

ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಾಂತ್ ಅಲಿಯಾಸ್ ಶ್ರೀಕಿ ಸ್ನೇಹಿತನಾದ ರಾಬಿನ್ ಖಂಡೇಲವಾಲ್ ಅವರು ತಮ್ಮ ವಿರುದ್ಧದ ವಂಚನೆ ಮತ್ತು ನಂಬಿಕೆ ದ್ರೋಹ ಪ್ರಕರಣ ರದ್ದತಿ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಜಯನಗರದ ಶ್ರೀಕಾಂತ್ ಮತ್ತು ಪಶ್ಚಿಮ ಬಂಗಾಳದ ಮೂಲದವನಾದ ಬಿಟ್ ಕಾಯಿನ್ ಟ್ರೇಡರ್ ರಾಬಿನ್ ಖಂಡೇಲವಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈಚೆಗೆ ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ ಪೀಠವು ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರಿಗೆ ದಾಖಲೆಗಳನ್ನು ಪರಿಶೀಲಿಸಿ ವಾದಿಸುವಂತೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: 2019ರಲ್ಲಿ ಕೃಷ್ಣ ಹಾಗೂ ರಾಬಿನ್ ಖಂಡೇಲವಾಲ್ ಅವರು ಭೇಟಿಯಾಗಿ ₹28 ಲಕ್ಷ ನೀಡಿದರೆ ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಿ ₹28 ಲಕ್ಷದ ಜೊತೆ ₹17 ಲಕ್ಷ ಸೇರಿಸಿ ಒಟ್ಟು ₹45 ಲಕ್ಷ ನೀಡುತ್ತೇವೆ ಎಂದು ಖಾತೆ ನಂಬರ್ ಒಂದನ್ನು ನೀಡಿದ್ದರು. ಅದಕ್ಕೆ ತಾಂತ್ರಿಕ ತೊಂದರೆಯಿಂದಾಗಿ ಹಣ ಹೋಗಿರಲಿಲ್ಲ. ಹೀಗಾಗಿ, ಆನಂತರ ಅಜಿತ್ ಖಂಡೇಲವಾಲ್ ಎಂಬಾತನ ಖಾತೆ ನಂಬರ್‌ಗೆ ಹಣ ಹಾಕುವಂತೆ ಆರೋಪಿಗಳು ಸೂಚಿಸಿದ್ದರು. ಅದರಂತೆಯೇ ಅಜಿತ್ ಖಾತೆಗೆ ಹಣ ವರ್ಗಾಯಿಸಲಾಗಿತ್ತು. ಒಂದು ತಿಂಗಳ ನಂತರ ಹಣ ಕೇಳಿದಾಗ ಸ್ವಲ್ಪ ದಿನಗಳಲ್ಲೇ ವಾಪಸ್ ಮಾಡುವುದಾಗಿ ಹೇಳಿ, ಆನಂತರ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರಿನ ಇಂದಿರಾ ನಗರದ ಯಶೋದಾ ದೇವಿ ದೂರು ನೀಡಿದ್ದರು. ಇದರ ಅನ್ವಯ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ರುಬಿಟ್ ಆನ್‌ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ರಾಬಿನ್ ಖಂಡೇವಾಲ್ ಮತ್ತು ಅಜಿತ್ ಖಂಡೇಲವಾಲ್ ವಿರುದ್ಧ ಅಶೋಕ ನಗರ ಠಾಣೆಯಲ್ಲಿ 2020ರ ನವೆಂಬರ್ 19ರಂದು ಐಪಿಸಿ ಸೆಕ್ಷನ್‌ಗಳಾದ 406,420ರ ಅಡಿ ಪ್ರಕರಣ ದಾಖಲಾಗಿತ್ತು.
ಈ ಎಫ್‌ಐಆರ್ ಮತ್ತು ಅದರ ಸಂಬಂಧ 10.02.2021ರಂದು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ವಜಾಗೊಳಿಸುವಂತೆ ಶ್ರೀಕಿ ಮತ್ತು ರಾಬಿನ್ ಕೋರಿದ್ದಾರೆ.
ಶ್ರೀಕಿ ಮತ್ತು ರಾಬಿನ್ ಖಂಡೇಲವಾಲ್ ವಿರುದ್ಧ ಮಾದಕವ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಹಾಗೂ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ಹಲವು ಎಫ್‌ಐಆರ್ ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳಲ್ಲಿ ರಾಬಿನ್ ಜಾಮೀನಿನ ಮೇಲೆ ಹೊರಗಿದ್ದಾರೆ.