

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿರುವ ಖಾಸಗಿ ದೂರಿನ ಸಂಜ್ಞೆ ಪರಿಗಣಿಸಿರುವ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ರದ್ದತಿ ಕೋರಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅರ್ಜಿಗಳನ್ನು ವಿಚಾರಣೆ ನಡೆಸಲು ಗುರುವಾರ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್ ಬೆಂಗಳೂರು ಸತ್ರ (ಸೆಷನ್ಸ್) ನ್ಯಾಯಾಲಯದ ಮೊರೆ ಹೋಗುವಂತೆ ನಿರ್ದೇಶಿಸಿದೆ.
ಪ್ರಿಯಾಂಕ್ ಖರ್ಗೆ, ನಲಪಾಡ್ ಮತ್ತು ಎರಡನೇ ಆರೋಪಿಯಾಗಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಸಂಜ್ಞೇ ಪರಿಗಣಿಸುವಂತೆ ಕೋರಿ ದೂರುದಾರ ಎ ತೇಜಸ್ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠವು ಇತ್ಯರ್ಥಪಡಿಸಿತು.
“ಮ್ಯಾಜಿಸ್ಟ್ರೇಟ್ ಆದೇಶವನ್ನು ಸತ್ರ ನ್ಯಾಯಾಲಯದಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿಯ ಮೂಲಕ ಪ್ರಶ್ನಿಸಬಹುದಾಗಿದೆ. ಹೀಗಿರುವಾಗ ಇಲ್ಲಿಗೆ ಏಕೆ ಬರುತ್ತೀರಿ? ಸತ್ರ ನ್ಯಾಯಾಲಯದಲ್ಲಿ ಪರ್ಯಾಯ ಪರಿಹಾರವಿದೆ. ಇಲ್ಲಿ ನಾನು ನನ್ನ ಸಮಯ ವ್ಯರ್ಥ ಮಾಡುತ್ತಿದ್ದೇನೆ” ಎಂದು ಪೀಠವು ಅರ್ಜಿದಾರರ ಪರ ವಕೀಲರ ವಿರುದ್ಧ ಬೇಸರ ವ್ಯಕ್ತಪಡಿಸಿತು.
ಮಾಜಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಸಂಜ್ಞೇ ಪರಿಗಣಿಸದಿರುವುದನ್ನು ಪ್ರಶ್ನಿಸಿದ್ದ ತೇಜಸ್ ಅವರಿಗೂ ನ್ಯಾಯಾಲಯವು ಸತ್ರ ನ್ಯಾಯಾಲಯದಲ್ಲಿ ಪರಿಹಾರ ಪಡೆಯುವಂತೆ ನಿರ್ದೇಶಿಸಿತು. ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಲು ನಿರ್ದೇಶಿಸುವ ಅಧಿಕಾರ ಸತ್ರ ನ್ಯಾಯಾಲಯಕ್ಕೆ ಇದೆ ಎಂದು ಪೀಠವು ಆದೇಶಿಸಿತು.
ಪ್ರಿಯಾಂಕ್ ಮತ್ತು ನಲಪಾಡ್ ಅವರನ್ನು ಹಿರಿಯ ವಕೀಲರಾದ ಸಂದೇಶ್ ಚೌಟ ಮತ್ತು ವಿಕ್ರಮ್ ಹುಯಿಲಗೋಳ ಪ್ರತಿನಿಧಿಸಿದ್ದರು. ದೂರುದಾರ ತೇಜಸ್ ಅವರನ್ನು ವಕೀಲ ವೆಂಕಟೇಶ್ ದಳವಾಯಿ ಪ್ರತಿನಿಧಿಸಿದ್ದರು.
ಪ್ರಕರಣದ ಹಿನ್ನೆಲೆ: 04.10.2025ರಂದು ಪ್ರಿಯಾಂಕ್ ಖರ್ಗೆ ಅವರು “ಆರ್‌ಎಸ್‌ಎಸ್‌ನವರು ಸರ್ಕಾರಿ ಜಾಗಗಳು ಮತ್ತು ಶಾಲಾ ಆವರಣದಲ್ಲಿ ಯಾವುದೇ ರೀತಿಯ ಸಮಾರಂಭ ಮತ್ತು ಚಟುವಟಿಕೆಗಳನ್ನು ಮಾಡದಂತೆ ನಿಷೇಧಿಸಬೇಕು. ಅವರು ಜನರಿಗೆ ತಪ್ಪು ಸಂದೇಶ ಕೊಡುತ್ತಿದ್ದು, ದೇಶಕ್ಕೆ ಮಾರಕವಾಗಿದ್ದಾರೆ. ಯುವಕರನ್ನು ತಪ್ಪು ದಾರಿಯಲ್ಲಿ ಕರೆದೊಯ್ಯುತ್ತಿದ್ದಾರೆ” ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು ಎಂದು ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
14.10.2025ರಂದು “ನಿಮ್ಮ ಮನೆಯಲ್ಲಿ ನಿಮ್ಮ ಅಣ್ಣ, ತಮ್ಮಂದಿರು, ಗೆಳೆಯರು, ಬಂಧು-ಬಳಗದವರು ಯಾರಾದರೂ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಅವರೊಂದಿಗಿನ ಸಂಬಂಧ ಕಡಿತ ಮಾಡಿ” ಎಂದು ಪೋಸ್ಟ್ ಮಾಡಿದ್ದರು ಎಂದು ವಿವರಿಸಲಾಗಿದೆ.
ಇದಾದ ಎರಡು ದಿನಗಳ ಬಳಿಕ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು ಎಕ್ಸ್‌ನಲ್ಲಿ “ಗೌರಿ ಲಂಕೇಶ್, ಪಾನ್ಸರೆ ಮತ್ತು ಎಂ ಎಂ ಕಲಬುರ್ಗಿ ಅವರನ್ನು ಆರ್‌ಎಸ್‌ಎಸ್‌ನವರು ಹತ್ಯೆ ಮಾಡಿದ್ದಾರೆ. ಅವರೇ ನೇರ ಹೊಣೆಗಾರರಾಗಿದ್ದು, ತಾಲಿಬಾನ್ ಸಂಸ್ಕೃತಿಯವರಾಗಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು ಎಂದು ಆಕ್ಷೇಪಿಸಲಾಗಿದೆ.
ಇನ್ನು, ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರು “ಆರ್‌ಎಸ್‌ಎಸ್‌ನವರ ಚಡ್ಡಿಯಲ್ಲಿ ತಾಕತ್ತು ಇಲ್ಲ” ಎಂದಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಆರ್‌ಎಸ್‌ಎಸ್ ಮಾನಹಾನಿ ಮಾಡಲಾಗಿದ್ದು, ಲಕ್ಷಾಂತರ ಕಾರ್ಯಕರ್ತರ ಭಾವನೆಗಳಿಗೆ ಘಾಸಿಯಾಗಿದೆ ಎಂದು ಖಾಸಗಿ ದೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಬೆಂಗಳೂರಿನ ಎ ತೇಜಸ್ ದೂರಿದ್ದರು. ಇದನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಿತ್ತು.