ಅದಾನಿ ಪರ ಆದೇಶ ಪ್ರಶ್ನಿಸಿ ಪತ್ರಕರ್ತ ಠಾಕೂರ್ತ ಸಲ್ಲಿಸಿದ್ದ ಅರ್ಜಿ ತುರ್ತು ಆಲಿಸಲು ದೆಹಲಿ ನ್ಯಾಯಾಲಯ ನಕಾರ

"ನಿಮ್ಮ ಕಕ್ಷಿದಾರರು ಎರಡು ದಿನಗಳವರೆಗೆ ಅದಾನಿ ಅವರ ಸುದ್ದಿ ಪ್ರಕಟಿಸದೆ ಇದ್ದರೆ ಏನಾಗುತ್ತದೆ? ಅದು ಜೀವನ್ಮರಣದ ವಿಷಯವೇ?" ಎಂದು ಠಾಕುರ್ತಾ ಪರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿತು.
Rohini District Court
Rohini District Court
Published on

ಉದ್ಯಮಿ ಗೌತಮ್ ಅದಾನಿಯವರಿಗೆ ಸೇರಿದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್‌) ವಿರುದ್ಧ ಯಾವುದೇ ಮಾನಹಾನಿ ವಿಚಾರ ಪ್ರಕಟಿಸದಂತೆ ದೆಹಲಿ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿದ ಆದೇಶ ಪ್ರಶ್ನಿಸಿ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ನ್ಯಾಯಾಲಯ ಬುಧವಾರ ನಿರಾಕರಿಸಿದೆ.

ಸೆಪ್ಟೆಂಬರ್ 6 ರಂದು ತಡೆಯಾಜ್ಞೆ ಹೊರಡಿಸಲಾಗಿದ್ದು, ಇಂದಿನ ಬದಲು ನಾಳೆ (ಸೆಪ್ಟೆಂಬರ್ 18 ಗುರುವಾರ) ವಿಚಾರಣೆ ನಡೆಸಬಹುದು ಎಂದು ರೋಹಿಣಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ರಾಕೇಶ್ ಕುಮಾರ್ ಸಿಂಗ್ ಹೇಳಿದರು.

Also Read
ಉದ್ಯಮಿ ಅದಾನಿ ವಿರುದ್ಧ ಅವಹೇಳನ ಸುದ್ದಿ ಪ್ರಕಟಿಸದಂತೆ ಆದೇಶ: ಮೇಲ್ಮನವಿ ಸಲ್ಲಿಸಿದ ಠಾಕೂರ್ತಾ ಮತ್ತಿತರ ಪತ್ರಕರ್ತರು

ಪ್ರಕರಣವನ್ನು ಆರಂಭದಲ್ಲಿ ಜಿಲ್ಲಾ ನ್ಯಾಯಾಧೀಶ ಸುನಿಲ್ ಚೌಧರಿ ಅವರು ವಿಚಾರಣೆ ನಡೆಸಬೇಕಿತ್ತು. ಆದರೆ, ಅವರು ರಜೆಯ ಮೇಲೆ ತೆರಳಿರುವುದರಿಂದ ಅದನ್ನು ನ್ಯಾಯಾಧೀಶ ಸಿಂಗ್ ಅವರಿಗೆ ವರ್ಗಾಯಿಸಲಾಯಿತು.

ಪ್ರಕರಣದ ವಿಚಾರಣೆ ನಡೆಸುವಾಗ, ನ್ಯಾಯಾಧೀಶ ಸಿಂಗ್ ಅವರು ಪ್ರಕರಣವನ್ನು ತುರ್ತಾಗಿ ಏಕೆ ಆಲಿಸಬೇಕು ಮತ್ತು ನಿಯಮಿತ ಪ್ರಕರಣಗಳ ನ್ಯಾಯಾಧೀಶರು ಅದರ ವಿಚಾರಣೆ ನಡೆಸಬಾರದೇಕೆ ಎಂದು ಪ್ರಶ್ನಿಸಿದರು.

"ನಿಮ್ಮ ಕಕ್ಷಿದಾರರು ಎರಡು ದಿನಗಳವರೆಗೆ ಅದಾನಿ ಅವರಿಗೆ ಸಂಬಂಧಿಸಿದ ಸುದ್ದಿ ಪ್ರಕಟಿಸದೆ ಇದ್ದರೆ ಏನಾಗುತ್ತದೆ?  ಅದು ಜೀವನ್ಮರಣದ ವಿಷಯವೇ? ಪ್ರಕಟಿತ ಸುದ್ದಿಯನ್ನು ತೆಗೆದುಹಾಕಿದರೆ ಏನಾಗಬಹುದು? ಕಕ್ಷಿದಾರರ ವ್ಯವಹಾರಕ್ಕೆ ತೊಂದರೆಯಾಗುತ್ತದೆಯೇ? ನಾಳೆ ಬೆಳಿಗ್ಗೆ 10 ಗಂಟೆಗೆ ಪ್ರಕರಣದ ವಿಚಾರಣೆ ನಡೆಸಿದರೆ ಏನಾದರೂ ಆಗುತ್ತದೆಯೇ?" ಎಂದು ಪರಂಜಯ್ ಗುಹಾ ಠಾಕುರ್ತಾ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿತು.

 ಈ ಮಧ್ಯೆ ಠಾಕೂರ್ತಾ ಪರ ವಾದ ಮಂಡಿಸಿದ ಹಿರಿಯ ವಕೀಲ ತ್ರಿದೀಪ್‌ ಪೈಸ್‌ ನ್ಯಾಯಾಲಯ ಠಾಕೂರ್ತಾ ಅವರ ವಾದ ಆಲಿಸದೆಯೇ ವಿಶಾಲ ಆದೇಶ ನೀಡಿದೆ ಎಂದು ಹೇಳಿದರು.

