ಗಲಭೆ ಪ್ರಕರಣ: ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರು ಮಾಡಿದ ಹುಬ್ಬಳ್ಳಿ ನ್ಯಾಯಾಲಯ

ಹಜಾರೇಸಾಬ್‌ ಮಲಿಕ್‌ಸಾಬ್‌ ಅಂಗಡಿ ಅವರು ಸಲ್ಲಿಸಿದ ದೂರಿನ ಅನ್ವಯ ಮೂರನೇ ಆರೋಪಿಯಾಗಿರುವ ಶ್ರೀಕಾಂತ್‌ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 436, 427 ಜೊತೆಗೆ 149 ಅಡಿ ಪ್ರಕರಣ ದಾಖಲಿಸಲಾಗಿದೆ.
ಗಲಭೆ ಪ್ರಕರಣ: ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರು ಮಾಡಿದ ಹುಬ್ಬಳ್ಳಿ ನ್ಯಾಯಾಲಯ

ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ 1992ರಲ್ಲಿ ದೇಶಾದ್ಯಂತ ನಡೆದಿದ್ದ ಗಲಭೆಗಳ ವೇಳೆ ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಕೋಮುಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ್ ಪೂಜಾರಿ ಅವರಿಗೆ ಹುಬ್ಬಳ್ಳಿ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಕಾಂತೇಶ್‌ ಅಲಿಯಾಸ್‌ ಶ್ರೀಕಾಂತ್‌ ಅಲಿಯಾಸ್‌ ಕಾಂತ್ಯ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಅವರು ಇಂದು ಪ್ರಕಟಿಸಿದರು.

ಅರ್ಜಿದಾರರು 1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌, ಅಷ್ಟೇ ಮೊತ್ತದ ಇಬ್ಬರ ಭದ್ರತೆ ಒದಗಿಸಬೇಕು. ಸಂಕಷ್ಟದ ಸಂದರ್ಭ ಹೊರತುಪಡಿಸಿ ವಿಚಾರಣೆಯ ಎಲ್ಲಾ ದಿನವು ನ್ಯಾಯಾಲಯಕ್ಕೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಸಾಕ್ಷ್ಯ ತಿರುಚಬಾರದು ಮತ್ತು ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು. ಅನುಮತಿ ಇಲ್ಲದೇ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಹಜರೇಸಾಬ್‌ ಮಲಿಕ್‌ಸಾಬ್‌ ಅಂಗಡಿ ಅವರು ಸಲ್ಲಿಸಿದ ದೂರಿನ ಅನ್ವಯ ಮೂರನೇ ಆರೋಪಿಯಾಗಿರುವ ಶ್ರೀಕಾಂತ್‌ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 436, 427 ಜೊತೆಗೆ 149 ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಸಂಬಂಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.ಮುಂದೆ ಪ್ರಕರಣವನ್ನು ವಿಭಜಿಸಿ ಶ್ರೀಕಾಂತ್‌ ಮತ್ತಿತರರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂದು ಅರ್ಜಿದಾರರು ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ ಹೇಳಲಾಗಿತ್ತು. ಮುಂದುವರೆದು ಇತರೆ ಆರೋಪಿಗಳ ವಿರುದ್ಧದ ಮೂಲ ಪ್ರಕರಣವನ್ನು ಸತ್ರ ನ್ಯಾಯಾಲಯ ಇತ್ಯರ್ಥಪಡಿಸಿದ್ದು, ಆರೋಪಿಗಳನ್ನು ಖುಲಾಸೆಗಳಿಸಿತ್ತು. ಈ ಪ್ರಕರಣದ ದೂರು ಮತ್ತು ಎಫ್‌ಐಆರ್‌ ಅನ್ನು ನಾಶಪಡಿಸಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

Also Read
ಗಲಭೆ ಪ್ರಕರಣ: ಶ್ರೀಕಾಂತ ಪೂಜಾರಿ ಜಾಮೀನು ಆದೇಶ ಕಾಯ್ದಿರಿಸಿದ ಹುಬ್ಬಳ್ಳಿ ನ್ಯಾಯಾಲಯ

ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಶ್ರೀಕಾಂತ್‌ನನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಅವರನ್ನು ಡಿಸೆಂಬರ್‌ 29ರಂದು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

ಶ್ರೀಕಾಂತ್‌ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಈಗ ಜಾಮೀನು ನೀಡಿದರೆ ನ್ಯಾಯಾಲಯಕ್ಕೆ ಗೈರಾಗುವ ಸಾಧ್ಯತೆ ಇರುತ್ತದೆ. ಶ್ರೀಕಾಂತ್‌ ಅವರ ವಿರುದ್ಧ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ 13 ಕ್ರಿಮಿನಲ್‌ ಪ್ರಕರಣ ಹಾಗೂ 3 ಮುಂಜಾಗ್ರತ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. 

Related Stories

No stories found.
Kannada Bar & Bench
kannada.barandbench.com