ರೌಡಿ ಶೀಟರ್‌ ಬಿಕ್ಲು ಶಿವು ಕೊಲೆ: ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ತನಿಖೆಗೆ ಹಾಜರಾಗಲು ನಿರ್ದೇಶಿಸಿದ ಹೈಕೋರ್ಟ್‌

ಪೊಲೀಸರು ಕಡ್ಡಾಯವಾಗಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 35 (3)(4)(5) ಮತ್ತು ಅರ್ನೇಶ್‌ ಕುಮಾರ್‌, ಸತೀಂದರ್‌ ಕುಮಾರ್‌ ಆಂಟಿಲ್‌ ಮತ್ತು ಅರ್ನಾಬ್‌ ಗೋಸ್ವಾಮಿ ಪ್ರಕರಣದಲ್ಲಿನ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಆದೇಶಿಸಿದ ಹೈಕೋರ್ಟ್‌.
Byrati Basavaraj & HC
Byrati Basavaraj & HC
Published on

ರೌಡಿ ಶೀಟರ್‌ ಬಿಕ್ಲು ಶಿವ ಅಲಿಯಾಸ್‌ ಶಿವಪ್ರಕಾಶ್‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿಯ ಕೆ ಆರ್‌ ಪುರಂ ಶಾಸಕ ಬೈರತಿ ಬಸವರಾಜ್ ಅವರಿಗೆ ಶನಿವಾರ ಭಾರತಿನಗರ ಠಾಣೆಯ ಪೊಲೀಸರ ಮುಂದೆ ತನಿಖೆಗೆ ಹಾಜರಾಗುವಂತೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. ಆದರೆ, ಪೊಲೀಸರು ಕಡ್ಡಾಯವಾಗಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3) ಅಡಿಯ ಕ್ರಮಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.

ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜ್ ಅವರು ಪೊಲೀಸರು ತನಿಖೆಗೆ ಹಾಜರಾಗುವಂತೆ ನೀಡಿರುವ ನೋಟಿಸ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice S R Krishna Kumar
Justice S R Krishna Kumar

“ಬೈರತಿ ಬಸವರಾಜ್‌ ಶನಿವಾರ ಬೆಳಿಗ್ಗೆ 11.30ಕ್ಕೆ ಭಾರತಿನಗರ ಠಾಣೆಯಲ್ಲಿ ಪೊಲೀಸರ ಮುಂದೆ ತನಿಖೆಗೆ ಹಾಜರಾಗಬೇಕು. ಪೊಲೀಸರು ಕಡ್ಡಾಯವಾಗಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 35 (3)(4)(5) ಮತ್ತು ಅರ್ನೇಶ್‌ ಕುಮಾರ್‌, ಸತೀಂದರ್‌ ಕುಮಾರ್‌ ಆಂಟಿಲ್‌ ಮತ್ತು ಅರ್ನಾಬ್‌ ಗೋಸ್ವಾಮಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ನೀಡಿರುವ ತೀರ್ಪಿನ ನಿದೇಶನಗಳನ್ನು ಪಾಲಿಸಬೇಕು. ರಾಜ್ಯ ಸರ್ಕಾರವು ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು” ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಪ್ರಕರಣಕ್ಕೆ ನಾವು ತಡೆಯಾಜ್ಞೆ ಕೋರುತ್ತಿಲ್ಲ. ಬಸವರಾಜ್‌ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಲಿದ್ದಾರೆ. ಬಂಧಿಸದಂತೆ ರಕ್ಷಣೆ ಕೋರುತ್ತಿದ್ದೇವೆ. ನಾಲ್ಕು ಬಾರಿ ಶಾಸಕರಾಗಿರುವ ಬಸವರಾಜ್‌ ಅವರು ಎಲ್ಲಿಯೂ ಪರಾರಿಯಾಗುವುದಿಲ್ಲ. ಬಿಕ್ಲು ಶಿವ ಒಬ್ಬ ರೌಡಿ ಶೀಟರ್‌ ಆಗಿದ್ದು, ಅವನ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು. ಆತ ಬೆದರಿಕೆ ಇದೆ ಎಂದು ದಾಖಲಿಸಿದ್ದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಬಿಕ್ಲು ಶಿವನ ತಾಯಿ 8-9 ಮಂದಿ ಮಗನ ಮೇಲೆ ಹಲ್ಲೆ ನಡೆಸಿ ಬಿಳಿಯ ಸ್ಕಾರ್ಪಿಯೊನಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದು, ಬೈರತಿ ಬಸವರಾಜ್‌ ಇರಲಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಅದಾಗ್ಯೂ, ಪೊಲೀಸರು ಬೈರತಿ ಬಸವರಾಜ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ” ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು “ಈ ಹಿಂದೆ ಬಿಕ್ಲು ಶಿವುಗೆ ಬೆದರಿಕೆ ಹಾಕಿರುವ ಸಂಬಂಧ ಪ್ರಕರಣ ದಾಖಲಾಗಿದ್ದು, ಈಗ ಆತನ ಕೊಲೆಯಾಗಿದೆ. ಇದು ಕೊಲೆ ಪ್ರಕರಣವಾಗಿರುವುದರಿಂದ ಆದಷ್ಟು ಬೇಗ ಸಾಕ್ಷಿ ಸಂಗ್ರಹಿಸಬೇಕಿದೆ. ಪೊಲೀಸರು ಕಾನೂನಿನ ಅನುಸಾರ ನಡೆಯಲಿದ್ದಾರೆ. ಬೈರತಿ ಬಸವರಾಜ್‌ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದ್ದು, ಕೊಲೆ ಪ್ರಕರಣಗಳಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪಿರುವುದರಿಂದ ನ್ಯಾಯಾಲಯ ಯಾವುದೇ ಆದೇಶ ಮಾಡಬಾರದು. ಪ್ರಕರಣವನ್ನು ಪೊಲೀಸರ ವಿವೇಚನೆಗೆ ಬಿಡಬೇಕು. ನಿರೀಕ್ಷಣಾ ಜಾಮೀನು ಸೇರಿದಂತೆ ಒಂದೊಮ್ಮೆ ಬಂಧನವಾದರೆ ಕಾನೂನಿನ ಅನ್ವಯ ರಕ್ಷಣೆ ಪಡೆಯಲು ಅವರಿಗೆ ಅವಕಾಶ ಇದೆ” ಎಂದರು.

ಇದನ್ನು ಆಲಿಸಿದ ಪೀಠವು ತನಿಖೆಗೆ ಸಹಕರಿಸಲು ಸೂಚಿಸಿ, ಪೊಲೀಸರಿಗೆ ಕಾನೂನಿನ ಅನ್ವಯ ನಡೆಯುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ಮಂಗಳವಾರ ರಾತ್ರಿ ರೌಡಿಶೀಟರ್‌ ಬಿಕ್ಲು ಶಿವ ಅಲಿಯಾಸ್‌ ಶಿವಪ್ರಕಾಶ್‌ ಕೊಲೆ ಆರೋಪದ ಮೇಲೆ ಜಗದೀಶ್‌, ಕಿರಣ್‌, ವಿಮಲ್‌, ಅನಿಲ್‌ ಮತ್ತು ಬೈರತಿ ಬಸವರಾಜ್‌ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್‌ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಐವರ ವಿರುದ್ಧಬಿಎನ್‌ಎಸ್‌ ಸೆಕ್ಷನ್‌ 103, 190 ಅಡಿ ಪ್ರಕರಣ ದಾಖಲಾಗಿದೆ.

Kannada Bar & Bench
kannada.barandbench.com