿರುವ ಜನಸಮುದಾಯದೊಂದಿಗೆ  ಸಂಪ್ರದಾಯ, ಸಾಮಾಜಿಕ ಆಚರಣೆಗಳು ವಿಕಸನಗೊಳ್ಳಬೇಕು. ಕಾರ್ಯಕ್ರಮ ಮುಗಿದ ಬಳಿಕ ಆ ಸ್ಥಳವನ್ನು ಮೂಲ ಸ್ಥಿತಿಗೆ ತರಲು ಅಧಿಕಾರಿಗಳು ಮತ್ತು ಕಾರ್ಯಕ್ರಮ ಆಯೋಜಕರು ಕರ್ತವ್ಯ ಪಾಲಿಸಬೇಕು ಎಂದು ಪೀಠ ನುಡಿದಿದೆ.

ಕಲ್ಯಾಣ ನಗರದ ಬೇರೆ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲು ಬಸರೆ ಅವರಿಗೆ ನಿರಾಕ್ಷೇಪಣಾ ಪತ್ರ ನೀಡುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.

Kannada Bar & Bench
kannada.barandbench.com