"ವರದಿಯ ಯಾವ ಭಾಗ, ಅಥವಾ ಯುಆರ್‌ಎಲ್‌ ಮಾನಹಾನಿಕರವಾಗಿದೆ ಎಂಬುದನ್ನು ನ್ಯಾಯಾಲಯ ಹೇಳಿಲ್ಲ. ಯಾವುದು ಸುಳ್ಳು, ಅವಹೇಳನಕರ ಸುದ್ದಿ ಹಾಗೂ ತಾನೇಕೆ ಪ್ರತಿಬಂಧಕಾಜ್ಞೆ ಹೊರಡಿಸಿದೆ ಎಂಬುದನ್ನು ನ್ಯಾಯಾಲಯ ವಿವರಿಸಿಲ್ಲ. ಯಾವುದು ಮಾನಹಾನಿಕರವಾಗಿದೆ ಎಂಬುದನ್ನು ತೋರಿಸುವುದು ಅರ್ಜಿದಾರರ ಕರ್ತವ್ಯ ಮತ್ತು ಯಾವುದು ಮಾನಹಾನಿಕರವಾಗಿದೆ ಎಂಬುದರ ಕುರಿತು ತೀರ್ಪು ನೀಡುವುದು ನ್ಯಾಯಾಲಯದ ಕರ್ತವ್ಯ" ಎಂದು ಅವರು ವಿವರಿಸಿದರು.

Also Read
ಉದ್ಯಮಿ ಅದಾನಿ ಅವಹೇಳನ ಸುದ್ದಿ ಪ್ರಕಟಿಸದಂತೆ ಪತ್ರಕರ್ತ ಠಾಕೂರ್ತಾ, ಹೋರಾಟಗಾರರಿಗೆ ದೆಹಲಿ ನ್ಯಾಯಾಲಯ ನಿರ್ಬಂಧ

ಅದಾನಿ ಎಂಟರ್‌ಪ್ರೈಸಸ್ ಪರ ಹಾಜರಾದ ಹಿರಿಯ ವಕೀಲ ಅನುರಾಗ್ ಅಹ್ಲುವಾಲಿಯಾ, ಪ್ರಕರಣವನ್ನು ತುರ್ತಾಗಿ ಆಲಿಸುವ ಅಗತ್ಯವಿಲ್ಲ ಅದನ್ನು ನ್ಯಾಯಾಧೀಶ ಸಿಂಗ್ ಅವರೇ ವಿಚಾರಣೆ ನಡೆಸಬೇಕು ಎಂದು ವಾದಿಸಿದರು."ನಾಳೆ ಮತ್ತೊಂದು ಮೇಲ್ಮನವಿ ಬರಲಿದೆ. ಯಾವುದೇ ತುರ್ತು ಇಲ್ಲ" ಎಂದು ಅಹ್ಲುವಾಲಿಯಾ ಹೇಳಿದರು. ಅಂತಿಮವಾಗಿ, ನ್ಯಾಯಾಲಯ ಅದನ್ನು ನಾಳೆ ವಿಚಾರಣೆಗೆ ಪಟ್ಟಿ ಮಾಡಿತು.

ಕೆಲ ಪತ್ರಕರ್ತರು ಮತ್ತು ಹೋರಾಟಗಾರರು ಭಾರತ ವಿರೋಧಿ ಹಿತಾಸಕ್ತಿಗಳೊಂದಿಗೆ ಸೇರಿಕೊಂಡು ಕಂಪನಿ ಮತ್ತು ಬ್ರ್ಯಾಂಡ್ ಇಂಡಿಯಾ ವರ್ಚಸ್ಸಿಗೆ, ಬ್ರಾಂಡ್‌ ಈಕ್ವಿಟಿ ಹಾಗೂ ವಿಶ್ವಾಸಾರ್ಹತೆಗೆ ಭಾರೀ ಹಾನಿ ಉಂಟುಮಾಡಿದ್ದು ಆ ಮೂಲಕ ತನ್ನ ಪಾಲುದಾರರಿಗೆ ಶತಕೋಟಿ ಡಾಲರ್‌ಗಳಷ್ಟು ನಷ್ಟ ಉಂಟುಮಾಡಿದ್ದಾರೆ ಎಂದು ಗೌತಮ್ ಅದಾನಿಯವರ ಕಂಪನಿ ಈ ಹಿಂದೆ ಮಾನನಷ್ಟ ಮೊಕದ್ದಮೆ ಹೂಡಿತ್ತು.

ವಾದ ಆಲಿಸಿದ್ದ ರೋಹಿಣಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಅವಹೇಳನ ಸುದ್ದಿ ಪ್ರಕಟಿಸದಂತೆ ಪತ್ರಕರ್ತ ಠಾಕೂರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತಾ, ಆಯಸ್ಕಾಂತ್ ದಾಸ್, ಆಯುಷ್ ಜೋಶಿ ಮತ್ತಿತರರಿಗೆ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಪತ್ರಕರ್ತರು ಜಿಲ್ಲಾ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಒಂದು ಮೇಲ್ಮನವಿಯನ್ನು ಠಾಕುರ್ತಾ ಸಲ್ಲಿಸಿದ್ದರೆ, ಇನ್ನೊಂದು ಮೇಲ್ಮನವಿಯನ್ನು ರವಿ ನಾಯರ್, ಅಬೀರ್ ದಾಸ್‌ಗುಪ್ತಾ, ಅಯಸ್ಕಾಂತ್ ದಾಸ್ ಮತ್ತು ಆಯುಷ್ ಜೋಶಿ ಒಟ್ಟಾಗಿ ಸಲ್ಲಿಸಿದ್ದರು.

Kannada Bar & Bench
kannada.barandbench.com